ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಬಿಜೆಪಿ ಸರ್ಕಾರದಲ್ಲಿ ಬಿಬಿಎಂಪಿ (BBMP Election) ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಸಲಾಗಿತ್ತು. ಈ ಹಿಂದದಿನ ಅಧಿಸೂಚನೆಯನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು, ವಾರ್ಡ್‌ಗಳ ಸಂಖ್ಯೆಯನ್ನು 225 ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಂಖ್ಯಾ ಶಾಸ್ತ್ರದಿಂದ ಹೊರಬರದ ಸರ್ಕಾರ!
ಬಿಜೆಪಿ ಸರ್ಕಾರ 198 ಇದ್ದ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಏರಿಕೆ ಮಾಡಿತ್ತು. ಆದರೆ ಅದರಲ್ಲಿ ಆಸಕ್ತಿಕರ ವಿಚಾರ ಏನು ಎಂದರೆ, 243 ವಾರ್ಡ್ ನಿಗದಿ ಮಾಡಲು ಬಳಸಿದ್ದು “ಸಂಖ್ಯಾಶಾಸ್ತ್ರʼದ ಮಾರ್ಗ ಎನ್ನುವುದು!. ಇದೀಗ ಹೊಸದಾಗಿ ವಾರ್ಡ್ ಮರುವಿಂಗಡಣೆ ಮಾಡಿದರೂ ಹಾಲಿ ಸರ್ಕಾರವೂ ಸಂಖ್ಯಾ ಶಾಸ್ತ್ರದಿಂದ ಹೊರಬಂದಿಲ್ಲ ಎಂಬುವುದು ಕಾಣುತ್ತದೆ.
ಬಿಜೆಪಿ ಸರ್ಕಾರ 243 ವಾರ್ಡ್ ಮಾಡಿತ್ತು. ಇದರಲ್ಲಿ 2+3+4= 9 ಒಳ್ಳೆ ಸಂಖ್ಯೆ ಎಂದು 243 ಮಾಡಲಾಗಿತ್ತು ಅದೇ ರೀತಿ ಈಗ 225 ವಾರ್ಡ್ ಮಾಡಲಾಗಿದೆ. ಇದರಲ್ಲೂ 2+2+5= 9 ಆಗುತ್ತದೆ. ಹೀಗಾಗಿ ವಾರ್ಡ್‌ಗಳ ಸಂಖ್ಯೆ ಇಳಿಕೆಯಾದರೂ ಸಂಖ್ಯಾಶಾಸ್ತ್ರ ಅನುಸರಿಸಲಾಗಿದೆ ಎಂಬುವುದು ತಿಳಿದುಬರುತ್ತದೆ.
ಈ ಹಿಂದೆ 2011ರ ಜನಗಣತಿಯ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರದೇಶದಲ್ಲಿನ ಜನಸಂಖ್ಯೆ 84,43,675 ಇತ್ತು. ಈಗ ಜನಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ ಹಾಗೂ ಹೊಸದಾಗಿ ಬೆಂಗಳೂರಿಗೆ ಸೇರ್ಪಡೆ ಆದ ಸ್ಥಳಗಳಲ್ಲಿ ಜನಸಂಖ್ಯೆ ವೃದ್ಧಿ ವೇಗವಾಗಿದೆ. ಪ್ರತಿ ವಾರ್ಡ್‌ನಲ್ಲಿ ಸರಾಸರಿ 35 ಸಾವಿರ ಜನಸಂಖ್ಯೆ ಇರುವಂತೆ ವಾರ್ಡ್ ವಿಂಗಡಣೆಗೆ ಮುಂದಾಗಲಾಯಿತು.
ಈ ಲೆಕ್ಕದಂತೆ ವಾರ್ಡ್ಗೆ ತಲಾ 35 ಸಾವಿರದಂತೆ ಸದನ ಸಮಿತಿಯು ಭಾಗಿಸಿದಾಗ ಅದರಿಂದ 241.3 ಫಲಿತಾಂಶ ಬಂದಿತ್ತು. ಅದನ್ನು ಪೂರ್ಣ ಸಂಖ್ಯೆಯಾಗಿ 242 ವಾರ್ಡ್ ನಿಗದಿಪಡಿಸಬೇಕು ಎಂಬ ಚರ್ಚೆ ನಡೆದಿತ್ತು. ಆದರೆ ಶಾಸಕ ರಘು ಅವರಿಗೆ ಇಲ್ಲಿ ತಕರಾರಿತ್ತು. 242ನ್ನು ಸಂಖ್ಯಾಶಾಸ್ತ್ರದ ಪ್ರಕಾರ ಕೂಡಿಸಿದರೆ 8 ಬರುತ್ತದೆ (2+4+3=9). 8 ಎಂಬ ಸಂಖ್ಯೆ ನಮಗೆ ಆಗಿ ಬರುವುದಿಲ್ಲ. 9 ಉತ್ತಮ ಸಂಖ್ಯೆ. ಅದೃಷ್ಟದ ಸಂಖ್ಯೆ 9 ಬರಲಿ ಎಂದು 243 (2+4+3=9) ನಿಗದಿಪಡಿಸಲಾಯಿತು. ಈ ಮಾತನ್ನು ಸ್ವತಃ ಎಸ್. ರಘು ಹಿಂದೊಮ್ಮೆ ಮಾಧ್ಯಮಗಳ ಮುಂದೆ ತಿಳಿಸಿದ್ದರು.
ಇದನ್ನೂ ಓದಿ | BK Hariprasad : ಡಿ.ಕೆ. ಶಿವಕುಮಾರ್ ಕೈಕೆಳಗೆ ಕೆಲಸ ಮಾಡಲ್ಲ: ಬಿ.ಕೆ. ಹರಿಪ್ರಸಾದ್
ಸಮಿತಿಯಲ್ಲಿ 243 ಎಂದು ತೀರ್ಮಾನವಾದರೂ ಸರ್ಕಾರಕ್ಕೆ ವರದಿ ಸಲ್ಲಿಸುವಾಗ ವಾರ್ಡ್ ಸಂಖ್ಯೆಯನ್ನು ನಿಗದಿಪಡಿಸಲಿಲ್ಲ. 198 ವಾರ್ಡ್ಗಳನ್ನು ಕನಿಷ್ಠ 225ರಿಂದ ಗರಿಷ್ಠ 250ರವರೆಗೆ ಮರುವಿಂಗಡಣೆ ಮಾಡಬಹುದು ಎಂದು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಲಾಯಿತು. ಅಚ್ಚರಿ ಎಂದರೆ 225-250ರವರೆಗಿನ ಸಂಖ್ಯೆಗಳಲ್ಲಿ ಬಿಜೆಪಿ ಸರ್ಕಾರವೂ 243ನ್ನೇ ಆಯ್ಕೆ ಮಾಡಿಕೊಂಡಿತ್ತು. ಅದರಂತೆಯೇ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ 225 ವಾರ್ಡ್ ಸಂಖ್ಯೆಯನ್ನು ಕೂಡ ಸಂಖ್ಯಾಶಾಸ್ತ್ರದ ಆಧಾರದಲ್ಲಿಯೇ ನಿಗದಿ ಮಾಡಲಾಯಿತಾ ಎಂಬ ಮಾತುಗಳು ಕೇಳಿಬರುತ್ತಿವೆ.