Site icon Vistara News

ರಸ್ತೆ ಅಗಲೀಕರಣ ತ್ವರಿತಗೊಳಿಸಿ, ಟ್ರಾಫಿಕ್‌ ಜಾಮ್‌ ಸಮಸ್ಯೆ ಬಗೆಹರಿಸಿ: ಲೆಹರ್‌ ಸಿಂಗ್‌ ಆಗ್ರಹ

Lehar Singh Siroya and DK Shivakumar

ಬೆಂಗಳೂರು: ಬೆಂಗಳೂರಿನಲ್ಲಿ ಬಾಕಿ ಇರುವ ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತಗೊಳಿಸಿ ಪ್ರಯಾಣಿಕರು ಹಾಗೂ ನಿವಾಸಿಗಳನ್ನು ಸಂಚಾರ ದಟ್ಟಣೆಯಿಂದ ಪಾರು ಮಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ (Lehar Singh Siroya) ಒತ್ತಾಯಿಸಿದ್ದಾರೆ.

ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಪತ್ರ ಬರೆದಿರುವ ಅವರು, ಬೆಂಗಳೂರಿನಲ್ಲಿ ಮತ್ತು ವಿಶೇಷವಾಗಿ ಮೇಖ್ರಿ ವೃತ್ತದಿಂದ ನಗರಕ್ಕೆ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಪ್ರಯಾಣಿಸುವವರ ಅನುಕೂಲಕ್ಕಾಗಿ ರಸ್ತೆ ಅಗಲೀಕರಣ ಯೋಜನೆಗಳನ್ನು ತ್ವರಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿದಿನ ಟ್ರಾಫಿಕ್ ಜಾಮ್‌ ಸಮಸ್ಯೆಗೊಳಗಾಗಿರುವ ಪ್ರಯಾಣಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಹೆಬ್ಬಾಳ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಬರುವ ರಸ್ತೆ ವಿಸ್ತಾರವಾಗಿದೆ. ಆದರೆ ಮೇಖ್ರಿ ವೃತ್ತದ ಅಂಡರ್‌ಪಾಸ್‌ ದಾಟಿ ನಗರದ ಕಡೆಗೆ ಬರುವಾಗ 6 ಪಥಗಳಿದ್ದ ರಸ್ತೆ 4 ಪಥಗಳಾಗಿ ಕಿರಿದಾಗುತ್ತದೆ. ಈ ಜಾಗದಲ್ಲಿ ಉಂಟಾಗುವ ಅಡಚಣೆಯು ನಿರಂತರ ಟ್ರಾಫಿಕ್ ಜಾಮ್‌ಗೆ ಕಾರಣವಾಗಿ ವಾಹನಗಳು ದೂರದವರೆಗೆ ಸರತಿಯಲ್ಲಿ ನಿಲ್ಲುವಂತಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಾಗೆಯೇ, ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್ ನಿಲ್ದಾಣದವರೆಗೆ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿ ಬಳ್ಳಾರಿ ರಸ್ತೆಯಲ್ಲಿ ಸಮಸ್ಯೆ ಬಿಗಡಾಯಿಸುತ್ತದೆ. ಈ ಭಾಗದಲ್ಲಿ ರಸ್ತೆ ಅಗಲೀಕರಣ ಯೋಜನೆಗಳಿಗೆ ಬಿಬಿಎಂಪಿಯಿಂದ ಪ್ರಸ್ತಾವನೆ ರೂಪಿಸಿದ್ದರೂ ಮತ್ತು ಸುಪ್ರೀಂ ಕೋರ್ಟ್‌ನಿಂದ ಅನುಮೋದನೆ ಪಡೆದಿದ್ದರೂ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ | BY Vijayendra : ಜಮೀರ್‌ ಖಾನ್‌ ಅಧಿವೇಶನಕ್ಕೆ ಬರ್ಲಿ ನೋಡ್ಕೊಳ್ತೇವೆ ಎಂದ ವಿಜಯೇಂದ್ರ

ರಸ್ತೆ ಅಗಲೀಕರಣ ಕಾಮಗಾರಿಯು ಡಿ.ಕೆ.ಶಿವಕುಮಾರ್‌ ಅವರ ಬ್ರ್ಯಾಂಡ್‌ ಬೆಂಗಳೂರಿನ ಗುರಿಗೆ ಪೂರಕವಾಗಿದೆ ಎಂದಿರುವ ಲೆಹರ್‌ ಸಿಂಗ್‌ ಅವರು, ರಸ್ತೆ ಅಗಲೀಕರಣ ಕಾಮಗಾರಿ ಜತೆಗೆ ಮೇಖ್ರಿ ವೃತ್ತ ಹಾಗೂ ಕಾವೇರಿ ವೃತ್ತದ ಸುಂದರೀಕರಣ ಕಾಮಗಾರಿ ನಡೆದರೆ, ಅದಕ್ಕೆ ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version