ಕೊಪ್ಪಳ: ಬಿಜೆಪಿ ನಾಯಕರನ್ನು ಸೀಳು ನಾಯಿಗೆ ಹೋಲಿಕೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಎರಡು ನಾಲಿಗೆಯ ಹಾವು ಹಾಗೂ ಭಸ್ಮಾಸುರ ಎಂದು ಸಚಿವ ಬಿ. ಶ್ರೀರಾಮುಲು ಕಿಡಿಕಾರಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪಂಪಾಸರೋವರದ ಜಯಲಕ್ಷ್ಮಿ ದೇವಿ ದೇಗುಲ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಎರಡು ನಾಲಿಗೆಯ ಹಾವು. ಅವರ ಮಾತನ್ನು ಅವರ ಪಕ್ಷದವರೆ ತಿರಸ್ಕಾರ ಮಾಡುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಮೋದಿ, ಆರ್‌ಎಸ್‌ಎಸ್, ಬಿಜೆಪಿ ಬಗ್ಗೆ ಮಾತನಾಡೋದೆ ಅವರ ಕೆಲಸ. ಪಕ್ಷದಲ್ಲಿ ಡಿ.ಕೆ. ಶಿವಕುಮಾರ್ ಸೇರಿ ಇನ್ನಿತರರನ್ನು ಯಾವ ರೀತಿ ಮುಗಿಸಬೇಕು ಎಂಬ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾರೆ. ಅವರಿಗೆ ಸಿಎಂ ಖುರ್ಚಿ ಮಾತ್ರ ಕಾಣುತ್ತಿದೆ, ಆದರೆ ಅದು ಭ್ರಮೆ ಎಂದರು.
ಸಿದ್ದರಾಮಯ್ಯ ಈವರೆಗೆ ಒಂದೂ ಪಾರ್ಟಿಯಲ್ಲಿ ಪ್ರಮಾಣಿಕರಾಗಿಲ್ಲ, ಪ್ರಚಾರಕ್ಕಾಗಿ ಬಿಜೆಪಿ ನಾಯಕರು ಹಾಗೂ ಆರ್‌ಎಸ್‌ಎಸ್ ಅನ್ನು ಬೈಯ್ಯುತ್ತಾರೆ. ಸಿದ್ದರಾಮಯ್ಯ ಸೀಳು ನಾಲಿಗೆಯನ್ನು ಸರಿ ಮಾಡಿಕೊಳ್ಳಬೇಕು. ಸತ್ಯ ಹರಿಶ್ಚಂದ್ರನ ತರಹ ಮಾತನಾಡುವ ಸಿದ್ದರಾಮಯ್ಯ ತನ್ನ ವರ್ಚಸ್ಸನ್ನು ಕಳೆದುಕೊಂಡಿದ್ದಾರೆ. ಅವರ ಮಾತನ್ನು ಅವರ ಪಕ್ಷದ ನಾಯಕರೇ ತಿರಸ್ಕಾರ ಮಾಡುತ್ತಾರೆ. ಸಿದ್ದರಾಮಯ್ಯ ಎಲ್ಲಿ ಹೋಗುತ್ತಾರೋ ಅಲ್ಲಿನ ನಾಯಕರನ್ನು ಮುಗಿಸುತ್ತಾರೆ. ಅವರು ಒಂದು ರೀತಿ ಭಸ್ಮಾಸುರ ಇದ್ದಂತೆ. ಸಿದ್ದರಾಮಯ್ಯ ಬದಾಮಿಯಲ್ಲಿ ಈ ಬಾರಿ ಸ್ಪರ್ಧಿಸಿದರೆ ನಾನು ಸ್ಪರ್ಧಿಸಬೇಕು ಬೇಡವೋ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದರು.
ಇದನ್ನೂ ಓದಿ | ಭದ್ರಾವತಿ: 24 ವರ್ಷಗಳ ನಂತರ ನಡೆದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ
ಮುಂದಿನ ಸಿಎಂ ವಿಜಯೇಂದ್ರ ಎಂಬ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ವಿಜಯೇಂದ್ರ ಅಭಿಮಾನಿಗಳು ಅಭಿಪ್ರಾಯ ಹೇಳುವುದು ಸಹಜ. ಆದರೆ ಎಲ್ಲ ತೀರ್ಮಾನವನ್ನು ಬಿಜೆಪಿ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುತ್ತಾರೆ ಎಂದರು.
ಪಂಪಾಸರೋವರದ ಜಯಲಕ್ಷ್ಮಿ ದೇವಿ ಮೂರ್ತಿ ತೆರವು ಸಂದರ್ಭದಲ್ಲಿ ಒಂದಿಷ್ಟು ಗೊಂದಲವಾಗಿತ್ತು, ಈಗ ಅದು ನಿವಾರಣೆಯಾಗಿದ್ದು, ದೇವಿ ಮೂಲವಿಗ್ರಹಕ್ಕೆ ಯಾವುದೇ ರೀತಿ ಧಕ್ಕೆಯಾಗಿಲ್ಲ. ದೇವಾಲಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಅಂಜನಾದ್ರಿ ಅಭಿವೃದ್ದಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಭಾಗದ ಜನಪ್ರತಿನಿಧಿಗಳೊಂದಿಗೆ ನಾನು ಸಿಎಂ ಅವರಿಗೆ ಮನವಿ ಮಾಡುತ್ತೇನೆ ಎಂದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತನಾಡಿ, ಪಂಪಾಸರೋವರ ಜೀರ್ಣೋದ್ಧಾರದ ಹಿಂದೆ ಶ್ರೀರಾಮುಲುಗಾಗಲಿ, ನಮಗಾಗಲಿ ರಾಜಕೀಯ ಉದ್ದೇಶವಿಲ್ಲ. ಇದು ಭಕ್ತಿ ಶ್ರದ್ಧೆಯಿಂದ ಮಾಡಿರುವ ಕಾರ್ಯವಾಗಿದೆ. ಶ್ರೀರಾಮುಲು ಏನು, ಅವರ ಶಕ್ತಿ ಏನು ಎಂಬುವುದು ಜಗತ್ತಿಗೆ ಗೊತ್ತು. ಒಳ್ಳೆಯ ಕಾರ್ಯ ಮಾಡುವಾಗ ಒಂದಿಷ್ಟು ಟೀಕೆ ಟಿಪ್ಪಣಿಗಳು ಬರುವುದು ಸಹಜ. ವಿದ್ಯಾರಣ್ಯರು ತಪಸ್ಸು ಮಾಡಿ ಬಂಗಾರದ ಮಳೆ ಸುರಿಸಿದ ಪ್ರದೇಶವಿದು, ಈ ಪುಣ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರೀರಾಮುಲು ಜೀರ್ಣೋದ್ಧಾರ ಮಾಡಿದ್ದಾರೆ ಎಂದರು.
ನಮ್ಮಲ್ಲಿ ಒಗ್ಗಟ್ಟಿದೆ: ಶಾಸಕ ಸೋಮನಾಥರೆಡ್ಡಿ ಮಾತನಾಡಿ, ಬಿಜೆಪಿ ನಾಯಕರನ್ನು ಸೀಳು ನಾಯಿಗೆ ಸಿದ್ದರಾಮಯ್ಯಗೆ ಹೊಲಿಸಿರುವುದು ಸರಿಯಲ್ಲ, ಅದು ಅವರಿಗೆ ಶೋಭೆ ತರುವುದಿಲ್ಲ. ದೇಶಭಕ್ತಿಯ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ. ನಾಯಿ ವಿಶ್ವಾಸದ ಪ್ರಾಣಿ. ಸಿದ್ದರಾಮಯ್ಯ ಈಗ ಏಕಾಂಗಿಯಾಗಿದ್ದು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಅವರಿಗೆ ಈಗ ಕ್ಷೇತ್ರವಿಲ್ಲ, ಮಾಜಿ ಸಿಎಂಗೆ ಇಂತಹ ಸ್ಥಿತಿ ಬರಬಾರದು. ನಮ್ಮಲ್ಲಿ ಒಗ್ಗಟ್ಟಿದೆ, ನಾಯಕತ್ವ ಗುಣವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಚಾಮರಾಜಪೇಟೆ ಈದ್ಗಾ ಮೈದಾನ ಸರ್ವ ಜನಾಂಗದ ಸ್ವತ್ತು!