ಮಂಡ್ಯ: ಶ್ರೀರಂಗಪಟ್ಟಣದ ವಿವಾದಿತ ಜಾಮಿಯಾ ಮಸೀದಿ (Srirangapatna issue) ಬಳಿ ಶನಿವಾರ ರಾತ್ರಿಯಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂದು ಸಂಘಟನೆ ಕಾರ್ಯಕರ್ತರು ಕೈಬಿಟ್ಟಿದ್ದಾರೆ. ಪೊಲೀಸರು ಹಿಂದು ಬಾಲಕನೊಬ್ಬನನ್ನು ಬಂಧಿಸಿದ್ದಲ್ಲದೆ ಆತನಿಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಸಂಘಟನೆಗಳ ಕಾರ್ಯಕರ್ತರು ಶನಿವಾರ ದಿನವಿಡೀ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಬಳಿಕ ಅದು ಜಾಮಿಯಾ ಮಸೀದಿ ಎದುರು ಭಾಗಕ್ಕೆ ಶಿಫ್ಟ್ ಆಗಿತ್ತು. ಒಂದು ಹಂತದಲ್ಲಿ ಹಿಂದು ಕಾರ್ಯಕರ್ತರು ಮಸೀದಿಯ ಒಳಗೆ ನುಗ್ಗಲೂ ಪ್ರಯತ್ನಿಸಿದ್ದರು. ಬಾಲಕನಿಗೆ ಬೆದರಿಕೆ ಹಾಕಿದ ಪೊಲೀಸರ ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರತಿಭಟನಾಕಾರರ ಪ್ರಧಾನ ಬೇಡಿಕೆಯಾಗಿತ್ತು. ಅಂತಿಮವಾಗಿ ತಡರಾತ್ರಿ ಪೊಲೀಸರ ಮೇಲೆ ಎಫ್‌ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಏನಿದು ಬೆದರಿಕೆ ಆರೋಪ?
ಡಿಸೆಂಬರ್ ನಾಲ್ಕರಂದು ನಡೆದ ಹನುಮ ಮಾಲಾ ಸಂಕೀರ್ತನೆ ಕಾರ್ಯಕ್ರಮದ ವೇಳೆ ಮುಸ್ಲಿಂ ಮನೆಯೊಂದರ ಮೇಲಿದ್ದ ಹಸಿರು ಬಾವುಟವನ್ನು ಕಿತ್ತು ಹಾಕಿ ಅಲ್ಲಿ ಕೇಸರಿ ಬಾವುಟ ಏರಿಸಿದ್ದು ಮತ್ತು ಮುಸ್ಲಿಮರ ಮನೆ ಮೇಲೆ ಬಾಳೆ ದಿಂಡು ಎಸೆದ ಪ್ರಕರಣಗಳು ಜರುಗಿದ್ದವು. ಬಾವುಟ ಏರಿಸಿದ್ದಕ್ಕೆ ಸಂಬಂಧಿಸಿ ಕೆಲವರ ಮೇಲೆ ಪ್ರಕರಣ ದಾಖಲಾಗಿತ್ತು. ಬಾಳೆ ದಿಂಡು ಎಸೆತ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಒಬ್ಬ ಬಾಲಕ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಗ್ರಾಮವೊಂದಕ್ಕೆ ಸೇರಿದ ಈ ಬಾಲಕನನ್ನು ಪತ್ತೆ ಹಚ್ಚಿದ ಪೊಲೀಸರು ಒಂದು ದಿನ ಆತನ ಮನೆಗೆ ದಾಳಿ ಮಾಡಿದ್ದರು. ಮನೆಯನ್ನು ಸುತ್ತುವರಿದು ನಿಂತರ ಪೊಲೀಸರು ಆತನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಸ್ಟೇಷನ್ ಬೇಲ್ ಮೇಲೆ ಬಿಟ್ಟು ಕಳುಹಿಸಿದ್ದರು.
ಆದರೆ, ಬಾಲಕ ಹೊರಗೆ ಬಂದ ಮೇಲೆ ಕಥೆಯೇ ಬದಲಾಯಿತು. ಬಾಲಕ ಠಾಣೆಯ ಒಳಗೆ ಏನಾಯಿತು ಎನ್ನುವುದನ್ನು ವಿವರಿಸುತ್ತಲೇ ಹಿಂದು ಸಂಘಟನೆಗಳ ಕಾರ್ಯಕರ್ತರು ಕೆರಳಿ ಕೆಂಡವಾದರು.
ಬಾಲಕ ಸ್ಟೇಷನ್‌ನಲ್ಲಿರುವ ಪೊಲೀಸರು ಆತನಿಗೆ ಬುದ್ಧಿವಾದ ಹೇಳುವಾಗ, ʻʻಜಗತ್ತಿನಲ್ಲಿ 58 ಮುಸ್ಲಿಂ ದೇಶಗಳಿವೆ. ನಿನ್ನ ಕತ್ತು ಕೊಯ್ತಾರೆ.. ನಿನಗ್ಯಾಕೆ ಇದೆಲ್ಲಾ ಯಾಕೆ ಬೇಕು?ʼʼ ಎಂದು ಕೇಳಿದ್ದರು ಎನ್ನಲಾಗಿದೆ.
ಬಾಲಕ ಈ ವಿಷಯವನ್ನು ಹೊರಗೆ ತಿಳಿಸುತ್ತಲೇ ಶನಿವಾರ ಮುಂಜಾನೆ ದೊಡ್ಡ ಮಟ್ಟದ ಹಿಂದು ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದರು. ಶ್ರೀರಂಗಪಟ್ಟಣ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಅವರು, ಬೆದರಿಕೆ ಹಾಕಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆ ಶಿಫ್ಟ್
ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಂಜೆಯಾಗುತ್ತಿದ್ದಂತೆಯೇ ಪ್ರತಿಭಟನೆಯನ್ನು ಅಹೋರಾತ್ರಿ ಧರಣಿಯಾಗಿ ಪರಿವರ್ತಿಸಲಾಯಿತು ಮತ್ತು ಅದನ್ನು ಜಾಮಿಯಾ ಮಸೀದಿ ಪರಿಸರಕ್ಕೆ ಶಿಫ್ಟ್ ಮಾಡಲಾಯಿತು. ಸ್ಥಳಕ್ಕೆ ಎಸ್ ಪಿ ಯತೀಶ್ ಭೇಟಿ ನೀಡಿ ಮನವಿ ಕೇಳಿದರೂ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಪ್ರತಿಭಟನಾಕಾರರು ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ಹನುಮ ಭಕ್ತರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಅವರದಾಗಿತ್ತು. ಹೀಗಾಗಿ ಹಲವು ಘೋಷಣೆಗಳು ಮೊಳಗಿದವು. ಈ ವೇಳೆ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಂತಿಮವಾಗಿ ಪೊಲೀಸರ ಮೇಲೆ ಎಫ್‌ಐಆರ್ ದಾಖಲಿಸಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.
ಏಳು ಪೊಲೀಸರ ಮೇಲೆ ಎಫ್‌ಐಆರ್
ಬಾಲಕನಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಪೊಲೀಸರ ಮೇಲೆ ಎಫ್‌ಐಆರ್ ಹಾಕಲಾಗಿದೆ.
ಉಮೇಶ, ಪ್ರಕಾಶ, ಕೃಷ್ಣ, ವಿಜಯ್, ಶರತ್, ಹರೀಶ್ ಮತ್ತು ಮಂಜುನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ. ಇವರು ಶುಕ್ರವಾರ ತಡರಾತ್ರಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತನ ಮನೆಗೆ ಹೋಗಿದ್ದರು. ಇವರಲ್ಲಿ ಪ್ರಕಾಶ್ ಅವರು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಸ್ಟೇಷನ್‌ನ ಸರ್ಕಲ್ ಇನ್ಸ್‌ಪೆಕ್ಟರ್.
ಇದನ್ನೂ ಓದಿ | Protest in Srirangapatna | ಜಾಮಿಯಾ ಮಸೀದಿಗೆ ನುಗ್ಗಲು ಹಿಂದು ಕಾರ್ಯಕರ್ತರ ಯತ್ನ; ಪೊಲೀಸ್ ಬಂದೋಬಸ್ತ್