ರಾಜ್ಯದಲ್ಲಿ ಮುಂದಿನ ಹಂತದ ತಂತ್ರಜ್ಞಾನ ನಾವೀನ್ಯತೆಯ ಬೆಳವಣಿಗೆಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆಗಳನ್ನು ಉತ್ತೇಜಿಸಲು ಹೊಸ ಅನಿಮೇಷನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ (ಎವಿಜಿಸಿ-ಎಕ್ಸ್ಆರ್) ನೀತಿ ಮತ್ತು ಪರಿಷ್ಕೃತ ಜೈವಿಕ ತಂತ್ರಜ್ಞಾನ ನೀತಿಯನ್ನು ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ರಾಜ್ಯ ಸರ್ಕಾರ ಅನಾವರಣಗೊಳಿಸಿದ್ದು, ಇದರಿಂದ 2028ರ ವೇಳೆಗೆ ಎವಿಜಿಸಿ-ಎಕ್ಸ್ಆರ್ ಸಂಬಂಧಿತ ಕ್ಷೇತ್ರಗಳಲ್ಲಿ 30,000 ಉದ್ಯೋಗ ಸೃಷ್ಟಿ ಗುರಿಯನ್ನು ಹೊಂದಲಾಗಿದೆ.
26ನೇ ಬೆಂಗಳೂರು ಟೆಕ್ ಸಮ್ಮಿಟ್-2023ರಲ್ಲಿ ಎವಿಜಿಸಿ-ಎಕ್ಸ್ಆರ್ ಕರಡು ಮುನ್ನೋಟ ಮತ್ತು ಜೈವಿಕ ತಂತ್ರಜ್ಞಾನ ಕಾರ್ಯನೀತಿಯ ಪರಿಷ್ಕೃತ ಕರಡನ್ನು ಬಿಡುಗಡೆಗೊಳಿಸಲಾಗಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ತಂತ್ರಜ್ಞಾನ ಹಾಗೂ ಸೃಜನಶೀಲತೆಯನ್ನು ಗುರುತಿಸಿರುವ ನಾವು ಅನಿಮೇಷನ್, ವಿಷುವಲ್ ಎಫೆಕ್ಟ್, ಗೇಮಿಂಗ್, ಕಾಮಿಕ್ಸ್ (ಎವಿಜಿಸಿ) ಮಹತ್ವವನ್ನು ಅರಿತಿದ್ದೇವೆ. ಹೀಗಾಗಿ ಕರ್ನಾಟಕ ಸರ್ಕಾರವು ಎವಿಜಿಸಿ- ಏಕ್ಸ್ಆರ್ ನೀತಿಗೆ ಚಾಲನೆ ನೀಡಲು ರಾಜ್ಯ ಸಜ್ಜಾಗಿದ್ದು, ದೇಶದ ಎವಿಜಿಸಿ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ ನಮಗಿರುವ ಬದ್ಧತೆ ಹಾಗೂ ಪ್ರಗತಿಶೀಲ ನಿಲುವಿಗೆ ಇದು ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ನಾವೀನ್ಯತಾ ಕ್ಷೇತ್ರವಷ್ಟೇ ಅಲ್ಲದೆ 2001ರಲ್ಲಿ ಬಯೋಟೆಕ್ ನೀತಿಯನ್ನು ರೂಪಿಸಿದ ಮುಂಚೂಣಿ ರಾಜ್ಯವೆನಿಸಿದೆ. ಬಯೋ ಟೆಕ್ನಾಲಜಿಯಲ್ಲೂ ಮುಂದಿರುವ ನಾವು ಟೆಕ್ ಸಮ್ಮಿಟ್ ಪರಿಷ್ಕೃತ ಬಯೋಟೆಕ್ ನೀತಿಯನ್ನು ಬಿಡುಗಡೆ ಮಾಡಿಲಿದ್ದೇವೆ ಎಂದು ಘೋಷಿಸಲು ಸಂತಸಪಡುತ್ತೇನೆ. ಹೂಡಿಕೆ, ಪ್ರತಿಭೆ ಹಾಗೂ ಅವಕಾಶಗಳನ್ನು ಆಕರ್ಷಿಸುವ ಇಕೋಸಿಸ್ಟಮ್ ಸೃಷ್ಟಿಸಲು ನಮ್ಮ ಸರ್ಕಾರ ಗಮನ ವಹಿಸಿದೆ ಎಂದು ಹೇಳಿದರು.
ಇದನ್ನೂ ಓದಿ | 108 Ambulance : ನಾಳೆ 262 ಆಂಬ್ಯುಲೆನ್ಸ್‌ಗೆ ಸಿಎಂ ಚಾಲನೆ; 108 ಆಧುನೀಕರಣಕ್ಕೆ ಕ್ರಮ: ದಿನೇಶ್ ಗುಂಡೂರಾವ್
ಐ.ಟಿ. ಕ್ಷೇತ್ರದಲ್ಲಿ ಕರ್ನಾಟಕ ಬೀರಿರುವ ಪರಿಣಾಮ ಅಸಾಮಾನ್ಯ. 5500 ಐಟಿ, ಐಇಟಿಎಸ್ ಕಂಪನಿಗಳು, 750 ಬಹುರಾಷ್ಟ್ರೀಯ ಕಂಪನಿಗಳು ಇರುವ ರಾಜ್ಯವು ದೇಶದ ರಫ್ತಿಗೆ ಸುಮಾರು 85 ಬಿಲಿಯನ್ ಯು.ಎಸ್. ಡಾಲರ್ ಕೊಡುಗೆಯನ್ನು ನೀಡುತ್ತಿದೆ. .ಐ.ಟಿ ಕ್ಷೇತ್ರವು ಸುಮಾರು 12 ಲಕ್ಷ ವೃತ್ತಿಪರರಿಗೆ ನೇರ ಉದ್ಯೋಗ ಅವಕಾಶಗಳನ್ನು ಹಾಗೂ 31 ಲಕ್ಷ ಪರೋಕ್ಷ ಉದ್ಯೋಗಗಳನ್ನು ಒದಗಿಸಿದೆ. ದೇಶದ ಒಟ್ಟು ಸಾಫ್ಟ್ವೇರ್ ರಫ್ತಿನ ಪೈಕಿ ಕರ್ನಾಟಕದ ಪಾಲು ಶೇ 40 ರಷ್ಟಿದ್ದು, ಜಾಗತಿಕ ಐಟಿ ದಿಗ್ಗಜ ಎಂಬ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಸ್ಟಾರ್ಟಪ್ ಬ್ಲಿಂಕ್‌ನ ಜಾಗತಿಕ ಸ್ಟಾರ್ಟಪ್ ಇಕೋಸಿಸ್ಟಮ್ ಸೂಚ್ಯಂಕದಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದೆ. ನಮ್ಮ ರಾಜ್ಯವು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಪೈಕಿ ಅತ್ಯಂತ ಹೆಚ್ಚು ಜನ ಭೇಟಿ ನೀಡುವ ಗಮ್ಯವಾಗಿದೆ. ಭಾರತದ ಶೇ 40 ರಷ್ಟು ಜಿಸಿಸಿಗಳಿಗೆ ಕರ್ನಾಟಕ ಆತಿಥ್ಯ ನೀಡಿದೆ. ಡಿಜಿಟಲ್ ಪ್ರತಿಭೆಯುಳ್ಳ ಸಂಪನ್ಮೂಲ, ನಾವೀನ್ಯತೆ ಹಾಗೂ ಸ್ಟಾರ್ಟ್ ಅಪ್ ಇಕೋಸಿಸ್ಟಮ್ ಹಾಗೂ ಪೂರಕ ನೀತಿಯ ವಾತಾವರಣ ಜಿಸಿಸಿ ಬೆಳವಣಿಗೆಗೆ ಒತ್ತು ನೀಡಿದೆ ಎಂದು ತಿಳಿಸಿದರು.
ನೀತಿ ಆಯೋಗದ ಭಾರತ ಸೂಚ್ಯಂಕದಲ್ಲಿ ಕರ್ನಾಟಕ ಸತತ ಮೂರು ಬಾರಿ ಮೇಲ್ಪಂಕ್ತಿಯನ್ನು ಕಾಯ್ದುಕೊಂಡಿದೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಡಿಪಿಐಐಟಿ ಶ್ರೇಯಾಂಕದಲ್ಲಿ ಅತ್ಯುತ್ತಮ ಪರ್ಫಾರ್ಮರ್ ಎಂಬ ಬಿರುದೂ ಪಡೆದುಕೊಂಡಿದೆ. ಉದ್ಯಮ ಮತ್ತು ನಾವೀನ್ಯತೆಯ ಬಗ್ಗೆ ನಮಗಿರುವ ಬದ್ಧತೆಗೆ ಈ ಎಲ್ಲಾ ಬಿರುದುಗಳು ಸಾಕ್ಷಿಯಾಗಿವೆ
ಕೇಂದ್ರ ಮಟ್ಟದ ಸ್ಟಾರ್ಟ್ ಅಪ್ ನೀತಿಯ ಅಗತ್ಯತೆಯನ್ನು ಕೇಂದ್ರ ಸರ್ಕಾರ ಗುರುತಿಸುವ ಮುನ್ನವೇ 2015ರಲ್ಲಿ ಸ್ಟಾರ್ಟ್ ಅಪ್ ನೀತಿಗೆ ಚಾಲನೆ ನೀಡುವ ಮೂಲಕ ನಮ್ಮ ರಾಜ್ಯವು ದೂರದೃಷ್ಟಿಯ ಹೆಜ್ಜೆಯನ್ನು ಇರಿಸಿತು. ಈ ಮುಂಗಾಣುವಿಕೆಯು ಸ್ಟಾರ್ಟಪ್ ಇಕೋಸಿಸ್ಟಮ್‌ನ ಮುಂಚೂಣಿಗೆ ರಾಜ್ಯವನ್ನು ತಂದು ನಿಲ್ಲಿಸಿದೆ. ಇದು ಔದ್ಯಮಿಕ ಚೈತನ್ಯವನ್ನು ಬೆಳೆಸಿ ಪ್ರೋತ್ಸಾಹಿಸುವ ರಾಜ್ಯದ ಗುರುತಾಗಿದೆ ಎಂದು ಸಿಎಂ ನುಡಿದರು.
ಇದನ್ನೂ ಓದಿ | Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್ ದಾಸ್ ಪೈ, ಪ್ರಿಯಾಂಕ್ ತಿರುಗೇಟು
ನಮ್ಮ ನೀತಿಗಳನ್ನು ನಾವು ಕೈಗಾರಿಕಾ ಹಾಗೂ ಶಿಕ್ಷಣ ವಲಯದ ಮತ್ತು ರಾಜ್ಯ ಸರ್ಕಾರದ ನಡುವಿನ ಸಮನ್ವಯದೊಂದಿಗೆ ರೂಪಿಸಲಾಗಿದೆ. ಐಟಿ ವಿಷನ್ ಗ್ರೂಪ್, ಬಯೋಟೆಕ್ ಸ್ಟಾರ್ಟಪ್‌ಗಳು, ಉದ್ಯಮದ ದಿಗ್ಗಜರು ಹಾಗೂ ನಾಯಕರು ಚಿಂತಕರಾಗಿ ಕಾರ್ಯನಿರ್ವಹಿಸಿ ರಾಜ್ಯದ ಅಭಿವೃದ್ಧಿಗೆ ಚಿಮ್ಮುಹಲಗೆಯಂತಿದ್ದಾರೆ ಎಂದು ಹೇಳಿದರು.