ಬೆಂಗಳೂರು: ಡಾ. ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಲು ಹಾಗೂ ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಪ್ರಕರಣಗಳು ನಡೆದು ಈಗಾಗಲೇ ಸಾಕಷ್ಟು ಸಮಯ ಆಗಿರುವುದರಿಂದ ವಿಚಾರಣೆ ಪೂರ್ಣಗೊಳಿಸಲು ವಿಶೇಷ ನ್ಯಾಯಾಲಯ ರಚನೆಗೆ (Special Court) ಸಿಎಂ ಸೂಚಿಸಿದ್ದಾರೆ.
ಹಿರಿಯ ಸಾಹಿತಿ ಹಾಗೂ ಕನ್ನಡ ಸಂಶೋಧನಾ ಕ್ಷೇತ್ರದ ದಿಗ್ಗಜ ಡಾ. ಎಂ.ಎಂ. ಕಲಬುರ್ಗಿ ಅವರು 2015ರ ಆ.31ರಂದು ಧಾರವಾಡದ ನಿವಾಸದಲ್ಲಿ ಹತ್ಯೆಯಾಗಿ ಏಳು ವರ್ಷಗಳು ಪೂರ್ಣಗೊಂಡಿವೆ. ಪ್ರಕರಣದ ಸಂಬಂಧ 2018-19ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಮೃತರ ಕುಟುಂಬದವರ ವಿಚಾರಣೆಗಳು ಪೂರ್ಣಗೊಂಡಿದ್ದರೂ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿವೆ. ಈಗಾಗಲೇ ಸಾಕಷ್ಟು ಸಮಯ ಆಗಿರುವುದರಿಂದ ವಿಶೇಷ ನ್ಯಾಯಾಲಯ ರಚಿಸುವಂತೆ ಮೃತರ ಪತ್ನಿ ಉಮಾದೇವಿ ಎಂ. ಕಲಬುರ್ಗಿ ಅವರು ಸಿಎಂ ಸಿದ್ದರಾಮಯ್ಯಗೆ ಕೋರಿದ್ದರು.
ಇದನ್ನೂ ಓದಿ | Belagavi Winter Session: ಪರೀಕ್ಷೆ ಅಕ್ರಮ ತಡೆ ವಿಧೇಯಕ ಮಂಡನೆ; ತಪ್ಪಿತಸ್ಥರ ಆಸ್ತಿ ಜಪ್ತಿ, 12 ವರ್ಷ ಜೈಲು!
ಅದೇ ರೀತಿ ಖ್ಯಾತ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ರವರು ಸೆಪ್ಟೆಂಬರ್ 2017ರ ಸೆ.5ರಂದು ಹತ್ಯೆಗೀಡಾಗಿದ್ದರು. ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲಾಗಿದೆ. ಇದುವರೆಗೂ 18 ಆರೋಪಿಗಳು
ಬಂಧನವಾಗಿದ್ದು, 1200 ಪುರಾವೆ ಹಾಗೂ 500ಕ್ಕೂ ವಿವಿಧ ಬಗೆಯ ಸಾಕ್ಷ್ಯಗಳನ್ನೊಳಗೊಂಡ ಚಾರ್ಜ್ ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ 2022ರ ಜುಲೈನಿಂದ
ಪ್ರಾರಂಭಗೊಂಡಿದ್ದು, ಇತರ ಪ್ರಕರಣಗಳು ಸಾಕಷ್ಟು ಇರುವುದರಿಂದ ವಿಚಾರಣೆಯು ನಿಧಾನಗತಿಯಲ್ಲಿ ಸಾಗಿದೆ. ಆದ್ದರಿಂದ, ಈ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಿ, ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಮೃತರ ಸಹೋದರಿ ಕವಿತಾ ಲಂಕೇಶ್ ಅವರು ಅವರನ್ನು ಕೋರಿರುವ ಹಿನ್ನೆಲೆಯಲ್ಲಿ ಎರಡೂ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಲು ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಮೈಸೂರು, ಹಾಸನದಲ್ಲಿ ಅರ್ಜುನ ಆನೆಯ ಸ್ಮಾರಕ ನಿರ್ಮಾಣ: ಈಶ್ವರ ಖಂಡ್ರೆ
ಬೆಳಗಾವಿ: ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಆನೆ ಕಾರ್ಯಾಚರಣೆ ವೇಳೆ ಪುಂಡಾನೆಯ ಜೊತೆ ಕಾದಾಡಿ ಮಡಿದ ಕ್ಯಾಪ್ಟನ್, ಸೀನಿಯರ್, ಬಲಭೀಮ ಎಂದೇ ಖ್ಯಾತವಾಗಿದ್ದ ಹಾಗೂ ಮೈಸೂರಿನ ಜಗದ್ವಿಖ್ಯಾತ ದಸರಾ ಜಂಬೂಸವಾರಿಯಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸ್ಮಾರಕವನ್ನು (Elephant Arjuna) ಹಾಸನ ಮತ್ತು ಮೈಸೂರು ಜಿಲ್ಲೆಯಲ್ಲಿ ನಿರ್ಮಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಅರ್ಜುನನ ಸಾವಿನ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಸಚಿವರು, ನಾಡಿನ ಜನರ ಪ್ರೀತಿಗೆ ಪಾತ್ರವಾಗಿದ್ದ ಅರ್ಜನನ ಸಾವು ಅತ್ಯಂತ ದುಃಖದಾಯಕ. ಅರ್ಜನ ಮತ್ತು ನಾಡಿನ ಜನತೆಯ ನಡುವೆ ಭಾವನಾತ್ಮಕ ಸಂಬಂಧ ಇತ್ತು. ಈ ಆನೆ ಸಾವು ನಾಡಿನಾದ್ಯಂತ ಇರುವ ಪ್ರಾಣಿ ಪ್ರಿಯರಿಗೆ ಮತ್ತು ಸಾರ್ವಜನಿಕರಿಗೆ ನೋವು ತಂದಿದೆ.
ಹಲವು ಹುಲಿ, ಆನೆ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದ ಎಂದು ಸ್ಮರಿಸಿದ್ದಾರೆ.
ಅರ್ಜುನನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದ್ದು, ಅರ್ಜುನ ಸೇವೆಯನ್ನು ನಾಡಿನ ಜನರು ಸದಾ ಸ್ಮರಿಸುವಂತೆ ಹಾಸನ ಮತ್ತು ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಆನೆ ಕಾರ್ಯಾಚರಣೆ ವಿಧಾನ ಮಾರ್ಪಾಡಿಗೆ ಸೂಚನೆ
ಆನೆ ಕಾರ್ಯಾಚರಣೆ ವೇಳೆ ಲೋಲಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಆನೆ ಕಾರ್ಯಾಚರಣೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ.)ದಲ್ಲಿ ಏನಾದರೂ ತಿದ್ದುಪಡಿ ಅಥವಾ ಮಾರ್ಪಾಡು ಮಾಡಬೇಕಾಗಿದೆಯೇ ಎಂಬ ಬಗ್ಗೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು, ತಜ್ಞರೊಂದಿಗೆ ಸಮಾಲೋಚನೆ ನಡೆಸಿ 3 ದಿನಗಳ ಒಳಗಾಗಿ ಕಡತದಲ್ಲಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅರಣ್ಯ ಸಚಿವ ಸೂಚಿಸಿದ್ದಾರೆ.
ಇದನ್ನೂ ಓದಿ | Belagavi Winter Session: ವಿಧೇಯಕ ಮಂಡನೆ; ಆನ್‌ಲೈನ್ ಗೇಮಿಂಗ್ ಆಡ್ತೀರಾ? ಇನ್ಮುಂದೆ ತೆರಿಗೆ ಕಟ್ಟಿ!
ರಾಜ್ಯದ ಆನೆಗಳ ಸಂಖ್ಯೆಯಲ್ಲಿ ರಾಷ್ಟ್ರದಲ್ಲೇ ಮೊದಲ ಸ್ಥಾನದಲ್ಲಿರುವುದು ಸಂತೋಷದ ವಿಷಯವಾದರೂ, ಕೆಲವು ಪುಂಡಾನೆಗಳು ಪದೇ ಪದೇ ನಾಡಿಗೆ ಬರುತ್ತಿರುವುದು ಮತ್ತು ಜೀವಹಾನಿ, ಬೆಳೆ ಹಾನಿ ಆಗುತ್ತಿರುವುದಲ್ಲದೆ, ಆನೆ ಕಾರ್ಯಾಚರಣೆ ವೇಳೆ ಆನೆಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸಾವಿಗೀಡಾಗುತ್ತಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ಹೀಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ.)ದಲ್ಲಿ ತಿದ್ದುಪಡಿ ಅಥವಾ ಮಾರ್ಪಾಡು ಮಾಡಬೇಕಾಗಿದೆಯೇ ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.