ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2018-19, 2019-20, 2020-21ನೇ ಸಾಲಿನಲ್ಲಿ ಸಂಕಷ್ಟದಲ್ಲಿರುವ 3000 ಹಿರಿಯ ಸಾಹಿತಿ ಮತ್ತು ಕಲಾವಿದರಿಗೆ ಮಾಸಾಶನ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.
ಮೈಸೂರಿನ ಶ್ರೀನಿವಾಸ (ಪಾಪು) ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಾಂಸ್ಕೃತಿಕ, ಸಾಹಿತ್ಯದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ, ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ, ಕಲಾವಿದರಿಗೆ 2019-20 ಮತ್ತು 2020-21ನೇ ಸಾಲಿಗೆ ಮಾಸಾಶನ ಮಂಜೂರು ಮಾಡಲು ರಚಿಸಲಾಗಿರುವ ಆಯ್ಕೆ ಸಮಿತಿಯು 2019-20 ಹಾಗೂ 2020-21ನೇ ಸಾಲಿನಲ್ಲಿ 2000 ಮಂದಿಗೆ ಮಾಸಾಶನ ಮಂಜೂರು ಮಾಡಲು ಜನವರಿ 1ರಂದು ಹಾಗೂ 2018-19ನೇ ಸಾಲಿನಲ್ಲಿ 1000 ಜನರಿಗೆ ಮಾಸಾಶನ ಪಾವತಿಸಲು ಜೂನ್ 21ರಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಅದೇ ರೀತಿ ಮಾಸಿಕ 2,000 ರೂ.ಗಳಂತೆ ಒಟ್ಟು 3000 ಸಾಹಿತಿ, ಕಲಾವಿದರಿಗೆ ಮಾಸಾಶನ ಪಾವತಿಸಲು ಅನುದಾನವನ್ನು ಒದಗಿಸಿ ಆದೇಶ ಹೊರಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಕೋರಿರುವ ಹಿನ್ನೆಲೆಯಲ್ಲಿ 3000 ಅರ್ಹ ಸಾಹಿತಿ ಮತ್ತು ಕಲಾವಿದರಿಗೆ ಮಾಸಿಕ 2,000 ರೂ. ಮಾಸಾಶನವನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಪಾವತಿಸಲು ಮಂಜೂರಾತಿ ನೀಡಿ ಸರ್ಕಾರ ಆದೇಶಿಸಿದ್ದು, ಪಟ್ಟಿಯಲ್ಲಿರುವ ಕಲಾವಿದರು, ಸಾಹಿತಿಗಳಿಗೆ ಮಾಸಾಶನ ಬಿಡುಗಡೆಗೆ ಕ್ರಮವಹಿಸುವ ಪೂರ್ವದಲ್ಲಿ ಅವರ ನೈಜತೆಯನ್ನು ಪರಿಶೀಲಿಸಿ, ಖಾತ್ರಿಪಡಿಸಿಕೊಳ್ಳತಕ್ಕದ್ದು ಸೂಚಿಸಿದೆ.
ಇದನ್ನೂ ಓದಿ | ಬಿಜೆಪಿ ಜನೋತ್ಸವ ದಿನಾಂಕ ಮತ್ತೆ ಬದಲು, ಭಾನುವಾರ ಅಲ್ಲ ಶನಿವಾರವೇ ಜನಸ್ಪಂದನ ಹೆಸರಿನಲ್ಲಿ ಕಾರ್ಯಕ್ರಮ