ಹುಬ್ಬಳ್ಳಿ: ವೈಯಕ್ತಿಕ ದ್ವೇಷಕ್ಕೆ ವರ್ಗಾವಣೆ ಶಿಕ್ಷೆ ಕೊಟ್ಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಬಳಿ ಅಳಲು ತೋಡಿಕೊಂಡಿದ್ದ ನರ್ಸ್ ಸುನಿತಾ ನಾಯ್ಕ್ ಅವರ ವರ್ಗಾವಣೆ ಆದೇಶವನ್ನು (Transfer Order) ರಾಜ್ಯ ಸರ್ಕಾರ ಹಿಂಪಡೆದಿದೆ. ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೇ (ಕಿಮ್ಸ್) ಅವರನ್ನು ಮುಂದುವರಿಸುವಂತೆ ಆದೇಶ ಹೊರಡಿಸಲಾಗಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿ ಆಗಿದ್ದ ಸುನಿತಾ ನಾಯ್ಕ್ ಅವರನ್ನು ಧಾರವಾಡ ಜಿಲ್ಲೆಯ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಇಲಾಖೆ ವರ್ಗಾವಣೆ ಮಾಡಿತ್ತು. ವೈಯಕ್ತಿಕ ದ್ವೇಷಕ್ಕೆ ತನಗೆ ವರ್ಗಾವಣೆ ಶಿಕ್ಷೆ ಕೊಡಲಾಗಿದೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ನರ್ಸ್ ಆರೋಪಿಸಿದ್ದರು. ಈ ಬಗ್ಗೆ ಆರೋಗ್ಯ ಸಚಿವರ ಎದುರು ಅಳಲು ತೋಡಿಕೊಂಡಿದ್ದ ಸುನಿತಾ ನಾಯ್ಕ್, ನ್ಯಾಯ ಕೊಡಿಸುವಂತೆ ಬೇಡಿಕೊಂಡಿದ್ದರು.
ಸುನಿತಾ ನಾಯ್ಕ್‌ಗೆ ಆದ ಅನ್ಯಾಯದ ಕುರಿತು ವಿಸ್ತಾರ ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಸರ್ಕಾರ, ಸುನಿತಾರನ್ನು ಕಿಮ್ಸ್ ಆಸ್ಪತ್ರೆಯ ಶುಶ್ರೂಷಾಧಿಕಾರಿಯಾಗಿ ಮುಂದುವರಿಸುವಂತೆ ಆದೇಶ ಹೊರಡಿಸಿದೆ.
ಹುಬ್ಬಳ್ಳಿ ಸರ್ಕೀಟ್ ಹೌಸ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಆಗಮಿಸಿದ್ದಾಗ ಅವರ ಬಳಿ ಬ್ಯಾಯ ಕೊಡಿಸುವಂತೆ ನರ್ಸ್ ಸುನಿತಾ ನಾಯ್ಕ್ ಬೇಡಿಕೊಂಡಿದ್ದರು. ಶಾಸಕ ಪ್ರಸಾದ್ ಅಬ್ಬಯ್ಯ ಅವರ ಸಹೋದರ ಮಂಜುನಾಥ ಅವರ ಮಾತು ಕೇಳದ್ದಕ್ಕೆ ವರ್ಗಾವಣೆ ಮಾಡಿಸಲಾಗಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ | Moral Policing: ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ; ಅಕ್ಕ-ತಮ್ಮ ಅಂದ್ರೂ ಬಿಡದೆ ಹೊಡೆದರು ಯುವಕರು!
ಕಿಮ್ಸ್‌ನಲ್ಲಿ ನರ್ಸಿಂಗ್ ಸುಪರಿಂಟೆಂಡೆಂಟ್ ಆಗಿದ್ದ ಸುನಿತಾ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಟ್ರಾನ್ಸಫರ್ ಮಾಡಲಾಗಿತ್ತು. ಅದೇ ರೀತಿ ಕಳೆದ ನಾಲ್ಕು ತಿಂಗಳಿಂದ ಸಂಬಳ ಆಗಿಲ್ಲವೆಂದು ನರ್ಸ್ ಆಕ್ರೋಶ ವ್ಯಕ್ತಪಡಿಸಿ, ಸಚಿವ ದಿನೇಶ್ ಗುಂಡೂರಾವ್, ಶಾಸಕ ಪ್ರಸಾದ್ ಅಬ್ಬಯ್ಯ ಎದುರೇ ಕೂಗಾಡಿದ್ದರು. ಹೀಗಾಗಿ ಅವರ ವರ್ಗಾವಣೆ ಆದೇಶವನ್ನು ಇಲಾಖೆ ಹಿಂಪಡೆದಿದೆ.
ಶ್ರೀಕಾಂತ್ ಪೂಜಾರಿ ಬೆಂಬಲಿಸಿ ಪ್ರತಿಭಟನೆ; ಆರ್. ಅಶೋಕ್ ಸೇರಿ 43 ಬಿಜೆಪಿ ಮುಖಂಡರ ವಿರುದ್ಧ ಎಫ್ಐಆರ್
ಹುಬ್ಬಳ್ಳಿ: ಕರಸೇವಕ ಶ್ರೀಕಾಂತ್ ಪೂಜಾರಿ ಬೆಂಬಲಿಸಿ ಪ್ರತಿಭಟನೆ (BJP Protest) ನಡೆಸಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಸೇರಿ 43 ಬಿಜೆಪಿ ಮುಖಂಡರ ವಿರುದ್ಧ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ.
ಹುಬ್ಬಳ್ಳಿ -ಧಾರವಾಡ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಎ1 ಆರ್ ಅಶೋಕ (ವಿಪಕ್ಷ ನಾಯಕ), ಎ2 ಅರವಿಂದ ಬೆಲ್ಲದ್ (ವಿಪಕ್ಷ ಉಪನಾಯಕ), ಎ3 ಮಹೇಶ್ ಟೆಂಗಿನಕಾಯಿ ( ಹು-ಧಾ ಸೆಂಟ್ರಲ್ ಶಾಸಕ), ಎ7 ಎಂ.ಆರ್. ಪಾಟೀಲ್ (ಕುಂದಗೋಳ ಶಾಸಕ), ಎ8 ಪ್ರದೀಪ್ ಶೆಟ್ಟರ್ (ವಿಪ ಸದಸ್ಯ), ಎ9 ಅಶೋಕ ಕಾಟವೆ (ಮಾಜಿ ಶಾಸಕ), ಎ18 – ಪ್ರಭು ಕುಂದಗೋಳಮಠ (ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ) ಸೇರಿ 43 ಬಿಜೆಪಿ ಮುಖಂಡರ ವಿರುದ್ಧ IPC U/S 290, 504 ಅಡಿಯಲ್ಲಿ ಕೇಸ್ ದಾಖಲಾಗಿದೆ. ಕೋರ್ಟ್‌ನಿಂದ ಅನುಮತಿ ಪಡೆದು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | CM Siddaramaiah: ಚಿತ್ರಕಲಾ ಪರಿಷತ್ತಿಗೆ 50 ಲಕ್ಷ ರೂ. ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ
ರೌಡಿಶೀಟರ್ ಶ್ರೀಕಾಂತ್ ಪೂಜಾರಿ ಬಂಧನವನ್ನು ವಿರೋಧಿಸಿ ಜ.3ರಂದು ನಡೆಸಿದ ಪ್ರತಿಭಟನೆ ವೇಳೆ ಹುಬ್ಬಳ್ಳಿ ಶಹರ ಪೊಲೀಸ ಠಾಣೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಪ್ರಯತ್ನಿಸಿ, ಪ್ರಚೋದನಕಾರಿ ಭಾಷಣವನ್ನು ಮಾಡಿ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ತೊಂದರೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್, ಲುಚ್ಚಾ, ಹೇಡಿ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿ, ಅವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಪಮಾನ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಹೀಗಾಗಿ ಪ್ರತಿಭಟನಾಕಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ