ಉಳ್ಳಾಲ: ಅಕಾಲಿಕವಾಗಿ ನಿಧನರಾದ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ ಶರತ್ ಕಾಜವ (55) ಅವರ ಅಂತಿಮಯಾತ್ರೆಯಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಭಾನುವಾರ ಭಾಗವಹಿಸಿದ್ದರು. ಅಂತ್ಯಸಂಸ್ಕಾರಕ್ಕೆ ಮೃತದೇಹ ಸಾಗಿಸುವಾಗ ಹೆಗಲುಕೊಡುವ ಮೂಲಕ ಖಾದರ್ ಅವರು ಮಾನವೀಯತೆ ಮೆರೆದಿದ್ದಾರೆ.
ಮುಡಿಪು ಮಿತ್ತಕೋಡಿ ನಿವಾಸಿ ಶರತ್ ಕಾಜವ ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ವಿಚಾರ ಬೆಳಕಿಗೆ ಬರುತ್ತಿದ್ದಂತೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಪೂರ್ವನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸಿ ತಕ್ಷಣವೇ ಮಿತ್ತಕೋಡಿಯ ಮೃತ ಶರತ್ ಕಾಜವ ನಿವಾಸಕ್ಕೆ ದೌಡಾಯಿಸಿದ್ದರು. ಸಂಬಂಧಿಕರಲ್ಲಿ ಧೈರ್ಯ ತುಂಬಿದ ಅವರು ನಂತರ ನಡೆದ ಅಂತಿಮಯಾತ್ರೆಗೆ ಹೆಗಲಾದರು. ಈ ಮೂಲಕ ಕಾಂಗ್ರೆಸ್‌ನ ಹಿರಿಯ ಮುತ್ಸದ್ದಿ ಜನಾರ್ದನ ಪೂಜಾರಿ ಅವರು ಹಾಕಿಕೊಟ್ಟ ಸಂಪ್ರದಾಯವನ್ನು ಮುಂದುವರಿಸಿದ ಶಾಸಕರು ಎಂಬ ಕೀರ್ತಿಗೆ ಯು.ಟಿ. ಖಾದರ್ ಭಾಜನರಾಗಿದ್ದಾರೆ.
ಇದನ್ನೂ ಓದಿ | bamul: ಹೇಳ್ದೇ ಕೇಳ್ದೇ ನಿರ್ಧಾರ ಮಾಡಿದ್ರೆ ಸರಿ ಇರೋಲ್ಲ: ಹಾಲಿನ ಸಬ್ಸಿಡಿ ಇಳಿಸಿದ ಬಮುಲ್‌ಗೆ ಸಿದ್ದರಾಮಯ್ಯ ವಾರ್ನಿಂಗ್
ನರಿಂಗಾನ ಕಂಬಳದ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಸಹೋದರ, ಪ್ರಗತಿಪರ ಕೃಷಿಕ ವೆಂಕಪ್ಪ ಕಾಜವರ ಪುತ್ರ. ಕಂಬಳ ಸಮಿತಿಯ ಸದಸ್ಯರೂ ಆಗಿದ್ದ ಶರತ್ ಕಾಜವ ಮಿತ್ತಕೋಡಿ ಕಂಬಳದ ಯಶಸ್ಸಿಗಾಗಿ ಹಲವು ವಾರಗಳ ಕಾಲ ದುಡಿದಿದ್ದರು. ತಾಯಿಯ ಅನಾರೋಗ್ಯವಿದ್ದಾಗಲೂ ಕಂಬಳದಲ್ಲಿ ಆಗಬೇಕಾದ ವ್ಯವಸ್ಥೆ ಬಗ್ಗೆ ಕಾಳಜಿ ವಹಿಸಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಪತ್ನಿ, ಪುತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.