Site icon Vistara News

Eco-Friendly Temple | ಪಂಚಭೂತಗಳಿಂದ ನಿರ್ಮಿತವಾದ ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಶ್ರೀ ಪ್ರಸನ್ನನಾಥ ಸ್ವಾಮೀಜಿ

Eco-Friendly Temple

ಮಂಡ್ಯ: ನಮ್ಮ ಸನಾತನ ಸಂಸ್ಕೃತಿಯಲ್ಲಿ ಪ್ರಕೃತಿಗೆ ವಿಶೇಷ ಸ್ಥಾನ ನೀಡಲಾಗಿದೆ. ಪಂಚಭೂತಗಳಿಂದ ನಿರ್ಮಿತವಾದ ಪ್ರಕೃತಿ ನಮ್ಮನ್ನು ಸದಾ ಪೋಷಿಸುತ್ತಾ ಬಂದಿದೆ. ಹೀಗಾಗಿ ಈ ಪ್ರಕೃತಿಯ ಸಂರಕ್ಷಣೆ (Eco-Friendly Temple) ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇದನ್ನು ಮರೆಯದೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಶ್ರೀ ಆದಿಚುಂಚನಗಿರಿ ಮಠದ ಶ್ರೀ ಪ್ರಸನ್ನನಾಥ ಮಹಾಸ್ವಾಮಿ ಹೇಳಿದರು.

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದಾಗಮ ವಿದ್ಯಾಲಯದಲ್ಲಿ ಪರ್ಯಾವರಣ ಸಂರಕ್ಷಣ ಗತಿವಿಧಿ ವತಿಯಿಂದ ಆಯೋಜಿಸಿದ್ದ ಪರಿಸರ ಸ್ನೇಹಿ ದೇವಾಲಯ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ನಮ್ಮ ಸನಾತನ ಸಂಸ್ಕೃತಿ ಮರೆಯುತ್ತಿದ್ದೇವೆ. ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಜೀವನಕ್ಕೆ ಮತ್ತು ಪರಿಸರ ಪೋಷಣೆಗೆ ಅಗತ್ಯವಾದ ಎಲ್ಲಾ ಅಂಶಗಳೂ ಸಹ ಅಡಗಿದೆ. ಅವುಗಳ ಅರಿವು ಮೂಡಿಸಿಕೊಂಡು ಪರಿಸರ ಪೋಷಣೆ ಮಾಡಬೇಕು ಎಂದು ನುಡಿದರು.

ಧಾರ್ಮಿಕ ದತ್ತಿ ಇಲಾಖೆಯ ನಿತಿನ್ ಮತ್ತು ತಂಡ ವಿವಿಧ ಚಟುವಟಿಕೆಗಳು ಮತ್ತು ಪ್ರಾತ್ಯಕ್ಷಿಕೆ ಮೂಲಕ ದೇವಸ್ಥಾನಗಳಲ್ಲಿ ತ್ಯಾಜ್ಯ ನಿರ್ವಹಣೆಯ ಮಹತ್ವ ತಿಳಿಸಿಕೊಟ್ಟರು.

ಪರ್ಯಾವರಣ ಸಂರಕ್ಷಣ ಗತಿವಿಧಿ ಅಖಿಲ ಭಾರತ ತಂಡದ ಸದಸ್ಯರಾದ ಗಣಪತಿ ಹೆಗಡೆ, ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ವೆಂಕಟೇಶ ಸಂಗನಾಳ, ಧಾರ್ಮಿಕ ಪರಿಷತ್ ಸದಸ್ಯರಾದ ಗೋವಿಂದ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಶೇಷ ಸಂಕಲ್ಪ
ಪ್ರತಿ ದೇವಾಲಯದ ಆವರಣದಲ್ಲಿ ವೃಕ್ಷಾರೋಪಣ ಮತ್ತು ಸಂರಕ್ಷಣೆ, ದೇವಸ್ಥಾನಗಳಲ್ಲಿ ಪಾಲಿಥೀನ್ ನಿಷೇಧ, ದೇವರಿಗೆ ಸಮರ್ಪಿಸಿದ ಹೂವುಗಳಿಂದ ಜೈವಿಕ ಗೊಬ್ಬರ (ತ್ಯಾಜ್ಯ ನಿರ್ವಹಣೆ), ಜಲ ಸಂರಕ್ಷಣೆ, ಇಂಧನ ಸಂರಕ್ಷಣೆ, ಜೀವ ವೈವಿಧ್ಯತೆ ಸಂರಕ್ಷಣೆ ಮಾಡುವ ಬಗ್ಗೆ ಕರ್ನಾಟಕದ ವಿವಿಧ ಭಾಗಗಳಿಂದ ಭಾಗವಹಿಸಿದ 220 ಅರ್ಚಕರು ಮತ್ತು ಆಡಳಿತ ಮಂಡಳಿ ಸದಸ್ಯರಿಂದ ವಿಶೇಷ ಸಂಕಲ್ಪ ಮಾಡಲಾಯಿತು. ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಕೂಡ ಈ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲು ಕೋರಿಕೊಳ್ಳಲಾಯಿತು.

ಇದನ್ನೂ ಓದಿ | Veerashaiva Lingayat Mahasabha | ವೀರಶೈವ ಲಿಂಗಾಯತ ಮಹಾ ಅಧಿವೇಶನ ಮುಂದಕ್ಕೆ; ಫೆಬ್ರವರಿಯಲ್ಲಿ ನಡೆಸಲು ತೀರ್ಮಾನ

Exit mobile version