ಬೆಂಗಳೂರು: ಮೊಬೈಲ್ ಖರೀದಿಸಲು ಬ್ರಿಗೇಡ್ ರಸ್ತೆಯಲ್ಲಿರುವ ಸ್ಯಾಮ್‌ಸಂಗ್ ಒಪೆರಾ ಹೌಸ್‌ಗೆ ತೆರಳುತ್ತಿದ್ದ ಗ್ರಾಹಕರಿಗೆ, ಇದೀಗ ಅಲ್ಲಿಯೇ ಕುಳಿತು ಕಾಫಿ ಸವಿಯಲು ಅವಕಾಶ ಸಿಕ್ಕಿದೆ. ಏಕೆಂದರೆ, ಓಪೆರಾ ಹೌಸ್‌ನಲ್ಲಿ “ಸ್ಟಾರ್‌ಬಕ್ಸ್” ಶಾಖೆಯನ್ನು (Starbucks-Samsung Opera House) ಹೊಸದಾಗಿ ತೆರೆಯಲಾಗಿದೆ.
70 ಸೀಟರ್ ಸ್ಟಾರ್‌ಬಕ್ಸ್ ಔಟ್‌ಲೆಟ್ ಅನ್ನು ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷ್ಯಾ ವಿಭಾಗದ ಅಧ್ಯಕ್ಷ ಮತ್ತು ಸಿಇಒ ಜೊಂಗ್‌ಬಮ್ ಪಾರ್ಕ್ ಹಾಗೂ ಟಾಟಾ ಸ್ಟಾರ್‌ಬಕ್ಸ್ ಸಿಇಒ ಸುಶಾಂತ್ ದಾಶ್ ಸ್ಯಾಮ್‌ಸಂಗ್ ಒಪೆರಾ ಹೌಸ್‌ನಲ್ಲಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸ್ಯಾಮ್‌ಸಂಗ್ ಸಿಇಒ ಜೊಂಗ್‌ಬಮ್ ಪಾರ್ಕ್, ಸಾಮಾನ್ಯವಾಗಿ ಮೊಬೈಲ್ ಅಥವಾ ಇತರೆ ಗ್ಯಾಜೆಟ್ಸ್ ಖರೀದಿಸುವವರು ಅದರ ಫೀಚರ್‌ಗಳನ್ನು ನೋಡುತ್ತಾ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಒಂದೇ ಕಡೆ ಇದ್ದು ಆಯಾಸಗೊಂಡು ಹೊರಗಡೆ ತೆರಳಿ ಕಾಫಿ ಅಥವಾ ಇತರೆ ಸ್ನ್ಯಾಕ್ಸ್ ತಿನ್ನಲು ಹುಡುಕಾಟ ನಡೆಸುತ್ತಾರೆ. ಹೀಗಾಗಿ ಗ್ರಾಹಕರಿಗೆ ಈ ಶ್ರಮ ನೀಡಬಾರದು ಎಂಬ ಕಾರಣಕ್ಕೆ ಸ್ಯಾಮ್‌ಸಂಗ್ ಕಚೇರಿಯಲ್ಲಿಯೇ ಸ್ಟಾರ್‌ಬಕ್ಸ್ ಶಾಖೆ ತೆರೆಯಲಾಗಿದೆ. ಇಲ್ಲಿ ಎಲ್ಲ ಬಗೆಯ ಸ್ನ್ಯಾಕ್ಸ್ ದೊರೆಯಲಿದೆ. ಇದರಲ್ಲಿ ಪ್ರೀಮಿಯಂ ಗುಣಮಟ್ಟದ ಕಾಫಿ, ಪಾನೀಯಗಳು, ವಿಶಿಷ್ಟ ತಿನಿಸುಗಳು ಸಹ ಸೇರಿವೆ ಎಂದು ತಿಳಿಸಿದರು.
ಹೊಸ ತಲೆಮಾರಿನ ಗ್ರಾಹಕರು ಕಳೆದ ನಾಲ್ಕು ವರ್ಷಗಳಿಂದಲೂ ಸ್ಯಾಮ್‌ಸಂಗ್ ಒಪೆರಾ ಹೌಸ್‌ಗೆ ಪ್ರೀತಿಯಿಂದ ಆಗಮಿಸಿದ್ದಾರೆ. ಈಗ, ಈ ಅನುಭವವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲಿದ್ದೇವೆ. ಇದರಲ್ಲಿ ಕನೆಕ್ಟೆಡ್ ಲಿವಿಂಗ್ ಝೋನ್, ಗೇಮಿಂಗ್ ಅರೆನಾ, ಹೋಮ್ ಥಿಯೇಟರ್ ಝೋನ್ ಹಾಗೂ ಇತರೆ ಸೌಲಭ್ಯಗಳನ್ನೂ ಕಲ್ಪಿಸಿದ್ದೇವೆ. ಈ ಅನುಭವಕ್ಕೆ ಸ್ಟಾರ್‌ಬಕ್ಸ್ ಸ್ಟೋರ್ ಅನ್ನೂ ಸೇರಿಸಲು ನಮಗೆ ಖುಷಿಯಾಗುತ್ತಿದೆ. ಈ ಕಾಲದ ಯುವಕರಿಗೆ ಇರುವ ಎರಡು ಅತ್ಯಂತ ಉತ್ಸಾಹಕರ ಸಂಗತಿಗಳಾದ ತಂತ್ರಜ್ಞಾನ ಮತ್ತು ಕಾಫಿಯನ್ನು ನಾವು ಈ ಮೂಲಕ ಒಟ್ಟಿಗೆ ತರುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ | ವಿಸ್ತಾರ Explainer | ಉಚಿತ ಕೊಡುಗೆಗಳು ಜನರಿಗೆ ಹಿತವೇ? ಅಭಿವೃದ್ಧಿಗೆ ಶಾಪವೇ? ಚುನಾವಣಾ ವರ್ಷದಲ್ಲಿ ಕಾವೇರಿದ ಚರ್ಚೆ