ಬೆಂಗಳೂರು: ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ನವೀಕರಿಸಬಹುದಾದ ಇಂಧನ ಮೂಲಗಳ ಪರಿಣಾಮಕಾರಿ ಬಳಕೆಯ ಮೂಲಕ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಕಡೆಗೂ ಗಮನ ಹರಿಸಿದ್ದು, ಸಮರ್ಪಕ ವಿದ್ಯುತ್ ಪೂರೈಕೆಗೆ ನಮ್ಮ ಸರ್ಕಾರ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಮಳೆ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ಜಲವಿದ್ಯುತ್ ಉತ್ಪಾದಕ ಘಟಕಗಳು ತಮ್ಮ ಸಾಮರ್ಥ್ಯಕ್ಕೆ ಸಮನಾಗಿ ವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲದಂತಾಗಿದೆ. ಉತ್ಪಾದನೆ ಕಡಿಮೆಯಿದ್ದು, ಬೇಡಿಕೆ ಹೆಚ್ಚಿರುವುದರಿಂದ ಅನಿವಾರ್ಯವಾಗಿ ತಾತ್ಕಾಲಿಕ ಒಡಂಬಡಿಕೆಯ ಮೇರೆಗೆ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಗೆ ನಾವು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Transport Department: ಸಾರಿಗೆ ನಿಗಮಗಳಲ್ಲಿ 6800 ಸಿಬ್ಬಂದಿ ನೇಮಕಾತಿಗೆ ಗ್ರೀನ್ ಸಿಗ್ನಲ್
ನಾವು ವೆಸ್ಟೆಂಡ್ ಹೋಟೆಲ್‌ನಲ್ಲಿ ಕೂತು ಸರ್ಕಾರ ನಡೆಸುತ್ತಿಲ್ಲ, ಜನರ ನಡುವೆ ಇದ್ದು ಅವರ ಕಷ್ಟಕ್ಕೆ ಹೆಗಲಾಗಿ ನಿಂತಿದ್ದೇವೆ ಎಂದು ಹೇಳಿದ್ದಾರೆ
ವಿದ್ಯುತ್ ಕೊರತೆ ನೀಗಿಸಲು ನಮ್ಮ ಸರ್ಕಾರದ ದಿಟ್ಟ ಕ್ರಮಗಳು
- ರೈತರಿಗೆ ಮೂರು ಪಾಳಿಯಲ್ಲಿ ನಿರಂತರ 5 ಗಂಟೆಗಳ ವಿದ್ಯುತ್ ಪೂರೈಕೆಗೆ ಸೂಚನೆ
- ಉತ್ತರ ಪ್ರದೇಶದಿಂದ 300 ಮೆ.ವ್ಯಾ ಮತ್ತು ಪಂಜಾಬ್ನಿಂದ 600 ಮೆ.ವ್ಯಾ ವಿದ್ಯುತ್ ಖರೀದಿಗೆ ಸೂಚನೆ
- ವಿದ್ಯುತ್ ಕಾಯ್ದೆಯ ಸೆಕ್ಷನ್ 11 ಜಾರಿ, ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳು ಗರಿಷ್ಠ ವಿದ್ಯುತ್ ಉತ್ಪಾದಿಸಿ ರಾಜ್ಯದ ಗ್ರಿಡ್ಗೆ ಪೂರೈಸುವಂತೆ ಆದೇಶ
- ರಾಜ್ಯದ ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಮರುಚಾಲನೆ
- ಎಲ್ಲಾ ಕಲ್ಲಿದ್ದಲು ಸಂಸ್ಥೆಗಳಿಂದ 15 ಲಕ್ಷ ಮೆಟ್ರಿಕ್ ಟನ್ ಪಡೆಯಲು ಕ್ರಮ
- ಅಲ್ಪಾವಧಿ ಆಧಾರದಲ್ಲಿ 1300 ಮೆ.ವ್ಯಾ ವಿದ್ಯುತ್ ಖರೀದಿಗೆ ಕ್ರಮ
- ಕೆಪಿಸಿಎಲ್ನ ಅನಿಲ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಾರ್ಯಾಚರಣೆ ಆರಂಭಕ್ಕೆ ಕ್ರಮ
- ಪಾವಗಡದಲ್ಲಿ ಹೆಚ್ಚುವರಿಯಾಗಿ 300 ಮೆ.ವ್ಯಾ ಮತ್ತು ಕಲಬುರಗಿಯಲ್ಲಿ 500 ಮೆ.ವ್ಯಾ ಸೋಲಾರ್ ಪಾರ್ಕ್ ಸ್ಥಾಪನೆ
- ಛತ್ತೀಸ್ ಗಡದಲ್ಲಿ ಖಾಸಗಿ / ಜಂಟಿ ಹೂಡಿಕೆಯಡಿ ಕ್ಯಾಪ್ಟಿವ್ ಕಲ್ಲಿದ್ದಲು ಗಣಿ ಆರಂಭಕ್ಕೆ ಕ್ರಮ
- ಇತರ ರಾಜ್ಯಗಳಲ್ಲಿನ stressed out ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಖರೀದಿಸಲು ಪ್ರಸ್ತಾಪ