- ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿದ್ದ ಸಾಹಿತಿಗಳ ಸಿದ್ಧಾಂತ, ವಿವಾದಿತ ಭಾಷಣ, ಆಸ್ತಿ ವಿವರ ಕಲೆ ಹಾಕಲು ಗುಪ್ತಚರ ಇಲಾಖೆಗೆ ಸರ್ಕಾರ ಸೂಚನೆ
- ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ
- ಸರ್ಕಾರಕ್ಕೆ ಪತ್ರ ಬರೆದ ಸಾಹಿತಿಗಳ ಮೇಲೆ ನಿಗಾ
ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಪೂರ್ವಾಪರಗಳ ಬಗ್ಗೆ ವರದಿ ಸಲ್ಲಿಸುವಂತೆ ಗುಪ್ತಚರ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ನಡೆದಿದ್ದ ಪಠ್ಯಪುಸ್ತಕ ಪರಿಷ್ಕರಣೆಯನ್ನು ಹಲವು ಸಾಹಿತಿಗಳು ತೀವ್ರ ವಿರೋಧಿಸಿದ್ದರು. ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದರು. ಪಠ್ಯದಲ್ಲಿ ಬಲಪಂಥೀಯ ಧೋರಣೆ ಅಂಶಗಳಿವೆ ಎಂದು ಸಾಹಿತಿಗಳ ವಲಯ ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ಕೇಳಿಬಂದಿತ್ತು.
ವಿವಾದ ತಣ್ಣಗಾಗಿಸಲು ಸಿಎಂ ಬೊಮ್ಮಾಯಿ ಅವರು ಮಧ್ಯ ಪ್ರವೇಶಿಸಿ ಸಮಿತಿಯನ್ನು ವಿಸರ್ಜನೆಗೊಳಿಸಿದ್ದರು. ಭುಗಿಲೆದಿದ್ದ ಬೌದ್ಧಿಕ ಸಮರಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೂ ಕೈಹಾಕಿದ್ದರು. ಇದೀಗ ಗುಪ್ತಚರ ಇಲಾಖೆ ಮೂಲಕ ಪರಿಷ್ಕೃತ ಪಠ್ಯ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಹಿನ್ನೆಲೆ, ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಅವರ ಸಿದ್ದಾಂತ ಸೇರಿದಂತೆ ಪ್ರತಿಯೊಂದು ಅಂಶಗಳ ಬಗ್ಗೆಯೂ ಸಂಪೂರ್ಣವಾಗಿ ವಿವರ ಸಂಗ್ರಹಿಸಿ ಮಾಹಿತಿ ನೀಡುವಂತೆ ಗುಪ್ತಚರ ಇಲಾಖೆಗೆ ರಾಜ್ಯ ಸರ್ಕಾರ ಸೂಚಿಸಿದೆ. ಈ ಬೆಳವಣಿಗೆಯೂ ಮುಂದಿನ ದಿನಗಳಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಆರೆಸ್ಸೆಸ್ ಹಾಗೂ ಬಿಜೆಪಿ ಸಿದ್ದಾಂತ ಅಳವಡಿಸುವುದಲ್ಲದೆ ಖ್ಯಾತ ಸಾಹಿತಿಗಳ ಪಠ್ಯ ಕೈಬಿಟ್ಟಿದ್ದ ಆರೋಪ ಹೊತ್ತಿದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿರುದ್ಧ ಕೆಲ ಸಾಹಿತಿಗಳು ಅಕ್ರೋಶ ವ್ಯಕ್ತಪಡಿಸಿದ್ದರು.
ಸರ್ಕಾರಕ್ಕೆ ಪತ್ರ ಬರೆದು ತಮ್ಮ ಲೇಖನಗಳನ್ನು ಪಠ್ಯದಿಂದ ಕೈ ಬಿಡುವಂತೆ ಹೇಳಿದ್ದರು. ಇದರಿಂದ ಸರ್ಕಾರಕ್ಕೂ ಮುಜುಗರವಾಗಿತ್ತು.
ಪತ್ರ ಬರೆದಿದ್ದ ಸಾಹಿತಿ, ಲೇಖಕರ ಬಗ್ಗೆ ಪಟ್ಟಿ ಮಾಡಿರುವ ಸರ್ಕಾರ ಪ್ರತಿಯೊಂದು ಅಂಶಗಳ ಬಗ್ಗೆ ವಿವರ ಕಲೆ ಹಾಕುವಂತೆ ಸೂಚನೆ ನೀಡಿದೆ. ಸಾಹಿತಿಗಳ ಹೆಸರು, ಪೋನ್ ನಂಬರ್, ವಿಳಾಸ ಜೊತೆಗೆ. ಅವರ ಹುಟ್ಟಿನಿಂದ ಹಿಡಿದು ಬೆಳೆದು ಬಂದ ಹಾದಿ, ಸಿದ್ದಾಂತ, ಅವರ ಆಸ್ತಿ ಮೊತ್ತ, ಇದುವರೆಗೂ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದೆಯಾ ಎಂಬಿತ್ಯಾದಿ ವಿವರಗಳನ್ನೂ ಸಂಗ್ರಹಿಸಲಾಗುವುದು. ಬಳಿಕ ಯಾವುದಾದರೂ ವಿಷಯದಲ್ಲಿ ತಪ್ಪು ಎಸಗಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
ಪತ್ರ ಬರೆದಿದ್ದ ಪ್ರಮುಖ ಸಾಹಿತಿಗಳು
ದೇವನೂರು ಮಹದೇವ, ಈರಪ್ಪ ಕಂಬಳಿ, ಜಿ.ರಾಮಕೃಷ್ಣ, ರೂಪಾ ಹಾಸನ, ಮುಡ್ನಾಕೂಡು ಚಿನ್ನಸ್ವಾಮಿ, ಬೋಳುವಾರು ಮೊಹಮ್ಮದ್ ಕುಂಇ್, ಚಂದ್ರಶೇಖರ್ ತಾಳ್ಯ, ಡಾ.ಎಚ್.ಎಸ್.ಅನುಪಮಾ ಹಾಗೂ ದು.ಸರಸ್ವತಿ ಸರ್ಕಾರಕ್ಕೆ ನೂತನ ಪಠ್ಯ ಪರಿಷ್ಕರಣೆಯಲ್ಲಿ ತಮ್ಮ ಲೇಖನಗಳನ್ನು ಕೈ ಬಿಡುವಂತೆ ಪತ್ರ ಬರೆದಿದ್ದರು. ಇನ್ನೂ ಕೆಲವರು ಪರಷ್ಕೃತ ಪಠ್ಯದಲ್ಲಿ ತಮ್ಮ ಲೇಖನವಿಲ್ಲದಿದ್ದರೂ, ಪಠ್ಯಕ್ರಮದಲ್ಲಿ ಅಳವಡಿಸದಂತೆ ಮುಂಗಡವಾಗಿ ಪತ್ರ ಬರೆದಿದ್ದರು.