Site icon Vistara News

ಮೇ 19ಕ್ಕೆ SSLC ಫಲಿತಾಂಶ ಪ್ರಕಟ, ಮೇ 16ರಿಂದಲೇ ಶಾಲೆಗಳ ಆರಂಭ ಎಂದ ಶಿಕ್ಷಣ ಸಚಿವ ನಾಗೇಶ್‌

B C NAGESH

ಮಡಿಕೇರಿ: ಈ ವರ್ಷದ SSLC ಫಲಿತಾಂಶಗಳನ್ನು ಮೇ 19ರಂದು ಘೋಷಣೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಘೋಷಿಸಿದ್ದಾರೆ. ಮಡಿಕೇರಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಪರಿಶೀಲನೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಮೇ 19ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಘೋಷಣೆ ಮಾಡಲಾಗುತ್ತದೆ. ಅಂದು ಬೆಳಗ್ಗೆ 10.30ರ ವೇಳೆಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಘೋಷಣೆ ಆಗುತ್ತದೆ. ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ನೋಂದಣೀ ಸಂಖ್ಯೆ ನಮೂದಿಸಿ ಫಲಿತಾಂಶವನ್ನು ತಿಳಿದುಕೊಳ್ಳಬಹುದು. ಅಂದು ಸಂಜೆಯ ವೇಳೆಗೆ ಎಲ್ಲ ಶಾಲೆಗಳಿಗೂ ಫಲಿತಾಂಶದ ಪ್ರತಿ ರವಾನೆ ಮಾಡಲಾಗುತ್ತದೆ. ಸಂಜೆಯಹೊತ್ತಿಗೆ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್‌ ಮೂಲಕವೂ ಫಲಿತಾಂಶ ಸಿಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | SSLC Results | ಮೇ ಮೂರನೇ ವಾರದಲ್ಲಿ ಫಲಿತಾಂಶ

ಶಾಲೆಗಳ ಆರಂಭದ ಕುರಿತು ಮಾತನಾಡಿದ ನಾಗೇಶ್‌, ಮೇ 16ರಿಂದ ಶಾಲೆಗಳನ್ನು ಆರಂಭ ಮಾಡಲಾಗುತ್ತದೆ ಎಂದರು. ಈ ಹಿಂದೆಯೂ ಮೇ 16ರಿಂದ ಶಾಲೆ ಆರಂಭ ಎಂದು ತಿಳಿಸಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ ಪತ್ರ ಬರೆದಿದ್ದರು. ಈಗ ಇನ್ನೂ ಬಿಸಲು ಹೆಚ್ಚಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸುವುದು ಕಷ್ಟವಾಗುತ್ತದೆ. ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಶಾಲೆ ಆರಂಭಿಸುವುದು ಬೇಡ. ಜೂನ್‌ 15ರವರೆಗೆ ಆರಂಭಿಸಬೇಡಿ ಎಂದಿದ್ದರು. ಕೆಲ ಪೋಷಕರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಆದರೆ ಶಾಲೆ ಆರಂಭವನ್ನು ಮುಂದೂಡುವುದಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿತ್ತು. ಈಗಾಗಲೆ ಕೋವಿಡ್‌ನಿಂದಾಗಿ ಎರಡು ವರ್ಷದಿಂದ ಕಲಿಕೆಯಲ್ಲಿ ಕುಂಠಿತವಾಗಿದೆ. ಇನ್ನೂ ಶಾಲೆ ಆರಂಭ ಮುಂದೂಡಿದರೆ ಶಿಕ್ಷಣಕ್ಕೆ ತೊಂದರೆ ಆಗುತ್ತದೆ ಎಂದು ತಿಳಿಸಿದ್ದರು. ಸಾಮಾನ್ಯವಾಗಿ ಮೇ 29ರಿಂದ ಶಾಲೆಗಳು ಆರಂಭವಾಗುತ್ತಿದ್ದವು. ಆದರೆ ಈ ವರ್ಷ ಕಲಿಕೆಯಲ್ಲಿ ಉಂಟಾಗಿರುವ ಕೊರತೆಯನ್ನು ಸರಿಪಡಿಸಲು ತುಸು ಮುಂಚೆಯೇ ಆರಂಭ ಮಾಡುವ ನಿರ್ಧಾರ ಮಾಡಲಾಗಿತ್ತು.

ಮೇ 16ರಿಂದಲೇ ಶಾಲೆಗಳಲ್ಲಿ ಸೇತುಬಂಧ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸುವ ಮೂಲಕ, ವಿಧಾನ ಪರಿಷತ್‌ ಸದಸ್ಯರ ಮನವಿಯನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿರಸ್ಕರಿಸಿದ್ದಾರೆ. ಜೂನ್‌ 15ರವರೆಗೆ ನಡೆಯುವ ಸೇತುಬಂಧ ತರಗತಿಗಳಲ್ಲಿ, 1-9ನೇ ತರಗತಿ ವಿದ್ಯಾರ್ಥಿಗಳು ಕಳೆದ ವರ್ಷ ಕಲಿತದ್ದನ್ನು ಮನನ ಮಾಡಿಕೊಳ್ಳುತ್ತಾರೆ. ನಂತರದಲ್ಲಿ ಈ ವರ್ಷದ ತರಗತಿಗಳು ಆರಂಭವಾಗುತ್ತವೆ.

ಇದನ್ನೂ ಓದಿ | ಶಿಕ್ಷಣದಲ್ಲಿ ಭಾರತೀಯತೆ ರೂಪಿಸಲು ಎಲ್ಲರ ಸಹಕಾರ ಬೇಕು: ವಿಶ್ವದರ್ಶನ ಸಂಭ್ರಮದಲ್ಲಿ ಸಚಿವ ಬಿ. ಸಿ. ನಾಗೇಶ್

Exit mobile version