Site icon Vistara News

SSLC Examination : ತಮಿಳುನಾಡು ಮೂಲದ ವಿದ್ಯಾರ್ಥಿಗೆ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಿದ ಹೈಕೋರ್ಟ್‌

Karnataka High Court

Karnataka High Court

ಬೆಂಗಳೂರು: ಶುಕ್ರವಾರದಿಂದ (ಮಾರ್ಚ್‌ 31ರಿಂದ) ಆರಂಭವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ (SSLC Examination) ಸಂಬಂಧಿಸಿ ಕೋರ್ಟ್‌ ಮೆಟ್ಟಿಲು ಹತ್ತಿದ ಒಂದು ಪ್ರಕರಣದಲ್ಲಿ ನ್ಯಾಯಾಲಯವು ತಮಿಳುನಾಡು ಮೂಲದ ವಿದ್ಯಾರ್ಥಿಗೆ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಾದರೆ ತೃತೀಯ ಭಾಷೆಯಾಗಿಯಾದರೂ ಕನ್ನಡವನ್ನು ಅಧ್ಯಯನ ಮಾಡಿರುವುದು ಕಡ್ಡಾಯ ಎಂದು ಸ್ಪಷ್ಟಪಡಿಸಲಾಗಿತ್ತು. ಆದರೆ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ವಿದ್ಯಾರ್ಥಿಗೆ ವಿನಾಯಿತಿ ನೀಡಲಾಗಿದೆ.

ಬೆಂಗಳೂರಿನ ವಿದ್ಯಾಭಾರತಿ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿ ಕಿಶೋರ್‌ ಈ ವಿನಾಯಿತಿ ಪಡೆದವನು. ಕನ್ನಡ ಭಾಷಾ ವಿಷಯ ಹೊರತುಪಡಿಸಿ ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷಾ ವಿಷಯಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವನಿಗೆ ಅನುಮತಿ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್ ಅವರ ನೇತೃತ್ವದ ವಿಭಾಗೀಯವು ಪೀಠವು ಅವನಿಗೆ ಈ ವಿಶೇಷ ಅವಕಾಶ ಒದಗಿಸಿದೆ.

ಕಿಶೋರ್‌ಗೆ ಶುಕ್ರವಾರದಿಂದ (ಮಾರ್ಚ್‌ 31ರಿಂದ) ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ತಕ್ಷಣ ಪ್ರವೇಶ ಪತ್ರ ಮತ್ತು ಇತರೆ ಅಗತ್ಯಗಳನ್ನು ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಸೂಚಿಸಿದ್ದು, ಅದರಂತೆ ವ್ಯವಸ್ಥೆ ನಡೆದಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?

ಕಿಶೋರ್ ತಮಿಳುನಾಡು ಮೂಲದವರು. 6ನೇ ತರಗತಿಯವರೆಗೆ ತಮಿಳುನಾಡಿನಲ್ಲಿ ಕಲಿತಿದ್ದಾನೆ. ಅವನ ತಂದೆಗೆ ಬೆಂಗಳೂರಿಗೆ ವರ್ಗವಾದ ಕಾರಣ ಬೆಂಗಳೂರಿನ ಮಹಾಲಕ್ಷ್ಮೀಪುರಂನ ಬಿಜೆಎಸ್ ವರ್ಲ್ಡ್ ಶಾಲೆಯಲ್ಲಿ 7ನೇ ತರಗತಿಗೆ ಪ್ರವೇಶ ಪಡೆದಿದ್ದನು. ಕನ್ನಡ ಭಾಷೆಯ ಜ್ಞಾನವಿಲ್ಲದ ಕಾರಣ ಸಂಸ್ಕೃತ, ಹಿಂದಿ ಮತ್ತು ಇಂಗ್ಲಿಷ್ ಅನ್ನು ಭಾಷಾ ವಿಷಯವಾಗಿ ಅಧ್ಯಯನ ಮಾಡಿದ್ದನು. ನಂತರ 2022-23ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾಭಾರತಿ ಶಾಲೆಗೆ 10ನೇ ತರಗತಿಗೆ ಸೇರ್ಪಡೆಯಾಗಿದ್ದ.

ಈ ನಡುವೆ ಕನ್ನಡ ಭಾಷೆ ಕಡ್ಡಾಯ ಎಂಬ ವಿಚಾರ ಬಂದಾಗ ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷಾ ವಿಷಯದಲ್ಲೇ ಅಧ್ಯಯನ ಮಾಡಲು ಡಿಡಿಪಿಐಯಿಂದ ಅವನುಮೋದನೆ ಪಡೆದಿದ್ದ. 2022ರ ಏಪ್ರಿಲ್‌ 22ರಂದು ಅನುಮೋದನೆ ಸಿಕ್ಕಿತ್ತು.

ಆದರೆ, ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಅಧ್ಯಯನ ಮಾಡದ ವಿದ್ಯಾರ್ಥಿಗೆ 10ನೇ ತರಗತಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದಿಲ್ಲ ಎಂದು ಶಾಲೆ ತಿಳಿಸಿತ್ತು. ಇದರಿಂದ ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿ ಭಾಷಾ ವಿಷಯದಲ್ಲೇ 10ನೇ ತರಗತಿ ಪರೀಕ್ಷೆ ಬರೆಯಲು ವಿದ್ಯಾರ್ಥಿ ಅನುಮತಿ ಕೋರಿದ್ದ. ಅದನ್ನು ತಿರಸ್ಕರಿಸಿದ್ದ ಎಸ್‌ಎಸ್‌ಎಲ್‌ಸಿ ಮಂಡಳಿ ನಿರ್ದೇಶಕರು ಮತ್ತು ಡಿಡಿಪಿಐ, ಪರೀಕ್ಷೆ ಬರೆಯಬೇಕಾದರೆ ವಿದ್ಯಾರ್ಥಿ ಕನ್ನಡವನ್ನು ಮೂರನೇ ಭಾಷಾ ವಿಷಯವಾಗಿ ಅಧ್ಯಯನ ಮಾಡಬೇಕು ಎಂದು 2023ರ ಜನವರಿ 16ರಂದು ಹಿಂಬರಹ ನೀಡಿದ್ದರು. ಇದನ್ನು ವಿದ್ಯಾರ್ಥಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಏಕ ಸದಸ್ಯ ಪೀಠವು ಸಂಸ್ಕೃತ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಕಿಶೋರ್‌ಗೆ ಅನುಮತಿ ನೀಡಿತ್ತು. ಅಲ್ಲದೆ, ಈ ತೀರ್ಪು ಮತ್ಯಾರಿಗೂ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ಮೆಲ್ಮನವಿ ಸಲ್ಲಿಸಿತ್ತು. ಇದೀಗ ಕೋರ್ಟ್‌ ಮೇಲ್ಮನವಿಯನ್ನು ವಜಾಗೊಳಿಸಿದೆ.

ಕೋರ್ಟ್‌ನ ಅಭಿಪ್ರಾಯವೇನು?

ರಾಜ್ಯ ಸರ್ಕಾರವು ಕನ್ನಡ ಭಾಷೆ ಕಲಿಕೆಯ ನಿಯಮ-2017 ಅನ್ನು ಪರಿಚಯಿಸಿದೆ. ಅದರಂತೆ ಎಲ್ಲಾ ಶಾಲೆಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಡ್ಡಾಯವಾಗಿ ಕಲಿಸಬೇಕು ಎಂಬ ಸರ್ಕಾರದ ವಾದವನ್ನು ಪೀಠವು ತಿರಸ್ಕರಿಸಿದೆ.

ವಿದ್ಯಾರ್ಥಿ ಕಿಶೋರ್ ಒಂದನೇ ತರಗತಿಯಿಂದ ಈವರೆಗೂ ಕನ್ನಡ ಭಾಷಾ ವಿಷಯವನ್ನೇ ಅಧ್ಯಯನ ಮಾಡಿಲ್ಲ. ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿ ಭಾಷಾ ವಿಷಯ ಓದಿದ್ದಾನೆ. ಹೀಗಿರುವಾಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪರೀಕ್ಷೆ ಬರೆಯಬೇಕು ಎಂಬುದು ಸರಿಯಲ್ಲ. ಇದು ಆತನ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೈಕೋರ್ಟ್ ಹೇಳಿದೆ.

ಆದರೆ, ಈ ತೀರ್ಪು ಕಿಶೋರ್‌ ಪ್ರಕರಣಕ್ಕೆ ಮಾತ್ರ ಅನ್ವಯವಾಗುತ್ತದೆ. ಉಳಿದ ಯಾವುದಕ್ಕೂ ಲಿಂಕ್‌ ಮಾಡಬಾರದು ಎಂದೂ ಕೋರ್ಟ್‌ ಹೇಳಿದೆ.

ಇದನ್ನೂ ಓದಿ : High Court order : ಅನಧಿಕೃತವಾಗಿ ಗೈರು ಹಾಜರಾದರೂ ಬಡ್ಡಿಸಹಿತ ವೇತನ ನೀಡಲು ಕೋರ್ಟ್‌ ಆದೇಶ; ಕಾರಣವೇನು?

Exit mobile version