ಬೆಂಗಳೂರು: ಅನೇಕ ದಿನಗಳಿಂದ ವಿವಾದದ ಕೇಂದ್ರ ಬಿಂದುವಾಗಿರುವ ಚಾಮರಾಜಪೇಟೆ ಮೈದಾನದಲ್ಲಿ ತಾವು ಧ್ವಜಾರೋಹಣ ಮಾಡುತ್ತೇವೆ ಎಂದು ಹೇಳಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ರಾಜ್ಯ ಸರ್ಕಾರ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಕಂದಾಯ ಇಲಾಖೆಗೆ ಜಾಗ ಸೇರಿದ್ದು, ಇಲಾಖೆಯಿಂದಲೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನಡೆಸಲಾಗುತ್ತದೆ ಎಂದು ಕಂದಾಯ ಇಲಾಖೆ ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಆರ್. ಅಶೋಕ್, ಚಾಮರಾಜಪೇಟೆ ಮೈದಾನದ ವಿವಾದ ನಡೆದುಕೊಂಡು ಬಂದ ಹಾದಿಯನ್ನು ಒಂದೊಂದಾಗಿ ವಿವರಿಸಿದರು.
-1952 ರಲ್ಲಿ ಸರ್ಕಾರ ಶಾಲೆ ನಿರ್ಮಾಣ ಮಾಡುವುದಕ್ಕೆ ಪ್ರಸ್ತಾವನೆ ಮಂಡಿಸಿತು.
-ನಾವು ಇಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ, ಈ ಜಾಗದಲ್ಲಿ ಶಾಲೆ ನಿರ್ಮಾಣವಾದರೆ ಪ್ರಾರ್ಥನೆಗೆ ಅವಕಾಶ ಸಿಗುವುದಿಲ್ಲ ಎಂದು, ಆ ಸಂದರ್ಭದಲ್ಲಿ ಅಬ್ದುಲ್ ವಾಜೀದ್ ಎನ್ನುವವರು ಸಿವಿಲ್ ಕೋರ್ಟ್ ಮೊರೆ ಹೋದರು
ಶಾಲೆ ನಿರ್ಮಾಣ ಮಾಡುವ ಕಾರ್ಯಕ್ಕೆ ತಡೆ ತಂದರು
-ನಂತರದಲ್ಲಿ, ಅಲ್ಲಿ ಶಾಲೆ ನಿರ್ಮಾಣ ಮಾಡಬಹುದು ಎಂದ ನ್ಯಾಯಾಲಯ, 1956ರಲ್ಲಿ ಅಬ್ದುಲ್ ವಾಜೀದ್ ಹಾಕಿದ್ದ ಅರ್ಜಿಯನ್ನು ವಜಾ ಮಾಡಿತು
-1974ರ ಸಿಟಿ ಸರ್ವೆಯಲ್ಲಿ ಆ ಜಾಗವನ್ನು ಆಟದ ಮೈದಾನ ಎಂದು ನೊಟಿಫೈ ಮಾಡಲಾಯಿತು, ಆ ಜಮೀನಿಗೆ 1235 ಎಂದು ನಂಬರ್ ಕೊಡಲಾಯಿತು.
-1976ರಲ್ಲಿ ಅನುಭೋಗದ ಹಕ್ಕನ್ನು ಕಾರ್ಪೊರೇಷನ್‌ಗೆ ನೀಡಲಾಯಿತು. ಈ ಆದೇಶದ ನಂತರ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗುತ್ತದೆ
-ಮೈದಾನದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು, ಶಾಲೆ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಲಾಗುತ್ತದೆ. ಈ ಆದೇಶದ ವಿರುದ್ಧ ಕಾರ್ಪೊರೇಷನ್, ಸುಪ್ರೀಂಕೋರ್ಟ್‌ಗೆ ಅಪೀಲ್ ಹೋಯಿತು
-ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್, ಪ್ರಾರ್ಥನೆಗೆ ಅವಕಾಶ ಕೊಡಬೇಕು ಎಂದು ತಿಳಿಸಿತು
ಇಷ್ಟೆಲ್ಲವನ್ನೂ ವಿವರಿಸಿದ ಆರ್. ಅಶೋಕ್, ಯಾವುದೇ ಹಕ್ಕನ್ನು ನ್ಯಾಯಾಲಯ ಯಾರಿಗೂ ನೀಡಿಲ್ಲ. ವಕ್ಫ್ ಬೋರ್ಡ್, ಬಿಬಿಎಂಪಿ ಯಾರಿಗೂ ಹಕ್ಕನ್ನು ಕೋರ್ಟ್ ನೀಡಿಲ್ಲ. ಯಾರು ಕೂಡ ಆಸ್ತಿಗಾಗಿ ಕೋರ್ಟ್‌ಗೆ ಹೋಗಿಲ್ಲ. ಇದು ಸಾಕಷ್ಟು ಸೂಕ್ಷ್ಮವಾದ ಪ್ರಕರಣವಾದ್ಧರಿಂದ ಕಾನೂನು ತಜ್ಞರು, ಪೋಲಿಸ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳ ಜತೆ ಕೂಡ ಚರ್ಚೆ ನಡೆಸಿದ್ದೇವೆ. ಈಗ ಕಂದಾಯ ಇಲಾಖೆ ಸ್ವತ್ತು ಎಂಬ ಮಹತ್ವದ ತೀರ್ಮಾನ ಮಾಡಿದ್ದೇವೆ ಎಂದರು.
ಕಂದಾಯ ಇಲಾಖೆಯಿಂದಲೇ ಧ್ವಜಾರೋಹಣ
ಕಂದಾಯ ಇಲಾಖೆಗೆ ಮೈದಾನ ಸೇರುವುದರಿಂದಾಗಿ, ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯಡಿ ಅಸಿಸ್ಟೆಂಟ್ ಕಮಿಷನರ್ ಧ್ವಜಾರೋಹಣ ಮಾಡುತ್ತಾರೆ ಎಂದು ಆರ್. ಅಶೋಕ್ ತಿಳಿಸಿದರು.
ಧ್ವಜಾರೋಹಣಕ್ಕೆ ಸ್ಥಳೀಯ ಶಾಸಕರು, ಸಂಸದರು ಬರಬಹುದು. ಆದರೆ ಕಂದಾಯ ಇಲಾಖೆಯ ಬೆಂಗಳೂರಿನ ಉತ್ತರ ಎಸಿಯವರೇ ಧ್ವಜಾರೋಹಣ ನೆರವೇರಿಸುತ್ತಾರೆ. ಸ್ಥಳದಲ್ಲಿ ಪೋಲಿಸ್ ಭದ್ರತೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಧ್ವಜಾರೋಹಣ ಕಾರ್ಯಕ್ರಮದಲಿ ಕೇವಲ ರಾಷ್ಟ್ರೀಯ ಘೋಷಣೆಗೆ ಮಾತ್ರ ಅವಕಾಶ ನೀಡಲಾಗಿದೆ. ಎಲ್ಲ ಸಂಘಟನೆಗಳವರೂ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು, ಆದರೆ ವೇದಿಕೆ ಮೇಳೆ ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಯಾವುದೇ ಧಾರ್ಮಿಕ ಘೋಷಣೆ ಮಾಡುವಂತಿಲ್ಲ ಎಂದು ಸಾರ್ವಜನಿಕರಿಗೆ ಪೋಲಿಸರು ಮಾರ್ಗಸೂಚಿ ಹೊರಡಿಸಲಿದ್ದಾರೆ. ಎಲ್ಲರೂ ಕಾನೂನು ನಿಯಮಗಳನ್ನು ಪಾಲಿಸುತ್ತಾರೆ ಎಂದು ನಿರೀಕ್ಷಿಸಿದ್ದೇವೆ ಎಂದು ಅಶೋಕ್ ಹೇಳಿದರು.
ಸದ್ಯಕ್ಕೆ ಸ್ವಾತಂತ್ರ್ಯ ದಿನಾಚರಣೆ ಕುರಿತು ನಿರ್ಧಾರ ಮಾಡಿದ್ದೇವೆ, ಗಣೇಶ ಉತ್ಸವದ ಕುರಿತು ನಂತರ ತೀರ್ಮಾನಿಸುತ್ತೇವೆ ಎಂದು ಅಶೋಕ್ ತಿಳಿಸಿದರು.
ಇದನ್ನೂ ಓದಿ | ಧ್ವಜಾರೋಹಣ ವಿವಾದ | ಮಾಣಿಕ್‌ಷಾ ಪರೇಡ್ ಗ್ರೌಂಡ್‌ಗಿಂತ ಚಾಮರಾಜಪೇಟೆ ಮೈದಾನವೇ ಈಗ ಕೇಂದ್ರಬಿಂದು!