Site icon Vistara News

ರಾಷ್ಟ್ರಲಾಂಛನ ದುರ್ಬಳಕೆ ಆರೋಪ; ಚುನಾವಣೆ ಮುನ್ನಾದಿನ ಬಸವರಾಜ ಹೊರಟ್ಟಿಗೆ ಸಂಕಷ್ಟ

ಬಸವರಾಜ ಹೊರಟ್ಟಿ

ಬೆಳಗಾವಿ: ಜೂ.13ರಂದು ವಿಧಾನ ಪರಿಷತ್‌ನ ಪದವೀಧರರ ಕ್ಷೇತ್ರಗಳ ಎರಡು ಮತ್ತು ಶಿಕ್ಷಕರ ಕ್ಷೇತ್ರಗಳ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅದರಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸವರಾಜ ಹೊರಟ್ಟಿಯವರಿಗೆ (Basavaraj Horatti) ಚುನಾವಣೆ ಮುನ್ನಾದಿನವೇ ಸಂಕಷ್ಟ ಎದುರಾಗಿದೆ. ಹೊರಟ್ಟಿಯವರು ರಾಷ್ಟ್ರಲಾಂಛನ, ರಾಜ್ಯ ಲಾಂಛನ ಮತ್ತು ಸಭಾಪತಿ ಪೀಠದ ಚಿತ್ರಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ವಾಯವ್ಯ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಬಸವರಾಜ್‌ ಹೊರಟ್ಟಿಗೆ ಶೋಕಾಸ್‌ ನೋಟಿಸ್‌ ನೀಡಿದ್ದಾರೆ.

ಬಸವರಾಜ ಹೊರಟ್ಟಿಯವರ ಬಗ್ಗೆ ಬರೆಯಲಾದ ʼಬಸವರಾಜ ಪಥʼ ಮತ್ತು ʼಸಂಘರ್ಷ-ಹೋರಾಟ-ಸಾಧನೆʼ ಎಂಬ ಎರಡು ಪುಸ್ತಕಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಈ ಪುಸ್ತಕದಲ್ಲಿ ರಾಷ್ಟ್ರ, ರಾಜ್ಯ ಲಾಂಛನಗಳು ಮತ್ತು ಸಭಾಪತಿ ಪೀಠದ ಚಿತ್ರಗಳನ್ನು ಪ್ರಕಟಿಸಲಾಗಿದೆ. ಈ ಮೂಲಕ ಬಸವರಾಜ ಹೊರಟ್ಟಿ ವೈಯಕ್ತಿಕ ಲಾಭ ಗಳಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ರಾಷ್ಟ್ರಲಾಂಛನ, ರಾಜ್ಯ ಲಾಂಛನ, ಸಭಾಪತಿ ಪೀಠದ ಚಿತ್ರಗಳ ದುರ್ಬಳಕೆ ಮಾಡಿದ್ದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಇದರ ಬಗ್ಗೆ 24 ಗಂಟೆಯಲ್ಲಿ ವಿವರಣೆ ನೀಡುವಂತೆ ನೋಟಿಸ್‌ ನೀಡಲಾಗಿದೆ. ಸಮರ್ಪಕ ಉತ್ತರ ನೀಡದೆ ಇದ್ದರೆ ಚುನಾವಣಾ ಆಯೋಗಕ್ಕೆ ವರದಿ ನೀಡಲಾಗುವುದು ಎಂದು ಆಮ್ಲಾನ್ ಆದಿತ್ಯ ಬಿಸ್ವಾಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಪುಸ್ತಕಗಳನ್ನು ಪ್ರಕಟಿಸಿದ ಹುಬ್ಬಳ್ಳಿಯ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘಕ್ಕೂ ನೋಟಿಸ್‌ ಜಾರಿ ಮಾಡಲಾಗಿದೆ. ದಿ ಸ್ಟೇಟ್ ಎಂಬ್ಲಮ್‌ ಆಫ್ ಇಂಡಿಯಾ (ಪ್ರೊಹಿಬಿಷನ್‌ ಆಫ್‌ ಇಂಪ್ರಾಪರ್‌ ಯೂಸ್‌ ಆ್ಯಕ್ಟ್‌–2005) ಅಡಿ ನೋಟಿಸ್‌ ನೀಡಲಾಗಿದ್ದು, ವಿವರಣೆ ಕೇಳಲಾಗಿದೆ. ಹಾಗೊಮ್ಮೆ ಸೂಕ್ತ ವಿವರಣೆ ನೀಡದೆ ಇದ್ದರೆ, ಜನಪ್ರತಿನಿಧಿಗಳ ಕಾಯ್ದೆಯಡಿ ಕ್ರಮ ಜರುಗಿಸಬಹುದು. ಚುನಾವಣಾ ಆಯೋಗದ ನಿರ್ದೇಶನದ ಆಧಾರದ ಮೇಲೆ ಕ್ರಮ ಜರುಗಿಸಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಠ್ಯ ಪುಸ್ತಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಬಾರದು: ಬಸವರಾಜ ಹೊರಟ್ಟಿ

{State Emblem of India (Prohibition of Improper Use) Act, 2005 (ದಿ ಸ್ಟೇಟ್ ಎಂಬ್ಲಮ್‌ ಆಫ್ ಇಂಡಿಯಾ (ಪ್ರೊಹಿಬಿಷನ್‌ ಆಫ್‌ ಇಂಪ್ರಾಪರ್‌ ಯೂಸ್‌ ಆ್ಯಕ್ಟ್‌–2005) )ಯಡಿ, ಭಾರತದ ರಾಷ್ಟ್ರ ಲಾಂಛನ, ರಾಜ್ಯ ಲಾಂಛನವನ್ನು ಯಾವುದೇ ವಾಣಿಜ್ಯ -ವೈಯಕ್ತಿಕ, ವೃತ್ತಿಸಂಬಂಧ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಹಾಗೊಮ್ಮೆ ಯಾರಾದರೂ ಮಾಡಿದ್ದೇ ಆದಲ್ಲಿ, ಅದು ದುರ್ಬಳಕೆ ಎನ್ನಿಸಿಕೊಳ್ಳುತ್ತದೆ ಮತ್ತು ಅಂಥವರಿಗೆ 2 ವರ್ಷ ಜೈಲು ಶಿಕ್ಷೆಯೊಂದಿಗೆ 500 ರೂ.ವರೆಗೆ ದಂಡ ವಿಧಿಸಬಹುದು }

ಇದನ್ನೂ ಓದಿ: ಇಡೀ ರಾಜ್ಯದ ಜನರಿಗಾಗಿ ಸೇವೆ ಸಲ್ಲಿಸಿದ್ದೇನೆ : ಬಸವರಾಜ ಹೊರಟ್ಟಿ

Exit mobile version