Site icon Vistara News

SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು

#image_title

ಬೆಂಗಳೂರು: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿಯ ವಾರ್ಷಿಕ ಪರೀಕ್ಷೆಯು (SSLC Exam 2023) ಇಂದಿನಿಂದ (ಮಾರ್ಚ್‌ 31) ಆರಂಭವಾಗುತ್ತಿದೆ. ಈ ಬಾರಿ ಪರೀಕ್ಷೆಗೆ 15,498 ಶಾಲೆಗಳು ನೋಂದಾಯಿಸಿಕೊಂಡಿದ್ದು, 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಾರ್ಚ್ 31ರಿಂದ ಏಪ್ರಿಲ್‌ 15ರವರೆಗೆ ಪರೀಕ್ಷೆ ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಂತಿಮ ಹಂತದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ಈ ಬಾರಿ ಪರೀಕ್ಷೆಗೆ 5,833 ಸರ್ಕಾರಿ ಶಾಲೆಗಳು, 3,605 ಅನುದಾನಿತ ಶಾಲೆಗಳು, 6060 ಅನುದಾನರಹಿತ ಶಾಲೆಗಳು ನೋಂದಾಯಿಸಿಕೊಂಡಿವೆ. ಒಟ್ಟು 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಇದರಲ್ಲಿ ಹೊಸಬರು 7,94,611 ವಿದ್ಯಾರ್ಥಿ, ಪುನರಾವರ್ತಿತ ವಿದ್ಯಾರ್ಥಿಗಳು 20,750 ಹಾಗೂ 18,272 ಖಾಸಗಿ ಅಭ್ಯರ್ಥಿಗಳು, 8,862 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು, 2010ಕ್ಕಿಂತ ಹಿಂದಿನ ಸಾಲಿನವರು 301 ಮಂದಿ ಇದ್ದರೆ, 2010ಕ್ಕಿಂತ ಹಿಂದಿನ ಸಾಲಿನ ಪುನರಾವರ್ತಿತ 15 ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.

ಸರ್ಕಾರಿ ಶಾಲೆಗಳ 3,60,862 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 2,20,831, ಅನುದಾನರಹಿತ ಶಾಲೆಗಳ 2,61,118 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 3,305 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಜೆರಾಕ್ಸ್‌ ಸೆಂಟರ್‌ ಮತ್ತು ಸೈಬರ್‌ ಸೆಂಟರ್‌ಗಳನ್ನು ತೆರೆಯುವಂತಿಲ್ಲ.

ಕೆಎಸ್‌ಆರ್‌ಟಿಸಿ-ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಉಚಿತ

ಎಸ್‌ಎಸ್‌ಎಲ್‌ಸಿಯ ವಾರ್ಷಿಕ ಪರೀಕ್ಷೆ (SSLC Exam 2023) ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನಿಗಮದ ಎಲ್ಲ ಬಸ್‌ಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ.

ಪರೀಕ್ಷೆಯ ದಿನದಂದು ಅಂದರೆ ಮಾರ್ಚ್ 31 ರಿಂದ ಏಪ್ರಿಲ್‌ 15 ರವರೆಗೂ ವಿದ್ಯಾರ್ಥಿಗಳು ತಮ್ಮ ಹಾಲ್‌ ಟಿಕೆಟ್‌ ತೋರಿಸಿ ಪ್ರಯಾಣಿಸಬಹುದಾಗಿದೆ. ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ತೆರಳಲು ಮತ್ತು ವಾಪಸ್‌ ಮರಳಲು ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ: Karnataka Election 2023: ಬಿಜೆಪಿಯದ್ದು ಬಿಟ್ಟು ಕಾಂಗ್ರೆಸ್‌ ಪೋಸ್ಟರ್‌ ಕಿತ್ತುಹಾಕಿದ ಬಿಬಿಎಂಪಿ; ಕಾಂಗ್ರೆಸ್‌ ಕಿಡಿ

ಈ ಸಂಬಂಧ ನಿಗಮದ ಎಲ್ಲ ಚಾಲಕ/ನಿರ್ವಾಹಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳು ಬಸ್ಸನ್ನು ಹತ್ತುವವರಿದ್ದಲ್ಲಿ ಹಾಗೂ ಬಸ್‌ ಹೋಗುವ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳು ಬಸ್ಸನ್ನು ಹತ್ತಲು/ ಇಳಿಯಲು ಅನುಕೂಲವಾಗುವಂತೆ ಕೋರಿಕೆ ನಿಲುಗಡೆ ನೀಡಲು ನಿಗಮ ಸಿಬ್ಬಂದಿಗೆ ಸೂಚಿಸಿದೆ.

Exit mobile version