ಬೆಳಗಾವಿ: ಗಡಿ ಭಾಗದಲ್ಲಿ ‘ಕನ್ನಡದ ಸ್ವಾಮೀಜಿ’ ಎಂದೇ ಖ್ಯಾತಿಯಾಗಿದ್ದ ಚಿಂಚಣಿಯ ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿ (Sri Allamaprabhu Swamiji) (63) ಅವರು ಭಾನುವಾರ (ನವೆಂಬರ್ 12) ಲಿಂಗೈಕ್ಯರಾಗಿದ್ದಾರೆ. ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ.
ಗಡಿ ಭಾಗದಲ್ಲಿ ಚಿಂಚಣಿ ಶ್ರೀಗಳು ಕನ್ನಡದ ಸ್ವಾಮೀಜಿ ಎಂದೇ ಖ್ಯಾತರಾಗಿದ್ದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಮಠದ ಸ್ವಾಮೀಜಿಯಾಗಿದ್ದ ಇವರು ಅಪಾರ ಭಕ್ತರನ್ನು, ಅನುಯಾಯಿಗಳನ್ನು ಹೊಂದಿದ್ದರು. ಕೆಲ ದಿನಗಳಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಸ್ವಾಮೀಜಿ ಅಗಲಿಕೆಯಿಂದಾಗಿ ಸಾವಿರಾರು ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಭಾನುವಾರವೇ ಸ್ವಾಮೀಜಿಯವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನೂರಾರು ಭಕ್ತರು ಮಠದ ಬಳಿ ಜಮಾಯಿಸಿದ್ದಾರೆ. ಇನ್ನೂ ನೂರಾರು ಭಕ್ತರು ಮಠದತ್ತ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲ ದಿನಗಳ ಹಿಂದಷ್ಟೇ ಬೆಳಗಾವಿ ಜಿಲ್ಲೆಯ ಅರಭಾವಿ ಮಠದ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ (64) ಅವರು ಹೃದಯಾಘಾತದಿಂದ ಲಿಂಗೈಕ್ಯರಾದರು. ಮಠದಲ್ಲಿರುವಾಗಲೇ ಸ್ವಾಮೀಜಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಗೋಕಾಕ್‌ನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದರು.