Site icon Vistara News

Murder sketch reopened | ಶಾಸಕ ಎಸ್‌.ಆರ್‌. ವಿಶ್ವನಾಥ್‌ ಕೊಲೆ ಯತ್ನ ಪ್ರಕರಣಕ್ಕೆ ಮರುಜೀವ

SR Vishwanath MLA yelahanka

ಬೆಂಗಳೂರು: ಅದು ಬರೋಬ್ಬರಿ ಒಂದು ವರ್ಷದ ಹಿಂದೆ ದಾಖಲಾದ ಪ್ರಕರಣ. ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದರೆಂದು ಸಂಚಲನ ಸೃಷ್ಟಿಸಿದ್ದ ಪ್ರಕರಣ. ಆದರೆ, ತಾಂತ್ರಿಕ ಕಾರಣಗಳಿಂದ ಆ ಕೇಸ್ ಕೋರ್ಟ್‌ನಲ್ಲಿ ವಜಾ ಆಗಿತ್ತು. ಆದರೆ, ಮತ್ತೆ ಕೋರ್ಟ್ ಮೆಟ್ಟಿಲೇರಿದ ಶಾಸಕರು ಪ್ರಕರಣ ಮರು ತನಿಖೆ ನಡೆಸಬೇಕೆಂದು ಮಾಡಿಕೊಂಡ ಮನವಿ ಹಿನ್ನೆಲೆ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡಿರುವ ರಾಜಾನುಕುಂಟೆ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳಿಗೆ ಮತ್ತೆ ಸಂಕಷ್ಟ ಶುರುವಾಗಲಿದೆ.

ಒಂದು ವರ್ಷದ ಹಿಂದೆ, 2021 ರ ಡಿಸೆಂಬರ್‌ನಲ್ಲಿ ದಾಖಲಾಗಿದ್ದ ಕೇಸ್. ಪೊಲೀಸರು ತನಿಖೆ ನಡೆಸಿದ್ದರೂ ಕೂಡ ಕೋರ್ಟ್‌ನಲ್ಲಿ ಎಫ್ಐಆರ್ ವಜಾ ಆಗಿತ್ತು. ಇನ್ನೇನು ಪ್ರಕರಣ ಮರೆತೇ ಹೋಯಿತು ಎನ್ನುವ ಸಂದರ್ಭದಲ್ಲಿ ಹಳೇ ಕೇಸಿಗೆ ಮರುಜೀವ ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ 2021ರ ಡಿಸೆಂಬರ್‌ನಲ್ಲಿ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಕೋರ್ಟ್‌ನಲ್ಲಿ ವಜಾಗೊಂಡಿತ್ತು.

ಇದೀಗ ಹಳೇ ಕೇಸ್ ಬಗ್ಗೆ ಮರು ತನಿಖೆ ನಡೆಸಲು ಕೋರ್ಟ್ ಆದೇಶಿಸಿದ್ದು, ಇದರಿಂದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್‌ಗೆ ಸಂಕಷ್ಟ ಎದುರಾಗಿದೆ. ಈ ಹಿಂದೆ ದಾಖಲಿಸಿದ್ದ ಎಫ್ಐಆರ್ ವಜಾಗೊಂಡ ಬಳಿಕ ಶಾಸಕ ಎಸ್ ಆರ್ ವಿಶ್ವನಾಥ್ ಕೇಸ್ ಮರು ತನಿಖೆಗೆ ಆಗ್ರಹಿಸಿ ಪಿಸಿಆರ್ ಹಾಕಿದ್ದರು. ಅರ್ಜಿ ವಿಚಾರಣೆ ನಡೆಸಿದ ಎರಡನೇ ಎಸಿಜೆಎಂ ನ್ಯಾಯಾಲಯ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಎಫ್ಐಆರ್ ದಾಖಲು ಮಾಡಲಾಗಿದೆ.

ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಹಾಗೂ ಕುಳ್ಳ ದೇವರಾಜ್ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರು ಕುಳ್ಳ ದೇವರಾಜ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಎರಡನೇ ಎಸಿಜೆಎಂ ನ್ಯಾಯಾಲಯದಿಂದ ಪಿಸಿಆರ್ ವರದಿ ಬಂದಿದೆ. ಅದರಂತೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಎರಡನೇ ಆರೋಪಿ ಕುಳ್ಳ ದೇವರಾಜ್ ನನ್ನ ಬಂಧನ ಮಾಡಲಾಗಿದೆ.

ಪ್ರಕರಣ ರೀಓಪನ್ ಆಗಿದ್ದು, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣಗೆ ಹೊಸ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣೆ ತಯಾರಿ ವೇಳೆಯಲ್ಲೆ ಪೊಲೀಸರ ತನಿಖೆ ಸಹ ಆರಂಭವಾಗಿದ್ದು, ಆರೋಪಿಗಳಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ | Murder case | ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ?; ಉದ್ಯಮಿ ಪುತ್ರನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!

Exit mobile version