ರಿಪ್ಪನ್‌ಪೇಟೆ: ಜೈನರ ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳವಾದ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಬಳಿಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಐದನೇ ಶ್ರಾವಣ ಸಂಪತ್ ಶುಕ್ರವಾರದ ವಿಶೇಷ ಪೂಜೆ ವಿಜೃಂಭಣೆಯಿಂದ ನೆರವೇರಿತು. ಅಮ್ಮನವರಿಗೆ ೧೦೮ ಬಗೆಯ ವಿವಿಧ ಪುಷ್ಪಗಳ ನೈವೇದ್ಯವನ್ನು ಸಮರ್ಪಿಸಲಾಯಿತು.
ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಾಲಯದಲ್ಲಿ ಧಾರ್ಮಿಕ ವಿಧಿಯಂತೆ ಅಭಿಷೇಕ, ಮಹಾಪೂಜೆ ಬಳಿಕ ಜಗನ್ಮಾತೆ ಶ್ರೀಪದ್ಮಾವತಿ ಅಮ್ಮನವರ ಸನ್ನಿದಿಯಲ್ಲಿ ಸರ್ವಾಲಂಕಾರದೊಂದಿಗೆ ೧೦೮ ಬಗೆಯ ವಿವಿಧ ಪುಷ್ಪಗಳ ಅರ್ಪಣೆ ಮಾಡುವ ಮೂಲಕ ವಿಶೇಷ ಪೂಜಾ ವಿಧಾನಗಳು ಡಾ. ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನೆರವೇರಿದವು.
ಹುಕ್ಕೇರಿಯ ಶ್ರೀ ಮಹಾವೀರ ಮಲ್ಟಿಪರ್ಪಸ್ ಸೌಹಾರ್ದ ಸಹಕಾರಿ ಲಿ.ನ ಚೇರ್‌ಮನ್ ಆದ ಮಹಾವೀರ ವಿ. ನೀಲಜಗಿ ಹಾಗೂ ಸಿಬ್ಬಂದಿ ವರ್ಗದವರು ಶ್ರಾವಣ ಶುಕ್ರವಾರದ ಸೇವಾಕರ್ತೃಗಳಾಗಿ ಸೇವೆ ಸಲ್ಲಿಸಿದರು.
ತಮಿಳುನಾಡು, ಮಹಾರಾಷ್ಟ, ರಾಜಸ್ಥಾನ, ಆಂಧ್ರಪ್ರದೇಶ ಸೇರಿದಂತೆ ನಮ್ಮ ರಾಜ್ಯ ಹಾಗೂ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತರು ಶ್ರದ್ಧಾಭಕ್ತಿಯಿಂದ ಜಿನನಾಮ ಸ್ತುತಿಸಿ, ಭಕ್ತಿಕಾಣಿಕೆ ಸಮರ್ಪಿಸಿದರು. ಸಂಪ್ರದಾಯದಂತೆ ಉಡಿ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಬಳಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಇದನ್ನೂ ಓದಿ | Shravan| ಶ್ರಾವಣ ಮಾಸ ಬರಲು ಹಬ್ಬಗಳ ಸಾಲು ಸಾಲು!