ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ (SSLC Exam 2023) ಅಂತಿಮ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಆದರೆ ಈಗ ಸರ್ಕಾರ ಮಹಾವೀರ ಜಯಂತಿಯ ಸರ್ಕಾರಿ ರಜೆ ದಿನವನ್ನು ಬದಲಾವಣೆ ಮಾಡಿರುವುದರಿಂದ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.
ರಾಜ್ಯ ಸರ್ಕಾರ ಮಂಗಳವಾರದಂದು ತಿದ್ದುಪಡಿ ಅಧಿಸೂಚನೆ ಹೊರಡಿಸಿ, ಸರ್ಕಾರಿ ರಜೆಯ ವೇಳಾಪಟ್ಟಿಯಲ್ಲಿ ಮಹಾವೀರ ಜಯಂತಿಗೆ ಏಪ್ರಿಲ್ 3 ಕ್ಕೆ ನಿಗದಿಯಾಗಿದ್ದ ರಜೆಯನ್ನು ಹಿಂದಕ್ಕೆ ಪಡೆದು, ಏ.4 ರಜೆ ಎಂದು ಘೋಷಿಸಿದೆ. ಇದರಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿಯೂ ಸಣ್ಣ ಬದಲಾವಣೆ ಮಾಡಬೇಕಾಗುತ್ತದೆ. ಏಕೆಂದರೆ ಸರ್ಕಾರಿ ರಜೆಯಂದು ಪರೀಕ್ಷೆ ನಡೆಸುವುದು ಕಷ್ಟ.
ಪರೀಕ್ಷಾ ವೇಳಾಪಟ್ಟಿಯಲ್ಲಿ ಏಪ್ರಿಲ್ 3 ರಂದು ಮಹಾವೀರ ಜಯಂತಿ ರಜೆ, ಏಪ್ರಿಲ್ 4 ರಂದು ಏಪ್ರಿಲ್ 4 ರಂದು ಗಣಿತದ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಿಸಲಾಗಿದೆ. ಈಗ ಈ ಪರೀಕ್ಷೆಯ ದಿನವನ್ನು ಹಿಂದೆ-ಮುಂದೆ ಮಾಡಬೇಕಾದ ಅನಿವಾರ್ಯತೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸಿಲುಕಿದೆ.
ಸರ್ಕಾರ ಮಂಗಳವಾರ ಈ ರಜೆ ಬದಲಾವಣೆಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿದೆ. ಈ ಕುರಿತು ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಹುತೇಕವಾಗಿ ಏಪ್ರಿಲ್ 3ರ ಸೋಮವಾರದಂದೇ ಗಣಿತದ ಪರೀಕ್ಷೆ ನಡೆಯುವ ಸಾಧ್ಯತೆಗಳಿವೆ.
ಇದನ್ನೂ ಓದಿ| SSLC Model Paper 2022-23 | ಮಾದರಿ ಪ್ರಶ್ನೆ ಪತ್ರಿಕೆ ಸಿಕ್ಕಿಲ್ಲವೇ? ಹೊಸ ವೆಬ್‌ಸೈಟ್ ನೋಡಿ