ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ (SSLC Exam Result) ಫಲಿತಾಂಶವು ಮೇ 8ರ ಬೆಳಗ್ಗೆ 11 ಗಂಟೆಗೆ ಪ್ರಕಟಗೊಳ್ಳಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ. ರಾಜ್ಯಾದ್ಯಂತ 3,305 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯು ಪೂರ್ಣಗೊಂಡಿದೆ.
ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ ಎಸ್ಎಸ್ಎಲ್ಸಿಯ ವಾರ್ಷಿಕ ಪರೀಕ್ಷೆಯಲ್ಲಿ (SSLC Exam 2023) ಈ ಬಾರಿ 15,498 ಶಾಲೆಗಳು ನೋಂದಾಯಿಸಿಕೊಂಡಿದ್ದು, 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆದಿದೆ.
ಈ ಬಾರಿ ಪರೀಕ್ಷೆಗೆ 5,833 ಸರ್ಕಾರಿ ಶಾಲೆಗಳು, 3,605 ಅನುದಾನಿತ ಶಾಲೆಗಳು, 6060 ಅನುದಾನರಹಿತ ಶಾಲೆಗಳು ನೋಂದಾಯಿಸಿಕೊಂಡಿದ್ದವು. ಒಟ್ಟು 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 7,94,611 ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ವಿದ್ಯಾರ್ಥಿಗಳು 20,750 ಹಾಗೂ 18,272 ಖಾಸಗಿ ಅಭ್ಯರ್ಥಿಗಳು, 8,862 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಜತೆಗೆ 2010ಕ್ಕಿಂತ ಹಿಂದಿನ ಸಾಲಿನವರು 301 ಮಂದಿ ಇದ್ದರೆ, 2010ಕ್ಕಿಂತ ಹಿಂದಿನ ಸಾಲಿನ ಪುನರಾವರ್ತಿತರಲ್ಲಿ 15 ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದರು. ಸರ್ಕಾರಿ ಶಾಲೆಗಳ 3,60,862 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 2,20,831, ಅನುದಾನರಹಿತ ಶಾಲೆಗಳ 2,61,118 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.
ಕಳೆದ ಏ.24ರಂದು ಮೌಲ್ಯಮಾಪನ ಪ್ರಕ್ರಿಯೆ (SSLC Evaluation) ) ಆರಂಭಗೊಂಡಿತ್ತು. ಮೇ 2ನೇ ವಾರದೊಳಗೆ ವಿಧಾನಸಭಾ ಚುನಾವಣೆ ಮತ್ತು ಫಲಿತಾಂಶ ಎರಡು ಇರುವುದರಿಂದ ಇದಕ್ಕೆ ಅಡ್ಡಿಯಾಗದಂತೆ ಫಲಿತಾಂಶವನ್ನು ಪ್ರಕಟಿಸಲು ಯೋಜಿಸಿತ್ತು.
ಇದನ್ನೂ ಓದಿ: Karnataka Election 2023: ಎಲೆಕ್ಷನ್, ಐಪಿಎಲ್ ಎಫೆಕ್ಟ್; ಪ್ರೇಕ್ಷಕರಿಲ್ಲದೆ ಚಿತ್ರಮಂದಿರಗಳು ಭಣಭಣ
ಈ ವೆಬ್ಸೈಟ್ ಲಿಂಕ್ ಕ್ಲಿಕ್ ಮಾಡಿ
ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲಿದೆ. karresults.nic.in ಮೂಲಕ ಫಲಿತಾಂಶವನ್ನು ತಿಳಿಯಬಹುದಾಗಿದೆ. ಬೆಳಗ್ಗೆ 11 ಗಂಟೆಯ ನಂತರ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.