ಬೆಂಗಳೂರು: 3 ದಶಕಗಳ ಮೊದಲ ಹಂತದ ಹೋರಾಟ ಯಶಸ್ಸು ಕಂಡಿದೆ. ಪಂಚಮಸಾಲಿ ಸಮುದಾಯದ ಪ್ರತಿಯೊಬ್ಬರಿಗೂ ಮೀಸಲಾತಿಯ ಲಾಭ ದೊರಕಿಸಿಕೊಡುವ 2ನೇ ಹಂತದ ಹೋರಾಟಕ್ಕೆ ಹರಿಹರ ಪೀಠ ಅಣಿಯಾಗಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿಯ ಮೂಲಕ ಶೇ. 7 ರಷ್ಟು ಪ್ರಾತಿನಿಧ್ಯ ನೀಡುವ ಸ್ಪಷ್ಟ ನಿರ್ಧಾರದ ಘೋಷಣೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹರಿಹರ ಪಂಚಮಸಾಲಿ ಪೀಠ, ಸಮುದಾಯಕ್ಕೆ ಮೀಸಲಾತಿ ದೊರಕಿಸಿಕೊಡುವ ಪ್ರಾಥಮಿಕ ಗುರಿಯೊಂದಿಗೆ ಸ್ಥಾಪಿಸಲಾದ ಪೀಠವಾಗಿದೆ. ತಾವು ಈ ಪೀಠದ ಪೀಠಾಧ್ಯಕ್ಷರಾದ ನಂತರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದೆವು ಎಂದು ಹೇಳಿದರು.
ಮೀಸಲಾತಿ ಹೋರಾಟವನ್ನು ಸೂಕ್ತ ರೀತಿಯಲ್ಲಿ ಮುನ್ನಡೆಸುವ ಮೂಲಕ ಆಯೋಗಕ್ಕೆ ಸೂಕ್ತ ದಾಖಲಾತಿಯನ್ನು ಸಲ್ಲಿಸಿದ್ದೆವು. ಸೂಕ್ತ ದಾಖಲಾತಿ ಹಾಗೂ ಸಮರ್ಪಕವಾದ ವಾದದ ಪರಿಣಾಮವಾಗಿ ಹಿಂದುಳಿದ ಆಯೋಗ ಮಧ್ಯಂತರ ವರದಿಯನ್ನು ನೀಡಿದೆ. ಈ ವರದಿಯ ಅನ್ವಯ ಹಾಗೂ ರಾಷ್ಟ್ರೀಯ ನಾಯಕರೊಂದಿಗಿನ ಚರ್ಚೆ ಫಲ ನೀಡಿದ್ದು, ಈಗ ಮೀಸಲಾತಿಯ ಸ್ಪಷ್ಟ ಚಿತ್ರಣ ದೊರೆತಿದೆ. ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ ತಿಳಿಸಿದರು.
ಇದನ್ನೂ ಓದಿ | Corporation: ಹಿಂದುಳಿದ ವರ್ಗಗಳ ಪ್ರವರ್ಗ-1ರ ಪಿಂಜಾರ, ನದಾಫ್, ಇತರೆ 13 ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪನೆ
ನಮ್ಮ ಸಮುದಾಯಕ್ಕೆ ಶೈಕ್ಷಣಿಕ ಹಾಗೂ ಸಾಮಾಜಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯುವುದು ಅಗತ್ಯವಿತ್ತು. ಅದು ಈಡೇರಿದೆ. ಆದರೆ, ಈ ಆದೇಶ ಅನುಷ್ಠಾನಗೊಂಡು ನಮ್ಮ ಸಮುದಾಯದ ಎಲ್ಲರಿಗೂ ಅದರ ಸದುಪಯೋಗ ಆಗಬೇಕು. ಈ ನಿಟ್ಟಿನಲ್ಲಿ ನಾವು ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಎರಡನೇ ಹಂತದ ಹೋರಾಟದಲ್ಲಿ ತೊಡಗಿಕೊಳ್ಳುತ್ತೇವೆ. ಎಲ್ಲರಿಗೂ ಮೀಸಲಾತಿಯ ಲಾಭ ದೊರಕಿಸಿಕೊಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಹೇಳಿದರು.
ಈಗಾಗಲೇ ಕೇಂದ್ರ ಒಬಿಸಿಯ ಪಟ್ಟಿನಲ್ಲಿ ಪಂಚಮಸಾಲಿಗಳನ್ನು ಸೇರಿಸಬೇಕು ಎನ್ನುವ ಪ್ರಸ್ತಾಪ ಮುಖ್ಯ ಕಾರ್ಯದರ್ಶಿಗಳ ಮುಂದಿದೆ. ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಇಲ್ಲಿಗೆ ವರ್ಗಾಯಿಸಿದ್ದು ಅದರ ಬಗ್ಗೆಯೂ ನಿರಂತರ ಹೋರಾಟ ನಡೆಯಲಿದೆ ಎಂದು ಹೇಳಿದರು.