Site icon Vistara News

UT Khader: ಉಡುಪಿ ಶ್ರೀಕೃಷ್ಣನಲ್ಲಿಗೆ ಸ್ಪೀಕರ್‌ ಖಾದರ್‌ ಭೇಟಿ; ಪ್ರಾರ್ಥಿಸಿದ್ದೇನು?

ut khader in udupi krishna mutt

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ (Udupi Krishna Temple) ಇಂದು ಮುಂಜಾನೆ ಶ್ರೀಕೃಷ್ಣ ಜನ್ಮಾಷ್ಟಮಿ (Krishna Janmashtami) ಪ್ರಯುಕ್ತ ನಡೆದ ಅರ್ಘ್ಯ ಪ್ರದಾನ ಕಾರ್ಯಕ್ರಮದ ಸಂದರ್ಭ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ (Speaker UT Khader) ಅವರು ಮಠಕ್ಕೆ ಭೇಟಿ ನೀಡಿದರು.

ಖಾದರ್‌ ಅವರು ಮಧ್ವ ಸರೋವರದಲ್ಲಿ ಕೈಕಾಲುಗಳನ್ನು ತೊಳೆದು ಬಂದು ಶ್ರೀಕೃಷ್ಣನ ದರ್ಶನ ಮಾಡಿದರು. ಸ್ಪೀಕರ್ ಜತೆಗೆ ಹಲವು ಕಾಂಗ್ರೆಸ್ ನಾಯಕರು ಸಾತ್ ನೀಡಿದರು. ಚೆನ್ನಾಗಿ ಮಳೆ ಬೆಳೆಯಾಗಿ ನಾಡಿಗೆ ಒಳಿತಾಗಲಿ ಎಂದು ಅಷ್ಟಮಿಯ ಕೃಷ್ಣನಲ್ಲಿ ಯು.ಟಿ. ಖಾದರ್ ಪ್ರಾರ್ಥಿಸಿದರು.

ಅರ್ಘ್ಯ ಪ್ರದಾನ

ಪರ್ಯಾಯ ಕೃಷ್ಣಾಪುರ ಮಠಾಧೀಶರಿಂದ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ನಡೆಯಿತು. ಅರ್ಘ್ಯ ಪ್ರದಾನದ ಮೂಲಕ ಕೃಷ್ಣದೇವರ ಹುಟ್ಟನ್ನು ಸಂಭ್ರಮಿಸುವ ಆಚರಣೆಯಿದ್ದು, ಕೃಷ್ಣದೇವರ ಗುಡಿಯಲ್ಲಿ ಮತ್ತು ಗುಡಿಯ ಎದುರಿನ ತುಳಸಿ ಕಟ್ಟೆಯಲ್ಲಿ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಇದಕ್ಕೆ ಪರ್ಯಾಯ ಮಠಾಧೀಶ ವಿದ್ಯಾಸಾಗರ ತೀರ್ಥರಿಗೆ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥರು ಸಾತ್ ನೀಡಿದರು.

ಹಗಲಿಡೀ ಉಪವಾಸವಿದ್ದ ನೂರಾರು ಭಕ್ತರಿಂದಲೂ ಶಂಖದ ಮೂಲಕ ಹಾಲು ಹಾಗೂ ನೀರಿನ ಆರ್ಘ್ಯ ಪ್ರದಾನ ನಡೆಯಿತು. ಕೃಷ್ಣಮಠದ ತುಂಬಾ ನಿನ್ನೆ ಹಾಗೂ ಇಂದು ನಿರಂತರ ಕೃಷ್ಣ ಜಪ ನಡೆಯುತ್ತಿದೆ. ನಾಳೆ ಶ್ರೀ ಕೃಷ್ಣ ಲೀಲೋತ್ಸವದ ಪ್ರಯುಕ್ತ ವಿಟ್ಲಪಿಂಡಿ ಆಚರಣೆ ನಡೆಯಲಿದ್ದು, ಮಧ್ಯಾಹ್ನದ ನಂತರ ನಡೆಯುವ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಲಿದ್ದಾರೆ. ಬೆಳಗ್ಗಿನಿಂದಲೇ ಸಾವಿರಾರು ಜನರಿಗೆ ಭೋಜನ ಪ್ರಸಾದ ವಿತರಣೆಯಾಗುತ್ತಿದ್ದು, ಆರ್ಘ್ಯ ಪ್ರದಾನದ ವೇಳೆ ದೇವರಿಗೆ ಸಮರ್ಪಿಸಿದ ಉಂಡೆ ಚಕ್ಕುಲಿ ವಿತರಿಸಲಾಗುತ್ತಿದೆ.

ಇದನ್ನೂ ಓದಿ: Rakshit Shetty: ಉಡುಪಿಯಲ್ಲಿ ಹುಲಿ ಕುಣಿತದ ಬೀಟ್‌ಗೆ ಮಸ್ತ್‌ ಹೆಜ್ಜೆ ಹಾಕಿದ ರಕ್ಷಿತ್ ಶೆಟ್ಟಿ

Exit mobile version