ಬೆಂಗಳೂರು: ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು, ನಾನಾ ಕಾರಣದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದವರಿಗಾಗಿ ಪೂರಕ ಪರೀಕ್ಷೆ ಸೋಮವಾರದಿಂದ (ಜೂನ್ ೨೭) ಜುಲೈ ೪ರವರೆಗೆ ನಡೆಯಲಿದೆ. ಇದಕ್ಕಾಗಿ ರಾಜ್ಯದ ೪೨೩ ಕೇಂದ್ರಗಳಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಈ ಬಾರಿ ೯೪೬೪೯ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.
ಎಸ್ಸೆಸ್ಸೆಲ್ಸಿ ಬೋರ್ಡ್ ನಡೆಸುವ ಈ ಪರೀಕ್ಷೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45ರ ವರೆಗೆ ನಡೆಯಲಿದೆ. ಮೊದಲ 15 ನಿಮಿಷ ಪ್ರಶ್ನೆ ಪತ್ರಿಕೆ ಓದಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಪರೀಕ್ಷೆಗೆ ಸಕಲ ರೀತಿಯಲ್ಲೂ ಸಜ್ಜು
ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿಯೇ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಪರೀಕ್ಷೆ ನಡೆಯುವ ಮುನ್ನ ಹಾಗೂ ನಂತರದ ಸಮಯದಲ್ಲಿ ಕೇಂದ್ರಗಳು ಸಂಪೂರ್ಣ ಸ್ಯಾನಿಟೈಸ್ ಆಗಬೇಕು. ಪರೀಕ್ಷಾ ಆವರಣ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ನಂತರವೇ ಪರೀಕ್ಷಾ ಕೊಠಡಿಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ. ಈ ಬಗ್ಗೆ ಎಲ್ಲ ಕೇಂದ್ರಗಳಲ್ಲಿ ಕಾರ್ಯಾಚರಣೆ ಭಾನುವಾರದಿಂದಲೇ ಆರಂಭಗೊಂಡಿದೆ.
ಕೇಂದ್ರಗಳಿಗೆ ನೀಡಿರುವ ಸೂಚನೆಗಳು
-ಪ್ರತಿ ಕೊಠಡಿಯಲ್ಲಿ ೨೦ ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಬೇಕು, ಒಂದು ಡೆಸ್ಕ್‌ನಲ್ಲಿ ಇಬ್ಬರು ಮಾತ್ರ ಇರಬೇಕು.
– ಸೂಚನಾ ಫಲಕದ ಮುಂದೆ ವಿದ್ಯಾರ್ಥಿಗಳು ಗುಂಪುಗೂಡದಂತೆ ಕ್ರಮ ಕೈಗೊಳ್ಳಬೇಕು.
– ನೀರಿನ ಬಾಟಲಿಗಳನ್ನು ವಿದ್ಯಾರ್ಥಿಗಳು ತಾವೇ ತರಬೇಕು.
– ವಿದ್ಯಾರ್ಥಿಗಳಿಗೆ ಥರ್ಮಲ್ ಟೆಸ್ಟ್ ನಡೆಸಿಯೇ ಒಳಗೆ ಬಿಡಬೇಕು.
– ಜ್ವರ, ಶೀತ, ಕೆಮ್ಮು ಇದ್ದರೆ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಬೇಕು.
ಸಮವಸ್ತ್ರ ಕಡ್ಡಾಯ, ಹಿಜಾಬ್ ಇಲ್ಲ
ಮಾರ್ಚ್ ವೇಳೆ ಮುಖ್ಯ ಪರೀಕ್ಷೆ ನಡೆದಾಗ ಶಾಲಾ ಸಮವಸ್ತ್ರ ಕಡ್ಡಾಯ ಮಾಡಲಾಗಿತ್ತು. ಇದು ಪೂರಕ ಪರೀಕ್ಷೆಗೂ ಮುಂದುವರಿದಿದೆ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವುದು ಕಡ್ಡಾಯವಾಗಿದೆ. ಹಿಜಾಬ್, ಬುರ್ಖಾ ಧರಿಸಿ ಪರೀಕ್ಷೆ ಬರೆಯುವಂತಿಲ್ಲ. ಹಿಜಾಬ್ ಬುರ್ಖಾ ಧರಿಸಿ ಬಂದವರಿಗೆ ವಿಶೇಷ ಕೊಠಡಿ ವ್ಯವಸ್ಥೆ ಇರಲಿದ್ದು ವಿದ್ಯಾರ್ಥಿಗಳು ಅಲ್ಲಿ ಬುರ್ಕಾ ತೆಗೆದಿರಿಸಬಹುದಾಗಿದೆ.
ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ಸೇವೆ
ಪೂರಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ಸಿನಲ್ಲಿ ಪರೀಕ್ಷಾ ದಿನಗಳಂದು ಮಾತ್ರ ಹಾಲ್ ಟಿಕೆಟ್ ತೋರಿಸಿ ಪರೀಕ್ಷಾ ಕೇಂದ್ರಕ್ಕೆ ಹೋಗಬಹುದಾಗಿದೆ. ಈ ಕುರಿತು ಸಂಸ್ಥೆಗಳು ಪ್ರಕಟಣೆ ಹೊರಡಿಸಿದ್ದು ನಗರ, ಹೊರವಲಯದಲ್ಲಿ ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಇದನ್ನೂ ಓದಿ |ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?
ಪೂರಕ ಪರೀಕ್ಷೆ ವೇಳಾಪಟ್ಟಿ ಹೀಗಿದೆ
ಜೂನ್ 27- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಜೂನ್ 28- ಪ್ರಥಮ ಭಾಷೆ (ಕನ್ನಡ, ತೆಲುಗು, ಇಂಗ್ಲಿಷ್, ಮರಾಠಿ, ತಮಿಳು, ಉರ್ದು, ಸಂಸ್ಕೃತ, ಇಂಗ್ಲೀಷ್
ಜೂನ್ 29- ದ್ವೀತಿಯ ಭಾಷೆ ( ಇಂಗ್ಲಿಷ್- ಕನ್ನಡ)
ಜೂನ್ 30- ಸಮಾಜಶಾಸ್ತ್ರ
ಜುಲೈ 1- ತೃತೀಯ ಭಾಷೆ ( ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ ,ಕೊಂಕಣಿ, ತುಳು,)
ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಮಡ್ ವೆಲ್‌ನೆಸ್
ಜುಲೈ 2- ಎಲಿಮೆಂಟ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಲ್ ಎಂಜಿನಿಯರಿಂಗ್-2, ಎಂಜಿನಿಯರಿಂಗ್ ಗ್ರಾಫಿಕ್ಸ್,-2,ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ
ಜುಲೈ 4- ಗಣಿತ, ಸಮಾಜಶಾಸ್ತ್ರ