ಸಾಗರ: ನಾಡಿಗೆ ಬೆಳಕು ನೀಡಿದ ಶರಾವತಿ ಸಂತ್ರಸ್ತರ ಬದುಕು ಕತ್ತಲಿನಲ್ಲಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು.
ಈಡಿಗರ ಸಮುದಾಯ ಭವನದಲ್ಲಿ ಭಾನುವಾರ ಪ್ರಾಂತ್ಯ ಆರ್ಯ ಈಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಲೆನಾಡು ಭಾಗದ ಬಗರ್ ಹುಕುಂ, ಅರಣ್ಯ ಹಕ್ಕು, 94ಸಿ ಮತ್ತು 94ಸಿಸಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ಕೊಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಮುಳುಗಡೆ ಸಂತ್ರಸ್ತರಿಗೆ ಭೂ ಹಕ್ಕು ಕೊಡಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಜತೆ ಏಳೆಂಟು ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರ ಮುಳುಗಡೆ ಸಂತ್ರಸ್ತರ ಹಕ್ಕು ಕಿತ್ತುಕೊಂಡಿದೆ. ಆದರೆ, ನಮ್ಮ ಸರ್ಕಾರ ಹಕ್ಕು ಕೊಡುತ್ತದೆ. ನೀವು ನನ್ನನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿದ್ದೀರಿ. ಸರ್ಕಾರ ಶಿಕ್ಷಣದಂತಹ ಮಹತ್ವದ ಖಾತೆಯನ್ನು ನನಗೆ ನೀಡಿದೆ. ಮುಂದಿನ ಎರಡು ವರ್ಷದಲ್ಲಿ ರಾಜ್ಯದ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಅಗತ್ಯ ಬದಲಾವಣೆ ಶಿಕ್ಷಣದಲ್ಲಿ ತರಲಾಗುತ್ತದೆ. ಲೋಕಸಭೆ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಈಗಿನಿಂದಲೇ ತಯಾರಿ ನಡೆಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ | CM Siddaramaiah : ಕಾಂಗ್ರೆಸ್ ಸರ್ಕಾರಕ್ಕಿಂದು 100 ದಿನ; ಗ್ಯಾರಂಟಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಮತ್ತೊಬ್ಬ ಸನ್ಮಾನಿತರಾದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಾಜ್ಯದಲ್ಲಿ 60ಲಕ್ಷಕ್ಕೂ ಹೆಚ್ಚು ಈಡಿಗ ಸಮುದಾಯ ಬಂಧುಗಳಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಾಜದ ಸಚಿವರು, ಶಾಸಕರು ಇದ್ದರೂ ಅವರಿಂದ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ. ಎಲ್ಲದ್ದಕ್ಕೂ ಆರ್.ಎಸ್.ಎಸ್.ನವರ ಹತ್ತಿರ ಕೇಳಬೇಕು ಎನ್ನುತ್ತಿದ್ದರು. ಆದರೆ, ನಮ್ಮ ಅವಧಿಯಲ್ಲಿ ಸರ್ಕಾರದಿಂದ ಸಮಾಜಕ್ಕೆ ಸಿಗಬೇಕಾದ ಎಲ್ಲ ಸೌಲಭ್ಯ ತರುವ ಪ್ರಯತ್ನ ನಡೆಸಲಾಗುತ್ತದೆ. ಈಡಿಗ ಅಭಿವೃದ್ದಿ ನಿಗಮ ಸ್ಥಾಪಿಸಿ, ಅದಕ್ಕೆ 500 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ನಾವೆಲ್ಲಾ ಒತ್ತಾಯ ಮಾಡುತ್ತೇವೆ. ಸರ್ಕಾರ ನಮ್ಮದೇ ಇದ್ದರೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಸಂದರ್ಭ ಬಂದಾಗಲೆಲ್ಲಾ ಸಮುದಾಯದ ಹಕ್ಕುಗಳಿಗೆ ಹಕ್ಕೊತ್ತಾಯ ಮಂಡಿಸಲಾಗುತ್ತದೆ ಎಂದು ತಿಳಿಸಿದರು.
ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಮಾಜ ಇಲ್ಲದಿದ್ದರೆ ನಾವು ಇಲ್ಲ. ಸಮಾಜ ನಮಗೆ ಸ್ಥಾನಮಾನ ನೀಡುವ ಜತೆಗೆ ಗೌರವ ತಂದು ಕೊಟ್ಟಿರುತ್ತದೆ. ಅಂತಹ ಸಮಾಜವನ್ನು ರಕ್ಷಣೆ ಮಾಡಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ. ನಮ್ಮ ಸಮಾಜದ ಜತೆಗೆ ಎಲ್ಲ ಸಮುದಾಯವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು, ಕಾಗೋಡು ಚಳವಳಿ ಮೂಲಕ ರಾಜಕೀಯ ಬದುಕಿಗೆ ಕಾಲಿಟ್ಟ ನಾನು ಎರಡು ಬಾರಿ ಸೋತರೂ ಮೂರನೇ ಬಾರಿ ಶಾಸಕರಾಗಿ ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಭೂಸ್ವಾಧೀನ ಕಾಯ್ದೆ ಜಾರಿಗೆ ತರುವ ಮೂಲಕ ಉಳುವವರಿಗೆ ಭೂಮಿಹಕ್ಕು ಕೊಡಿಸಿದ ತೃಪ್ತಿ ನನಗೆ ಇದೆ. ಸಮಾಜ ಸದೃಢವಾಗಿದ್ದರೆ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ | ST Somashekhar: ಎಸ್ ಟಿ ಸೋಮಶೇಖರ್ ಬಿಜೆಪಿಗೆ ‘ಕೈ’ ಕೊಡೋದು ಪಕ್ಕಾ? ಡಿಸಿಎಂ ಜತೆ ಸಭೆಯಲ್ಲಿ ಭಾಗಿ!
ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಟಿ.ಪರಮೇಶ್ವರಪ್ಪ, ಎಂ.ಸಿ.ಪರಶುರಾಮಪ್ಪ, ಕಲಸೆ ಚಂದ್ರಪ್ಪ, ತಾರಾಮೂರ್ತಿ, ಷಣ್ಮುಖ, ರವಿಕುಮಾರ್ ಸಿಗಂದೂರು, ಎಚ್.ಎನ್.ದಿವಾಕರ್, ಬಿ.ನಾಗರಾಜ್, ಎಂ.ಹಾಲಪ್ಪ ಇನ್ನಿತರರು ಹಾಜರಿದ್ದರು. ಗಗನ ಪ್ರಾರ್ಥಿಸಿದರು. ಮಂಜಪ್ಪ ಮರಸ ಸ್ವಾಗತಿಸಿದರು. ಟಿ.ವಿ.ಪಾಂಡುರಂಗ ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ಮತ್ತು ಅಮೃತ ನಿರೂಪಿಸಿದರು.