Site icon Vistara News

SSLC Exam 2023 | ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ; ಮಾ. 31 ರಿಂದಲೇ ಎಕ್ಸಾಮ್‌ ಶುರು

SSLC Preparatory Exam

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ (SSLC Exam 2023) ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್‌ 31 ರಿಂದಲೇ ಪರೀಕ್ಷೆ ಆರಂಭವಾಗಲಿದೆ. ಏಪ್ರಿಲ್‌ 15 ಕ್ಕೆ ಪರೀಕ್ಷೆ ಕೊನೆಗೊಳ್ಳಲಿದೆ.

ತಾತ್ಕಾಲಿಕ ವೇಳಾಪಟ್ಟಿಲ್ಲಿ ಏಪ್ರಿಲ್‌ 1 ರಿಂದ ಪರೀಕ್ಷೆ ಆರಂಭವಾಗಲಿದೆ ಎಂದು ತಿಳಿಸಲಾಗಿತ್ತು. ಈ ಬದಲಾವಣೆ ಬಿಟ್ಟರೆ ಅಂತಿಮ ವೇಳಾಪಟ್ಟಿಯಲ್ಲಿ ಮತ್ಯಾವ ಬದಲಾವಣೆಯನ್ನೂ ಮಾಡಲಾಗಿಲ್ಲ.

ಮೊದಲ ದಿನದಂದು ಅಂದರೆ ಮಾರ್ಚ್‌ 31 ರಂದು ಕನ್ನಡ ಪರೀಕ್ಷೆಯೊಂದಿಗೆ ಪರೀಕ್ಷೆಗಳು ಆರಂಭವಾಗಲಿವೆ. ಆದರೆ ಏಪ್ರಿಲ್‌ 1, 2 ಮತ್ತು 3 ರಂದು ಪರೀಕ್ಷೆ ಇರುವುದಿಲ್ಲ. ಏ.3ರಂದು ಮಹಾವೀರ ಜಯಂತಿಯಾಗಿದ್ದರಿಂದ ಪರೀಕ್ಷೆ ನಡೆಸಲಾಗುವುದಿಲ್ಲ. ಏಪ್ರಿಲ್‌ 4 ರಂದು ಗಣಿತದ ಪರೀಕ್ಷೆ ನಡೆಯಲಿದೆ. ಏಪ್ರಿಲ್‌ 5 ರಂದು ಪರೀಕ್ಷೆ ಇರುವುದಿಲ್ಲ. ಏಪ್ರಿಲ್‌ 6 ರಂದು ದ್ವಿತೀಯ ಭಾಷೆಯ ಪರೀಕ್ಷೆ ನಿಗದಿಪಡಿಸಲಾಗಿದೆ.

ಏಪ್ರಿಲ್‌ 7 ರಂದು ಗುಡ್‌ಫ್ರೈಡೆಯಾಗಿರುವುದರಿಂದ ಪರೀಕ್ಷೆ ಇರುವುದಿಲ್ಲ. ಏಪ್ರಿಲ್‌ 10 ರಂದು ವಿಜ್ಞಾನದ ಪರೀಕ್ಷೆ ನಡೆಯಲಿದ್ದು, 12 ರಂದು ತೃತೀಯ ಭಾಷೆಯ ಪರೀಕ್ಷೆ ನಡೆಯಲಿದೆ. ಏಪ್ರಿಲ್‌ 15 ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಸಲಾಗುತ್ತದೆ.

ಅಂತಿಮ ವೇಳಾಪಟ್ಟಿ ಇಂತಿದೆ

ಪ್ರಥಮ ಭಾಷೆಗೆ 100 ಗರಿಷ್ಠ ಅಂಕಗಳು, ಉಳಿದ ವಿಷಯಗಳಿಗೆ ಪ್ರತಿ ವಿಷಯಕ್ಕೆ 80 ಅಂಗಳಂತೆ ಪರೀಕ್ಷೆ ನಿಗದಿಪಡಿಸಲಾಗಿದೆ. ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳ ಪರೀಕ್ಷೆ ಬರೆಯಲು 3 ಗಂಟೆ ಮತ್ತು ಪ್ರಶ್ನೆ ಪತ್ರಿಕೆ ಓದಲು 15 ನಿಮಷ ಹಾಗೂ ದ್ವಿತೀಯ ಮತ್ತು ತೃತೀಯ ಭಾಷೆಗಳಿಗೆ ಪರೀಕ್ಷೆ ಬರೆಯಲು 2ಗಂಟೆ 45ನಿಮಿಷ ಹಾಗೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ನೀಡಲಾಗುತ್ತದೆ.

ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ಮತ್ತು ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಅವಧಿ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: https://sslc.karnataka.gov.in/

ಇದನ್ನೂ ಓದಿ | PU Exam Date 2023 | ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ; ಮಾ.9 ರಿಂದಲೇ ಎಕ್ಸಾಮ್‌ ಶುರು

Exit mobile version