Site icon Vistara News

Republic Day: ಲಾಲ್‌ಬಾಗ್‌ ಫ್ಲವರ್ ಶೋಗೆ ಮೆಟ್ರೋ ವಿಶೇಷ ಆಫರ್‌; ಜ. 26ರಂದು ಕೇವಲ 30 ರೂ.ಗೆ ರಿಟರ್ನ್ ಟಿಕೆಟ್‌

Namma metro

ಬೆಂಗಳೂರು: ಗಣರಾಜ್ಯೋತ್ಸವದಂದು (Republic Day) ಲಾಲ್ ಬಾಗ್ ಫ್ಲವರ್ ಶೋಗೆ (lalbagh flower show) ತೆರಳುವ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಗುಡ್ ನ್ಯೂಸ್ ನೀಡಿದೆ. ಜ.26ರಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ ಪರಿಚಯಿಸಲಾಗಿದ್ದು, ಇದಕ್ಕೆ ಕೇವಲ 30 ರೂ. ನಿಗದಿ ಮಾಡಲಾಗಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್‌, ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ, ನಮ್ಮ ಮೆಟ್ರೋದಲ್ಲಿ ಜ. 26ರಂದು (ಗಣರಾಜ್ಯೋತ್ಸವ ದಿನ), ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು ಪರಿಚಯಿಸಲಾಗಿದೆ. ಆ ದಿನದಂದು ಬೆಳಗ್ಗೆ 10:00 ಗಂಟೆಯಿಂದ ರಾತ್ರಿ 08:00 ಗಂಟೆಯವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ದರವನ್ನು 30 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.

ಈ ಪೇಪರ್ ಟಿಕೆಟ್ ಆ ದಿನದ ಒಂದು ಪ್ರಯಾಣಕ್ಕೆ ಮಾತ್ರ ಮಾನ್ಯವಾಗಿರುತ್ತದೆ ಹಾಗೂ ಬೆಳಗ್ಗೆ 8 ರಿಂದ
ಸಂಜೆ 6 ಗಂಟೆಯವರೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಖರೀದಿಸಬಹುದಾಗಿದೆ. ಲಾಲ್‌ಬಾಗ್ ಮೆಟ್ರೋ
ನಿಲ್ದಾಣದಲ್ಲಿ ಪೇಪರ್ ಟಿಕೆಟ್ ರಾತ್ರಿ 8 ಗಂಟೆಯವರೆಗೆ ಲಭ್ಯವಿರುತ್ತದೆ.

ಇದನ್ನೂ ಓದಿ | Lalbagh Flower Show : ಜ.18 ರಿಂದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ; ವಿಶ್ವ ಗುರು ಬಸವಣ್ಣ ಅನಾವರಣ

ಮೆಟ್ರೋ ಪ್ರಯಾಣಿಕರು ಲಾಲ್‌ಬಾಗ್ ನಿಲ್ದಾಣ ಪ್ರವೇಶಿಸಲು ಮತ್ತು ಯಾವುದೇ ನಿಲ್ದಾಣದಿಂದ ನಿರ್ಗಮಿಸಲು ಪೇಪರ್ ಟಿಕೆಟ್‌ಗಳನ್ನು ಹಾಜರಿಪಡಿಸಬೇಕಾಗುತ್ತದೆ. ಆದಾಗ್ಯೂ, ಯಾವುದೇ ನಿಲ್ದಾಣದಿಂದ ಲಾಲ್‌ಬಾಗ್ ಮೆಟ್ರೋ ನಿಲ್ದಾಣಕ್ಕೆ ಟೋಕನ್, ಸ್ಮಾರ್ಟ್ ಕಾರ್ಡ್ NCMC ಕಾರ್ಡ್‌ಗಳು ಮತ್ತು ಕ್ಯೂಆರ್ ಟಿಕೆಟ್‌ಗಳ ಮೂಲಕ ಪ್ರಯಾಣಿಸಬಹುದು ಹಾಗೂ ಲಾಲ್‌ಬಾಗ್ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹಿಂತಿರುಗಲು ಸ್ಮಾರ್ಟ್ ಕಾರ್ಡ್, NCMC ಕಾರ್ಡ್, QR ಟಿಕೆಟ್‌ಗಳ ಮೂಲಕ ಮತ್ತು ಟೋಕನ್‌ ಗಳ ಬದಲಿಗೆ ಪೇಪರ್ ಟಿಕೆಟ್‌ಗಳ ಮೂಲಕ ಮಾತ್ರ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಜ.26 ರಿಂದ 28ವರೆಗೆ ಪೀಣ್ಯ ಇಂಡಸ್ಟ್ರಿ-ನಾಗಸಂದ್ರ ನಡುವೆ ಮೆಟ್ರೋ ರೈಲು ಸೇವೆ ಸ್ಥಗಿತ

ಜ.26 ರಿಂದ 28ವರೆಗೆ ಹಸಿರು ಮಾರ್ಗದಲ್ಲಿನ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ. ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಣೆ ಮಾರ್ಗದ ಪೂರ್ವ ನಿಯೋಜಿತ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ, ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳನ್ನು ಜ.26 ರಿಂದ 28 ರವರೆಗೆ 3 ದಿನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಈ ದಿನಗಳಲ್ಲಿ ಪೀಣ್ಯ ಇಂಡಸ್ಟ್ರಿ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲು ಸೇವೆಗಳು ಲಭ್ಯವಿರುತ್ತವೆ. ನಂತರ ಜ. 29ರಂದು ಬೆಳಗ್ಗೆ 5 ಗಂಟೆಯಿಂದ ಎಂದಿನಂತೆ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳುತ್ತದೆ. ಆದಾಗ್ಯೂ, ನೇರಳೆ ಮಾರ್ಗದ ವೈಟ್‌ಫೀಲ್ಡ್ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವಿನ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ | Lalbagh Flower Show: ಫಲಪುಷ್ಪ ಪ್ರದರ್ಶನದಲ್ಲಿ ಬಸವ ತತ್ವ; ಎಂ.ಬಿ. ಪಾಟೀಲ್‌ ಸಂತಸ

ಪೀಣ್ಯ ಇಂಡಸ್ಟ್ರಿ ಮತ್ತು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿಯನ್ನು ನಿರೀಕ್ಷಿಸಲಾಗಿರುವುದರಿಂದ ಟಿಕೆಟ್ ಖರೀದಿಸಲು ಸಮಯವನ್ನು ಉಳಿಸಲು ಸಾರ್ವಜನಿಕರು ವಾಟ್ಸಾಪ್ ಅಥವಾ ನಮ್ಮ ಮೆಟ್ರೋ ಮತ್ತು ಇತರ ಅಪ್ಲಿಕೇಶನ್‌ಗಳ ಮೂಲಕ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ನಮ್ಮ ಮೆಟ್ರೋ ಅಧಿಕಾರಿಗಳು ಕೋರಿದ್ದಾರೆ.

Exit mobile version