ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಏಪ್ರಿಲ್ 24ರಂದು ಬಿಡುಗಡೆಯಾಗುವುದು ಅನುಮಾನ ಮೂಡಿಸಿದೆ. ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ಕೊಡಬೇಕೆ? ಅಥವಾ ಅಂಕ ಕೊಡಬೇಕೆ ಎಂಬ ವಿಷಯ ನ್ಯಾಯಾಲಯದ ಅಂಗಳದಲ್ಲಿದ್ದು ರಿಸಲ್ಟ್ ಮುಂದೆ ಹೋಗುವಂತೆ ಮಾಡಿದೆ. ಪರೀಕ್ಷೆ ಬರೆದ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಈ ಪ್ರಕರಣದ ವಿಚಾರಣೆ ನಾಳೆ ಏಪ್ರಿಲ್ 21ರಂದು ನಡೆಯಲಿದ್ದು, ನ್ಯಾಯಾಲಯದ ತೀರ್ಪು ಪ್ರಕಟವಾದ ನಂತರ ಫಲಿತಾಂಶ ಬಿಡುಗಡೆಯಾಗಲಿದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ ಮಾಹಿತಿ ನೀಡಿದೆ.
ಮರುಪರಶೀಲನೆಗೆ ಸರ್ಕಾರ ಮೇಲ್ಮನವಿ
ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ನಿರ್ಧಾರ ಪ್ರಕಟಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ತೃತೀಯ ಭಾಷೆಗೆ ಗ್ರೇಡ್ ಬದಲು ಮೊದಲಿನಂತೆ ಅಂಕಗಳನ್ನು ನೀಡಲು ಸೂಚಿಸಿತ್ತು. ನಂತರ ಈ ಆದೇಶವನ್ನು ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು ನಾಳೆ ವಿಚಾರಣೆ ನಡೆಯಲಿದೆ.
ತೃತೀಯ ಭಾಷೆಯ ಉತ್ತರ ಪತ್ರಿಕೆಗಳನ್ನು ಅಂಕಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಕೋರ್ಟ್ ತೀರ್ಪಿನ ಮೇಲೆ ಫಲಿತಾಂಶ ಪ್ರಕಟವಾಗುತ್ತದೆ. ಈಗಾಗಲೇ ಸಿಬಿಎಸ್‌ಇ ಫಲಿತಾಂಶ ಹೊರ ಬಿದ್ದಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕಾಗಿಯೇ ಪದವಿ ಪೂರ್ವ ಕಾಲೇಜುಗಳು ಕಾಯುತ್ತಿವೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆದಿದ್ದವು. ಈ ಪರೀಕ್ಷೆಯಲ್ಲಿ ಒಟ್ಟು 9,02,889 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು.
SSLC ಫಲಿತಾಂಶ ಪ್ರಕಟ ಯಾವಾಗ? ತಡ ಆಗುತ್ತಿರುವುದು ಏಕೆ?; ಇಲ್ಲಿದೆ ಮಾಹಿತಿ

