Site icon Vistara News

BY Vijayendra: ಶಿವಮೊಗ್ಗದಲ್ಲಿ ಬಿ.ವೈ. ವಿಜಯೇಂದ್ರಗೆ ಅದ್ಧೂರಿ ಸ್ವಾಗತ

BY Vijayendra

ಶಿವಮೊಗ್ಗ: ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಬುಧವಾರ ಆಗಮಿಸಿದ ಬಿ.ವೈ ವಿಜಯೇಂದ್ರ (BY Vijayendra) ಅವರಿಗೆ ಕಾಯಕರ್ತರಿಂದ ಅದ್ಧೂರಿ ಸ್ವಾಗತ ದೊರೆಯಿತು. ಅಭಿನಂದನಾ ಸಮಾರಂಭಕ್ಕೂ ಮುನ್ನ ನಡೆದ ಭವ್ಯ ಮೆರವಣಿಗೆಯಲ್ಲಿ ಬಿಜೆಪಿ ಹಿರಿಯ ನಾಯಕರಾದ ಮಾಜಿ ಸಿ.ಎಂ. ಬಿ.ಎಸ್‌. ಯಡಿಯೂರಪ್ಪ, ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ರಾಜ್ಯಾಧ್ಯಕ್ಷರನ್ನು ಬರಮಾಡಿಕೊಂಡರು.

ವಾದ್ಯ ಮೇಳ, ಪೂರ್ಣಕುಂಭದೊಂದಿಗೆ ನೂತನ ಅಧ್ಯಕ್ಷರಿಗೆ ಕಾರ್ಯಕರ್ತರು ಸ್ವಾಗತ ಕೋರಿದರು. ಮಹಿಳೆಯರು ಆರತಿ ಬೆಳಗಿದರೆ, ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ ವಿಜಯೇಂದ್ರ ಅವರನ್ನು ಬರಮಾಡಿಕೊಂಡರು. ಈ ವೇಳೆ ಸುಮಾರು 2 ಸಾವಿರ ಬೈಕ್ ಸವಾರರಿಂದ ರ‍್ಯಾಲಿ ನಡೆಯಿತು. ಮೆರವಣಿಗೆ ಮೂಲಕ ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ಬಿ.ವೈ. ವಿಜಯೇಂದ್ರ ಅವರನ್ನು ಜಿಲ್ಲಾಧ್ಯಕ್ಷರಾದ ಟಿ. ಡಿ. ಮೇಘರಾಜ್‌ ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಇದನ್ನೂ ಓದಿ | DK Shivakumar : ಸಿಬಿಐ ಕೇಸ್ ವಾಪಸ್‌; ಡಿ.ಕೆ ಶಿವಕುಮಾರ್‌ಗೆ ಹೈಕೋರ್ಟ್‌ ಬಿಗ್‌ ರಿಲೀಫ್‌

ನಂತರ ನಗರದ ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ರುದ್ರೆಗೌಡ, ಆರಗ ಜ್ಞಾನೇಂದ್ರ, ಮೋನಪ್ಪ ಭಂಡಾರಿ, ಮಾಜಿ ಶಾಸಕರಾದ ಎಂ.ಬಿ. ಭಾನುಪ್ರಕಾಶ್, ಹರತಾಳು ಹಾಲಪ್ಪ, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಅಭಿನಂದನಾ ಕಾರ್ಯಕ್ರಮದಲ್ಲಿ ಬಿ.ವೈ ವಿಜಯೇಂದ್ರ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಆಗುತ್ತೇನೆ ಎಂದು ನಾನು ಕೂಡ ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಫೋನ್ ಮಾಡಿ ವಿಷಯ ಹೇಳಿದಾಗ ನನಗೆ ಗಾಬರಿಯಾಯಿತು, ಜತೆಗೆ ಸಂತೋಷವೂ ಆಯಿತು. ಆಗ ನಮ್ಮ ತಂದೆಯ ಕಣ್ಣಲ್ಲಿ ಆನಂದ ಭಾಷ್ಪ ನೋಡಿದೆ. ಒಂದು ದಿನವೂ ಮನೆಯಲ್ಲಿ ಇರಬೇಡ ರಾಜ್ಯ ಸುತ್ತು ಎಂದು ತಂದೆ ಸೂಚಿಸಿರುವುದಾಗಿ ಹೇಳಿದರು.

ಎಲ್ಲಾ ಹಿರಿಯರ ಆಶೀರ್ವಾದದಿಂದ ಬಿಜೆಪಿಯನ್ನು ಸೇಫ್ ಲ್ಯಾಂಡ್ ಮಾಡುತ್ತೇನೆ. ಪ್ರಮಾಣ ಮಾಡಿ ಹೇಳುತ್ತೇನೆ ಈ ಬಾರಿ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ | Kanakadasa Jayanti: ಕಾಗಿನೆಲೆ ಪೀಠ ಯಾವತ್ತೂ ಒಂದು ಜಾತಿಯ ನೆಲೆಯಾಗದಿರಲಿ: ಸಿದ್ದರಾಮಯ್ಯ

ಡಿಕೆಶಿ ಪ್ರಕರಣದ ವಿಚಾರ ಪ್ರತಿಕ್ರಿಯಿಸಿ, ಇ.ಡಿ.ಯವರು ಪತ್ರ ಬರೆದಾಗ ಸಿಬಿಐ ತನಿಖೆಗೆ ಬಿಎಸ್‌ವೈ ಸರ್ಕಾರ ಅನುಮತಿ ಕೊಟ್ಡಿತ್ತು. ಡಿಕೆಶಿ ಕೇಸ್ ವಾಪಸ್ ಪಡೆಯುವ ಸಂಪುಟ ತೀರ್ಮಾನ ‌ಕಾನೂನು ಬಾಹಿರ, ಇದಕ್ಕೆ ನ್ಯಾಯಾಲಯದಲ್ಲಿ ಜಯ ಸಿಗಲ್ಲ. ಏನೇ ಪ್ರಯತ್ನ ಮಾಡಿದ್ರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಅಪರಾಧಿ ಎನ್ನುತ್ತಿಲ್ಲ, ತಪ್ಪು ಮಾಡಿಲ್ಲ ಎಂದು ನ್ಯಾಯಾಲಯದಲ್ಲಿ ಹೋರಾಟ ಮಾಡಲಿ ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version