Site icon Vistara News

Spirit of India | ಕೇಸರಿ ಬಣ್ಣ ಮಾತ್ರ ಟೇಕ್ ಇಟ್ ಈಸಿ ಏಕೆ? ಬೇರೆ ಬಣ್ಣ ಯಾಕಿಲ್ಲ?: ಬಿ.ಎಲ್‌. ಸಂತೋಷ್‌ ಖಡಕ್‌ ಪ್ರಶ್ನೆ

spirit of india progrramme ಸ್ಪಿರಿಟ್‌ ಆಫ್‌ ಇಂಡಿಯಾ ಬಿ.ಎಲ್.‌ ಸಂತೋಷ್‌ ನೆಹರೂ ಕೇಸರಿ ಬಣ್ಣ

ಬೆಂಗಳೂರು: “ಕೇಸರಿ ಬಣ್ಣವೇ ಏಕೆ ಟೇಕ್ ಇಟ್ ಈಸಿ? ಬೇರೆ ಬಣ್ಣ ಯಾಕಿಲ್ಲ?” ಇದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೊನಚಿನ ಪ್ರಶ್ನೆ. ಸ್ಪಿರಿಟ್ ಆಫ್ ಇಂಡಿಯಾದ (Spirit of India) ಸರಣಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಇಂದು ಸಿನಿಮಾಗಳಲ್ಲಿ ಕೇಸರಿ ಬಣ್ಣವನ್ನು ಕೀಳಾಗಿ, ಅನವಶ್ಯಕವಾಗಿ ಎಳೆದು ತರುತ್ತಿರುವುದರ ಬಗ್ಗೆ ತೀವ್ರ ಆಕ್ರೋಶ ಹಾಗೂ ಅಸಮಾಧಾನವನ್ನು ಹೊರಹಾಕಿದರು.

ಜೆ.ಪಿ. ನಗರದ ಆರ್‌.ವಿ. ದಂತ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ನ್ಯಾಷನಲ್ ಎಜುಕೇಶನ್ ಟೆಕ್ನಾಲಜಿ ಫೋರಂ ಅಧ್ಯಕ್ಷ ಅನಿಲ್ ಸಹಸ್ರಬುದ್ದೆ, ನಟ ಸುಚೇಂದ್ರ ಪ್ರಸಾದ್, ಜಿಎಂ ಗ್ರೂಪ್ ಅಧ್ಯಕ್ಷ ಜಿ.ಎಂ. ಲಿಂಗರಾಜು, ವಿಶ್ವ ವಿಪ್ರತ್ರಯೀ ಪರಿಷತ್‌ ಅಧ್ಯಕ್ಷ ರಘುನಾಥ್ ಎಸ್, ಸಾಹಿತಿ ವಿಕ್ರಮ್ ಸಂಪತ್, ನಟ ಪ್ರಕಾಶ್ ಬೆಳವಾಡಿ, ಹಿರಿಯ ಪತ್ರಕರ್ತ ಅನಂತ ಚಿನಿವಾರ ಭಾಗಿಯಾಗಿದ್ದರು. ಇದರಲ್ಲಿ “ಮಸುಕಾದ ಇತಿಹಾಸದ ಪುಟಗಳು, ಮರೆಯಾದ ವಿಜಯಗಾಥೆಗಳು” ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಂವಾದ ನಡೆಯಿತು.

ಸ್ಪಿರಿಟ್ ಆಫ್ ಇಂಡಿಯಾ ಲೋಗೋ ಬಿಡುಗಡೆ ಮಾಡಿ ಸಂವಾದದಲ್ಲಿ ಮಾತನಾಡಿದ ಬಿ.ಎಲ್. ಸಂತೋಷ್, ಇಂದಿನ ಸಿನಿಮಾಗಳಲ್ಲಿ, ಅದರಲ್ಲೂ ಬಾಲಿವುಡ್‌ ಸಿನಿಮಾಗಳಲ್ಲಿ ಕೇಸರಿ ಬಣ್ಣದ ಬಗ್ಗೆ ಆಕ್ಷೇಪಾರ್ಹವಾಗಿ ತೋರಿಸುತ್ತಿರುವುದರ ಬಗ್ಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು. ಅನಾವಶ್ಯಕವಾಗಿ ಕೇಸರಿ ಬಟ್ಟೆಯನ್ನು ಯಾಕೆ ಬಳಸಬೇಕು ಎಂದು ಇತ್ತೀಚಿನ ಸಿನಿಮಾ ಬಗ್ಗೆ ಹೆಸರು ಪ್ರಸ್ತಾಪ ಮಾಡದೇ ಪ್ರಶ್ನಿಸಿದರು.

spirit of india progrramme ಸ್ಪಿರಿಟ್‌ ಆಫ್‌ ಇಂಡಿಯಾ ಬಿ.ಎಲ್.‌ ಸಂತೋಷ್‌ ನೆಹರೂ ಕೇಸರಿ ಬಣ್ಣ

ಇದನ್ನೂ ಓದಿ | Karnataka Election | ಬಿಜೆಪಿಗೆ ಮತ ನೀಡಲು ಕರ್ನಾಟಕದ ಜನ ಸಿದ್ಧರಾಗಿದ್ದಾರೆ: ಅಮಿತ್ ಶಾ

ಪರಿಚಿತರೊಬ್ಬರು ಸಿನಿಮಾ ಸರ್ಟಿಫಿಕೇಷನ್ ಕಮಿಟಿಯಲ್ಲಿ ಇದ್ದರು. ಆಗ ಸಿನಿಮಾವೊಂದರಲ್ಲಿ ಅತ್ಯಾಚಾರ ಮಾಡುವ ದೃಶ್ಯವಿತ್ತು. ಇನ್ಸ್‌ಪೆಕ್ಟರ್‌ ಒಬ್ಬ ಕೇಸರಿ ಶಾಲು ಹಾಕಿಕೊಂಡಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅವರು, ಅತ್ಯಾಚಾರ ಮಾಡುವ ಇನ್ಸ್‌ಪೆಕ್ಟರ್‌ಗೆ ಕೇಸರಿ ಶಾಲನ್ನು ಏಕೆ ಹಾಕಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಸಿನಿಮಾದ ನಿರ್ದೇಶಕ “ಟೇಕ್ ಇಟ್ ಈಸಿ” ಎಂದು ಹೇಳಿದ್ದ. ಕೇಸರಿ ಬಗ್ಗೆಯೇ ಟೇಕ್ ಇಟ್ ಈಸಿ ಯಾಕೆ? ಬೇರೆ ಬಣ್ಣ ಯಾಕಿಲ್ಲ? ಪೊಲೀಸರನ್ನು ಕೆಟ್ಟವರು ಅಂತ ತೋರಿಸಬೇಕಿದ್ದರೆ ಅಷ್ಟನ್ನು ಮಾತ್ರ ತೋರಿಸಿ. ಆದರೆ, ಅವರಿಗೆ ಕೇಸರಿ ಶಾಲು ಹಾಕಿ ಯಾಕೆ ಇಂತಹ ನೀಚ ದೃಶ್ಯವನ್ನು ತೋರಿಸುವುದು ಎಂದು ಬಿ.ಎಲ್. ಸಂತೋಷ್ ಪ್ರಶ್ನೆ ಮಾಡಿದರು.

ಇನ್ನು ಸಿನಿಮಾ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಎಡಪಂಥೀಯ ಧೋರಣೆಯನ್ನು ತುರುಕಲಾಗುತ್ತಿದೆ. ಇನ್ನು ಅವಾರ್ಡ್‌ಗಳನ್ನೂ ಕೆಲವರು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಪಟ್ಟರು. ಇದೆಲ್ಲವೂ ನೆಹರು ಬಿಟ್ಟುಹೋದ ಎಡಪಂಥೀಯ ಪರಂಪರೆಯಾಗಿದೆ. ಆದರೆ, ನನಗೆ ಅವರ ಮೇಲೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಹಾಗಂತ ಅವರ ವಿಚಾರಗಳನ್ನು ಒಪ್ಪಲು ಆಗದು. ಇಂತಹ ಎಡ ಚಿಂತನೆಯ ವಿಷಯಗಳನ್ನೇ ಮುಂದಿಟ್ಟುಕೊಂಡು ಕೆಲವರು ತಮಗೆ ತಿಳಿದಂತೆ ಮಾತನಾಡುತ್ತಾ ಭಾರತದಲ್ಲಿ ಮಾನವೀಯತೆಯೇ ಇಲ್ಲ ಎಂದೆಲ್ಲಾ ಹೇಳುತ್ತಾರೆಂದು ಬಿ.ಎಲ್.‌ ಸಂತೋಷ್‌ ಅಸಮಾಧಾನವನ್ನು ಹೊರಹಾಕಿದರು.

ಮೈಂಡ್ ಫುಲ್ ಮೀಡಿಯಾ ಪೈ.ಲಿ ಮತ್ತು ವಿಶ್ವ ವಿಪ್ರತ್ರಯೀ ಪರಿಷತ್ತು, ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ಸಹಯೋಗದಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ | Karnataka Election | ಕುಟುಂಬ ರಾಜಕಾರಣ ಎಂದರೇ ಭ್ರಷ್ಟಾಚಾರ; ದೇಶ-ಕರ್ನಾಟಕದಲ್ಲಿ ಇದಕ್ಕಿಲ್ಲ ಅವಕಾಶ: ಪ್ರಲ್ಹಾದ್‌ ಜೋಶಿ

ನ್ಯಾಷನಲ್ ಎಜುಕೇಶನ್ ಟೆಕ್ನಾಲಜಿ ಫೋರಂ ಅಧ್ಯಕ್ಷ ಅನಿಲ್ ಸಹಸ್ರಬುದ್ದೆ ಮಾತನಾಡಿ, 1835ರಲ್ಲಿ‌ ಬಂದ ಮೆಕಾಲೆ‌ ಶಿಕ್ಷಣ ನೀತಿ ಗುರುಕುಲ ಪದ್ಧತಿಯನ್ನು ನಾಶ ಮಾಡಿತು. ಈಗ ಮತ್ತೆ ಭಾರತದಲ್ಲಿ ಹಳೆಯ ಶಿಕ್ಷಣ ಪದ್ಧತಿ ಮರುಕಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ಈಗ ಶಿಕ್ಷಣ ನೀತಿ ಬದಲಾಗುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಅತಿಥಿ ದೇವೋ ಭವ ಎನ್ನುವ ಪದ್ಧತಿಯಿದೆ. ದೇಶದ ವಿವಿಧ ವರ್ಗದಲ್ಲಿ ಭಾಷೆ, ಆಚಾರ, ವಿಚಾರ, ಸಂಸ್ಕೃತಿಯಲ್ಲಿ ಭಿನ್ನವಾಗಿದ್ದರೂ ನಾವೆಲ್ಲರೂ ಒಂದೇ ಎನ್ನುವ ಭಾವ-ಭಾವನೆ ಇದೆ. ವಸುದೈವ ಕುಟುಂಬಕಂ, ಸರ್ವೇ ಜನಾ ಸುಖಿನೋ ಭವಂತು ಎಂದು ಭಾರತೀಯರು ಬದುಕುತಿದ್ದೇವೆ ಎಂದು ಹೇಳಿದರು.

ಭಾರತ ಈಗ 3ನೇ ದೊಡ್ಡ ಆರ್ಥಿಕ ರಾಷ್ಟ್ರವಾಗುತ್ತಿದೆ. ದೇಶದ ಸ್ಪಿರಿಟ್ ತಿಳಿದುಕೊಳ್ಳಲು ದೇಶದ ಮೂಲೆಮೂಲೆಗೂ ಹೋಗಬೇಕಾಗಿದೆ. ವಿಜ್ಞಾನ ವಿದೇಶದಿಂದ ಬಂದಿಲ್ಲ. ವಿಜ್ಞಾನ ಹುಟ್ಟಿರುವುದೇ ಭಾರತದಲ್ಲಿ ಎಂಬುದನ್ನು ನಾವು ಮರೆಯಬಾರದು. ನಮ್ಮ ಪೂರ್ವಿಕರು ಮಹಾನ್ ವಿಜ್ಞಾನಿಗಳಾಗಿದ್ದಾರೆ. ಭಾರತದ ದೇವಸ್ಥಾನಗಳು ಸಾವಿರಾರು ವರ್ಷಗಳಾಗಿದ್ದರೂ ಗಟ್ಟಿಯಾಗಿ ನಿಂತಿವೆ. ಆಧುನಿಕ ಜಗತ್ತಿನಲ್ಲಿ 100 ವರ್ಷ ಕೂಡ ಒಂದು ಕಟ್ಟಡ‌ ನಿಲ್ಲುವುದಿಲ್ಲ. ಇಂತಹ ತಂತ್ರಜ್ಞಾನ ನಮ್ಮಲ್ಲಿ ಮೊದಲೇ ಇತ್ತು. ನಮ್ಮ ಆಯುರ್ವೇದ ಕ್ಷೇತ್ರವು ಇಂದು ವಿಶ್ವಕ್ಕೆ ಮಾದರಿಯಾಗಿದೆ. ಭಾರತ ಜ್ಞಾನಭರಿತ ದೇಶವಾಗಿದೆ ಎಂದು ಅನಿಲ್ ಸಹಸ್ರಬುದ್ದೆ ಹೇಳಿದರು.

ಇದನ್ನೂ ಓದಿ | Amit Shah | ಬಿಜೆಪಿಯವರು ಭಾರತ್‌ ಮಾತಾಕಿ ಜೈ ಅಂದ್ರೆ, ಕಾಂಗ್ರೆಸ್‌ನವರು ಸೋನಿಯಾ ಮಾತಾಕಿ ಜೈ ಅಂತಾರೆ: ಸಿಎಂ ಬೊಮ್ಮಾಯಿ

Exit mobile version