Site icon Vistara News

Brand Bangalore: ಬ್ರ್ಯಾಂಡ್ ಬೆಂಗಳೂರಿಗಾಗಿ ಕೆನಡಾ ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರ ಒಪ್ಪಂದ

DCM DK Shivakumar

ಬೆಂಗಳೂರು: ಸಮಗ್ರ ಅಭಿವೃದ್ಧಿ ಮೂಲಕ ಬ್ರ್ಯಾಂಡ್‌ ಬೆಂಗಳೂರು (Brand Bangalore) ನಿರ್ಮಾಣಕ್ಕೆ ಕೆನಡಾ ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಕೆನಡಾ ಮೂಲದ ವರ್ಡ್ ಡಿಸೈನ್ ಸಂಸ್ಥೆಯ (WDO) ಅಧ್ಯಕ್ಷ ಡೇವಿಡ್ ಕುಸುಮ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದರು.

ಒಡಂಬಡಿಕೆಯ ಸಹಿ ಪ್ರಕ್ರಿಯೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿಗೆ ಹೊಸ ರೂಪ ನೀಡಿ ಈ ನಗರವನ್ನು ಜಾಗತಿಕ ನಗರವಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ವರ್ಲ್ಡ್ ಡಿಸೈನ್ ಆರ್ಗನೈಸೇಷನ್ ಜತೆ ಒಪ್ಪಂದ ಮಾಡಿಕೊಂಡಿದೆ. ಬ್ರ್ಯಾಂಡ್ ಬೆಂಗಳೂರು ಹಾಗೂ ಕರ್ನಾಟಕದ ಪಾಲಿಗೆ ಇಂದು ಹೊಸ ಅಧ್ಯಾಯ ಆರಂಭವಾಗಿದೆ, ಕರ್ನಾಟಕದ ಭವಿಷ್ಯದ ಅಭಿವೃದ್ಧಿಗೆ ಇದು ಹೆಜ್ಜೆಗುರುತಾಗಲಿದೆ ಎಂದು ತಿಳಿಸಿದರು.

ಕೆಲ ವರ್ಷಗಳ ಹಿಂದೆ ವಿಶ್ವ ವಿನ್ಯಾಸ ರಾಜಧಾನಿ ಯಾವುದು ಎಂಬ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಇದರಲ್ಲಿ ಬೆಂಗಳೂರು ಯಶ ಕಾಣಲಿಲ್ಲ. ಬೆಂಗಳೂರು ವಾಸಯೋಗ್ಯ ನಗರವಾಗಿ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ ಈ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ | Private Transport : ಸಚಿವ ರಾಮಲಿಂಗಾ ರೆಡ್ಡಿ ಸಭೆ ಸಕ್ಸಸ್‌; ಜುಲೈ 27ರ ಖಾಸಗಿ ಸಾರಿಗೆ ಬಂದ್‌ ಮುಂದೂಡಿಕೆ

ಬೆಂಗಳೂರು ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈ ನಗರವನ್ನು ಬೆಂಗಳೂರನ್ನು ಜಾಗತಿಕ ನಗರವಾಗಿ ಮಾಡಲು ಸರ್ಕಾರ ಬದ್ಧವಾಗಿದೆ. ಯಾವುದೇ ಯೋಜನೆಯಾದರೂ ಅದರ ವಿನ್ಯಾಸ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ ನಾವು ಈ ಸಂಸ್ಥೆ ಜತೆ ಕೈಜೋಡಿಸುತ್ತಿದ್ದೇವೆ. ಈ ಸಂಸ್ಥೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳ ವಿಚಾರದಲ್ಲಿ ಸಲಹೆ, ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದರು.

Deputy CM DK Shivakumar at Vidhana soudha

ಆರಂಭದಲ್ಲಿ ಈ ಒಪ್ಪಂದ ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಇದನ್ನು ಬಿಎಂಆರ್‌ಡಿಎ ವ್ಯಾಪ್ತಿಯ ಪ್ರದೇಶಗಳನ್ನು ಒಳಗೊಳ್ಳಲಾಗಿದೆ. ಬೆಂಗಳೂರಿಗೆ ತನ್ನದೇ ಆದ ಇತಿಹಾಸ, ಪರಂಪರೆ, ಸಂಸ್ಕೃತಿ ಹೊಂದಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಿಂದ ನಮಗೆ ಶಕ್ತಿ ಹೆಚ್ಚಲಿದೆ. ಸರ್ಕಾರ ಹಾಗೂ ಬಿಬಿಎಂಪಿ ಪರವಾಗಿ ಆಯುಕ್ತರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಿದರು.

ನಮ್ಮ ಹಿರಿಯರು ತಮ್ಮದೇ ಆದ ರೀತಿಯಲ್ಲಿ ಬೆಂಗಳೂರನ್ನು ಕಟ್ಟಿದ್ದಾರೆ. ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ನಾವು ಅದಕ್ಕೆ ಹೊಸ ರೂಪ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಈಗಿರುವ ಬೆಂಗಳೂರಿನಲ್ಲಿ ಯಾವ ರೀತಿಯ ಬದಲಾವಣೆ ಮಾಡಬಹುದು, ಮುಂದೆ ಬೆಳೆಯಲಿರುವ ಬೆಂಗಳೂರನ್ನು ಹೇಗೆ ರೂಪಿಸಬೇಕು, ಹೊಸ ಸ್ಯಾಟಲೈಟ್ ಟೌನ್ ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ಸಲಹೆ ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | HD Kumaraswamy : ಜೆಡಿಎಸ್-ಬಿಜೆಪಿ ನಡೆ ಟ್ರ್ಯಾಕ್ ಆಗುತ್ತಿದೆ ಎಂದ ಡಿಕೆಶಿ; ಸಿಎಂ ಆಗೋ ಡ್ರಾಮಾ ಎಂದ ಕೇಸರಿಪಡೆ!

ಈ ಸಂಸ್ಥೆ ಕೇಂದ್ರ ಕಚೇರಿ ಕೆನಡಾದಲ್ಲಿದ್ದು, ವಿಶ್ವದ ಅತ್ಯುತ್ತಮ ಆರ್ಕಿಟೆಕ್ಚರ್‌ಗಳನ್ನು ಹೊಂದಿದೆ. ಈ ಸಂಸ್ಥೆ ಅನೇಕ ದೇಶಗಳ ಜತೆ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿ ಸುಮಾರು 200-300 ಎಂಜಿನಿಯರ್‌ಗಳು ಕೆಲಸ ಮಾಡಲಿದ್ದಾರೆ. ಇಲ್ಲಿ ಅವರು ಯಾವುದೇ ಕಟ್ಟಣ ನಿರ್ಮಾಣ ಮಾಡುವುದಿಲ್ಲ. ಇವರು ಬೆಂಗಳೂರಿಗೆ ಹೊಸ ರೂಪ ನೀಡಲು ಸಲಹೆ ನೀಡುತ್ತಾರೆ. ಇವರು ಈಗ ಯಾವ ರೀತಿ ಸಲಹೆ ನೀಡುತ್ತಾರೆ ಎಂಬುದನ್ನು ನೋಡಿಕೊಂಡು ನಂತರದ ದಿನಗಳಲ್ಲಿ ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳಿಗೆ ರೂಪ ನೀಡುವ ಬಗ್ಗೆ ಆಲೋಚಿಸುತ್ತೇವೆ. ಬೆಂಗಳೂರಿಗೆ ಹೊಸ ರೂಪ ನೀಡಲು ನಾವು ಪ್ರಯತ್ನ ಮಾಡುತ್ತಿದ್ದು, ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಕೇಶ್ ಸಿಂಗ್ ಮತ್ತಿತರರು ಇದ್ದರು.

Exit mobile version