ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ (Cabinet Meeting) ಗುರುವಾರ ರಾತ್ರಿ (ಫೆಬ್ರುವರಿ 29) ನಡೆಯಿತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಹಲವಾರು ಯೋಜನೆಗಳಿಗೆ ಒಪ್ಪಿಗೆ ನೀಡಲಾಯಿತು ಪ್ರಮುಖವಾಗಿ ಬೆಂಗಳೂರಿನ ಕಾಂಗ್ರೆಸ್ ಶಾಸಕರಿಗೆ ಭರ್ಜರಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನದ ಪಡೆಯದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ಅನುದಾನ ಕೊಡಲು ಒಪ್ಪಿಗೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರಗಾಲ ನಿರ್ವಹಣೆ ಗೆ ಹೆಚ್ಚಿನ ಅನುದಾನ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಹುಲ್ಲು ಖರೀದಿಸಲು ಎಸ್ಡಿಆರ್ಎಫ್ ಫಂಡ್ ಮೂಲಕ 20 ಕೋಟಿ ಕೊಡಲು ತೀರ್ಮಾನ ಮಾಡಲಾಗಿದೆ. ಕೃಷಿ ಭಾಗ್ಯ ಯೋಜನೆ ಜಾರಿ ಮತ್ತು ಕೃಷಿ ಹೊಂಡಗಳ ಅಭಿವೃದ್ಧಿ ಗೆ 100 ಕೋಟಿ ಬಿಡುಗಡೆ ಮಾಡಲಾಗಿದೆ.
ರಾಜ್ಯದ 5 ಜಿಲ್ಲಾಸ್ಪತ್ರೆಗಳಲ್ಲಿ 50 ಹಾಸಿಗೆಯ ತೀವ್ರ ನಿಗಾ ಆರೈಕೆ ಘಟಕಗಳ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಅನುಮೋದನೆಗೊಂಡ ಕ್ರಿಟಿಕಲ್ ಕೇರ್ ಗಳಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯ 5 ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ 6 ಆಸ್ಪತ್ರೆಗಳು ಸೇರಿದಂತೆ ಒಟ್ಟು 11 ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. ಈ ಯೋಜನೆಗೆ 137.75 ಕೋಟಿ ವೆಚ್ಚಾಗಲಿದೆ.
ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯ ಸಿ.ವಿ ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಹಾಸಿಗೆಯ ತೀವ್ರ ನಿಗಾ ಆರೈಕೆ ಘಟಕವನ್ನು 45 ಕೋಟಿ ವೆಚ್ಚವಾಗಲಿದೆ. ನಾಲ್ಕು ಜಿಲ್ಲಾಸ್ಪತ್ರೆಗಳಲ್ಲಿ ತಲಾ 50 ಬೆಡ್ ಗಳ ಕ್ರಿಟಿಕಲ್ ಕೇರ್ ಘಟಕಗಳ ನಿರ್ಮಾಣಕ್ಕೆ ತಲಾ 24 ಕೋಟಿ ವೆಚ್ಚವಾಗಲಿದೆ.
ಇದನ್ನೂ ಓದಿ : R Ashok : ರಾಜ್ಯ ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಬಿಜೆಪಿ ಮನವಿ
ದಕ್ಷಿಣ ಕನ್ನಡ ಜಿಲ್ಲೆಯ ವೆನ್ ಲಾಕ್ ಆಸ್ಪತ್ರೆ, ವಿಜಯನಗರ ಜಿಲ್ಲಾಸ್ಪತ್ರೆ, ದೊಡ್ಡಬಳ್ಳಾಪುರ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗಳಲ್ಲಿ ತಲಾ 50 ಬೆಡ್ ಗಳ ತೀವ್ರ ನಿಗಾ ಆರೈಕೆ ಘಟಕಗಳ ಸ್ಥಾಪನೆಗೆ ಸಂಪುಟದಿಂದ ಅನುಮೋದನೆ ದೊರೆತಿದೆ.
ಈ 05 ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ ಕಾಮಗಾರಿಗಳಿಗೆ ರಾಷ್ಟ್ರೀಯ ಆರೋಗ್ಯ ಯೋಜನೆ PM-ABHIM ಅಡಿ ಅನುದಾನ ದೊರೆಯಲಿದ್ದು, ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ವೆಚ್ಚವನ್ನ ಭರಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ.
ಬೆಂಗಳೂರು ಸೆಂಟ್ರಲ್ ಕಾಲೇಜು ಹಾಗೂ ಪ್ರಸನ್ನ ಕುಮಾರ್ ಬ್ಲಾಕ್ನಲ್ಲಿ ಗಳೂರು ಕೇಂದ್ರ ವಿವಿ ಕಟ್ಟಡ ಕಟ್ಟಲು 163 ಕೋಟಿ ಕೊಡಲು ಒಪ್ಪಿಗೆ ದೊರಕಿದೆ. ಕೆಎಸ್ಆರ್ಟಿಸಿಗೆ 20 ಹವಾ ನಿಯಂತ್ರಿತ, 20 ನಾನ್ ಎಸಿ ಬಸ್ ಖರೀದಿ ಗೆ ಒಪ್ಪಿಗೆ ದೊರಕಿದೆ. ಅದಕ್ಕಾಗಿ ಒಟ್ಟು 119 ಕೋಟಿ ಬಿಡುಗಡೆಯಾಗಲಿದೆ.
ಜಾತಿ ಗಣತಿ ಬಗ್ಗೆ ಸಿಎಂ ಮನವರಿಕೆ
ಕ್ಯಾಬಿನೆಟ್ ಮುಗಿದ ಬಳಿಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಕೊಟ್ಟಿರುವ ಶೈಕ್ಷಣಿಕ ಸಮಾಜಿಕ ಮತ್ತು ಆರ್ಥಿಕ ಶೈಕ್ಷಣಿಕ ವರದಿ ಬಗ್ಗೆ ಸಿಎಂ ಮನವರಿಕೆ ಮಾಡಿದರು. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕ್ಯಾಬಿನೆಟ್ ಸದಸ್ಯರ ಸಲಹೆ ಪಡೆದು ಮುಂದುವರಿಯುವ ನಿರ್ಧಾರ ಕೈಗೊಂಡಿದ್ದಾರೆ.