ಗದಗ: ಅಂಚೆ ಕಚೇರಿಗೆ ಪತ್ರಗಳು ಬರುವುದು, ಪಾರ್ಸೆಲ್ ಬರುವುದು, ಹಣ ಬರುವುದು ಎಲ್ಲ ಕೇಳಿದ್ದೀರಿ. ಆದರೆ, ಹಾವೊಂದು ಜಬರ್ದಸ್ತ್ ಎಂಟ್ರಿ ಕೊಡೋದು ಕೇಳಿದ್ದೀರಾ? ಅದೂ ಅನ್ಯ ರಾಜ್ಯದ, ನೋಡಲು ತುಂಬ ಡಿಫರೆಂಟ್ ಆದ ಹಾವೊಂದು ಅಂಚೆ ಕಚೇರಿಗೆ ಎಂಟ್ರಿ ಕೊಟ್ಟಿದೆ. ಅದನ್ನು ನೋಡಿದ ಸಿಬ್ಬಂದಿ ಗಾಬರಿಬಿದ್ದು ಹೋಗಿದ್ದಾರೆ. ಎಲ್ಲಿಂದ ಬಂತಿದು, ಮುಂದೇನಾಯಿತು ಎನ್ನುವುದು ಇಂಟ್ರೆಸ್ಟಿಂಗ್ ಸ್ಟೋರಿ!
ಈ ರೀತಿ ಹಾವು ಬಂದಿದ್ದು ಗದಗ ಜಿಲ್ಲೆಯ ನರಗುಂದ ಪಟ್ಟಣದ ಪೋಸ್ಟ್ ಆಫೀಸ್‌ಗೆ. ಬಂದ ಹಾವಿನ ಹೆಸರು ಇಂಡಿಯನ್ ಕೋರಲ್ ಸ್ನೇಕ್ ಅಂತ. ಅತ್ಯಂತ ಚಿಕ್ಕಗಾತ್ರದ ಈ ಹಾವು ಇಪ್ಪತ್ತರಿಂದ ಇಪ್ಪತ್ತೊಂದು ಇಂಚು ಗಾತ್ರದಾಗಿದ್ದು, ಇದಕ್ಕಿಂತ ಹೆಚ್ಚೇನು ಬೆಳೆಯುವುದಿಲ್ಲ. ಸೆಣಬಿನ ಎಳೆಯಷ್ಟೇ ತೆಳ್ಳಗೆ, ಥಳುಕುಬಳುಕು!
ಇನ್ನು ಹಾವಿನ ಬಣ್ಣವೂ ವಿಶಿಷ್ಟ. ಮೇಲ್ಮೈ ಬಣ್ಣ ಕಂದು. ಕೆಳಭಾಗ ಅಂದರೆ ಹೊಟ್ಟೆ ಭಾಗ ಕಿತ್ತಳೆ. ಹಾವಿನ ತಲೆ ಹಾಗೂ ಬಾಲ ಮಾತ್ರ ಕಪ್ಪು ಬಣ್ಣ.
ಹಾವು ಸಣ್ಣದಾದರೂ ಅದರ ಶಕ್ತಿಯೇನೂ ಕಡಿಮೆ ಇಲ್ಲವಂತೆ. ಯಾರಾದರೂ ಇದರ ತಂಟೆಗೆ ಹೋದರೆ ತನ್ನ ಬಾಲವನ್ನು ಡೊಂಕು ಮಾಡಿ ಬಾಯಿ ಹಾಕಿ ಕಚ್ಚುತ್ತದಂತೆ. ಹಾವಿನ ಗಾತ್ರ ಚಿಕ್ಕದಾದರೂ, ವಿಷ ಮಾತ್ರ ನಾಗರ ಹಾವಿನಷ್ಟೇ ಪರಿಣಾಮಕಾರಿಯಂತೆ. ನಾಗರಹಾವು ನೆರೋಟಾಕ್ಸಿನ್ ಅನ್ನುವ ಅತ್ಯಂತ ಡೇಂಜರಸ್ ವಿಷವನ್ನು ಹೊಂದಿದ್ದು, ಅದೇ ನೆರೋಟ್ಯಾಕ್ಸಿನ್ ವಿಷವನ್ನು ಈ ಹಾವು ಸಹ ಹೊಂದಿದೆ. ಕಚ್ಚಿದ ತಕ್ಷಣ ಬಹಳ ವೇಗವಾಗಿ ದೇಹದೊಳಗೆ ಸೇರುವ ಈ ವಿಷವು ಮನುಷ್ಯನನ್ನು ಸಾವಿನ ದವಡೆಗೆ ತೆಗೆದುಕೊಂಡು ಹೋಗುತ್ತದೆ.
ಆದರೆ, ಸದ್ಯ ಕರ್ನಾಟಕದಲ್ಲಿ ಈ ಜಾತಿಯ ಹಾವು ಅಳಿವಿನಂಚಿನಲ್ಲಿದ್ದು, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಬಯಲುಸೀಮೆ ಪ್ರದೇಶದಲ್ಲಿ ಕಂಡು ಬರುತ್ತದೆ. ಚಿಕ್ಕ ಚಿಕ್ಕ ಕೀಟಗಳು ಇದರ ಆಹಾರವಾಗಿದ್ದು, ಮನುಷ್ಯನ ಅತ್ಯಂತ ಸೂಕ್ಷ್ಮವಾದ ಜಾಗದಲ್ಲಿ ಈ ಹಾವು ಕಚ್ಚುತ್ತದೆ. ಕನ್ನಡದಲ್ಲಿ ಈ ಹಾವಿಗೆ ಕಡಲ ಹಾವು ಹಾಗೂ ಹವಳದ ಹಾವು ಎಂದು ಕರೆಯುತ್ತಾರೆ. ಹಿಂದಿಯಲ್ಲಿ ರಾತ್ ಕಾ ಸಾಂಪ್ ಎಂದು ಕರೆಯಲಾಗುತ್ತದೆ.
ಅಂದ ಹಾಗೆ ಬಂದಿದ್ದೆಲ್ಲಿಂದ?
ನರಗುಂದದ ಕೃಷಿ ಇಲಾಖೆ ಪಕ್ಕವೇ ಅಂಚೆ ಕಚೇರಿ ಇದ್ದು, ಬೇರೆ ರಾಜ್ಯದಿಂದ ಬೀಜ, ಗೊಬ್ಬರದ ವಾಹನಗಳು ಬಂದಾಗ ಆ ಮೂಲಕ ಈ ಹಾವು ಇಲ್ಲಿಗೆ ಎಂಟ್ರಿ ಕೊಟ್ಟಿರಬಹುದೆಂದು ಹೇಳಲಾಗುತ್ತಿದೆ.
ಅಂಚೆ ಕಚೇರಿಯಲ್ಲಿ ಪ್ರತ್ಯಕ್ಷವಾದ ಈ ಹಾವನ್ನು ಕಂಡು ಆತಂಕಗೊಂಡ ಸಿಬ್ಬಂದಿ, ತಕ್ಷಣ ಖ್ಯಾತ ಸ್ನೇಕ್ ರಕ್ಷಕ ಬುಡೇಸಾಬ್ ಅವರಿಗೆ ಕರೆ ಮಾಡಿದ್ದಾರೆ. ಬುಡೇಸಾಬ್ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.
ಬುಡೇಸಾಬ ನರಗುಂದ ತಾಲೂಕಿನಾದ್ಯಂತ ಹಾವು ಹಿಡಿಯುವುದರಲ್ಲಿ ಪ್ರಸಿದ್ಧರು. ಯಾವುದೇ ಭಯವಿಲ್ಲದೇ ಹಾವುಗಳ ಹೆಡೆಗೆ ನೇರವಾಗಿ ಕೈ ಹಾಕುವ ಈ ಬುಡೇಸಾಬ ಹಾವು ರಕ್ಷಣೆ ಮಾತ್ರವಲ್ಲದೇ, ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿ ಜನರಲ್ಲಿ ಹಾವುಗಳ ಬಗ್ಗೆ ಅರಿವು ಮೂಡಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ : Cobras Trapped: ಮನೆಯೊಂದರಲ್ಲಿ ಕಂಡು ಬಂತು ಮೂರು ನಾಗರ ಹಾವು; ರಕ್ಷಿಸಿ ಕಾಡಿನೊಳಗೆ ಬಿಟ್ಟ ಉರಗ ರಕ್ಷಕ