Site icon Vistara News

Ahinda Convention: ಚಿತ್ರದುರ್ಗದಲ್ಲಿ ಜ.28ರಂದು ಶೋಷಿತರ ಬೃಹತ್‌ ಜಾಗೃತಿ ಸಮಾವೇಶ

Chitradurga News

ಚಿತ್ರದುರ್ಗ: ಕಾಂತರಾಜು ಆಯೋಗದ ಜಾತಿಗಣತಿ ವರದಿಯನ್ನು (Caste Census Report) ಯಾವ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಇತ್ತೀಚೆಗೆ ದಾವಣಗೆರೆಯಲ್ಲಿ ಬೃಹತ್‌ ವೀರಶೈವ ಲಿಂಗಾಯತ ಸಮಾವೇಶ ಆಯೋಜಿಸಲಾಗಿತ್ತು. ಇದೀಗ ಆ ಸಮಾವೇಶಕ್ಕೆ ಟಕ್ಕರ್‌ ನೀಡಲು ಚಿತ್ರದುರ್ಗದಲ್ಲಿ ಜ.28ರಂದು ಬೃಹತ್‌ ಅಹಿಂದ ಸಮಾವೇಶ (Ahinda Convention) ಆಯೋಜನೆಯಾಗುತ್ತಿದೆ. ಆದಷ್ಟು ಬೇಗ ಜಾತಿಗಣತಿ ವರದಿ ಜಾರಿ ಆಗಬೇಕು ಎಂಬುವುದು ಈ ‘ಶೋಷಿತರ ಜಾಗೃತಿ ಸಮಾವೇಶʼದ ಪ್ರಮುಖ ಬೇಡಿಕೆಯಾಗಿದೆ.

ಸಮಾವೇಶದ ಪ್ರಮುಖ ಹಕ್ಕೊತ್ತಾಯಗಳು

1.ಕಾಂತರಾಜ ಆಯೋಗದ ವರದಿಯನ್ನು ಜಾರಿಗೊಳಿಸಬೇಕು.
2.ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು.
3.ಈಗಾಗಲೇ ಅಗತ್ಯಕ್ಕಿಂತ ಹೆಚ್ಚು ಪ್ರಾತಿನಿಧ್ಯ ಪಡೆದಿರುವ ಜಾತಿಗಳಿಗೆ ನೀಡಲಾಗಿರುವ ಶೇ.10 ಇಡಬ್ಲ್ಯುಎಸ್ ಮೀಸಲಾತಿ ರದ್ದು ಮಾಡಬೇಕು.
4.ಮಹಿಳಾ ರಾಜಕೀಯ ಮೀಸಲಾತಿಯಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಮಹಿಳೆಯರಿಗೆ ಒಳ ಮೀಸಲಾತಿ ನೀಡಬೇಕು.
5.ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರಿಗೆ ಮೀಸಲಾತಿ ನೀಡಬೇಕು,
ಮೀಸಲಾತಿ ಪ್ರಮಾಣ ಜನಸಂಖ್ಯೆಗೆ ಅನುಗುಣವಾಗಿ ಇರಬೇಕು.
6.ಖಾಸಗಿ ಕ್ಷೇತ್ರದಲ್ಲಿ ಶೋಷಿತ ವರ್ಗಗಳಿಗೆ ಸೇರಿದವರ ಪ್ರಾತಿನಿಧ್ಯವನ್ನು ಖಾತರಿಪಡಿಸಿಕೊಳ್ಳಲು ಅಗತ್ಯವಿರುವ ಕಾನೂನು ರೂಪಿಸಬೇಕು.

10 ಲಕ್ಷ ಜನರು ಆಗಮಿಸುವ ನಿರೀಕ್ಷೆ

ಸಮಾವೇಶದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ. ರಾಮಚಂದ್ರಪ್ಪ ಅವರು, ಶೋಷಿತರ ಜಾಗೃತಿಗಾಗಿ ನಗರದಲ್ಲಿ ಜ.28ರಂದು ರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ 10 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | BJP Karnataka : ಬಿಜೆಪಿ ಕಾರ್ಯಕಾರಿಣಿ ಆರಂಭ; 28ಕ್ಕೆ 28 ಗೆಲ್ಲಲೇ ಬೇಕು ಎಂದ ಬಿಎಸ್‌ವೈ

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಆಯೋಜಿರುವ ಸಮಾವೇಶದಲ್ಲಿ ಕೆಲವು ನಿರ್ಣಯಗಳನ್ನು ಮಂಡನೆ ಮಾಡುತ್ತೇವೆ. ಶೋಷಿತ ಸಮುದಾಯಗಳ ಜನರಲ್ಲಿ ಜಾಗೃತಿ ಮೂಡಿಸುವುದು, ಜಾತಿ ಸಂಘಟನೆಗಳನ್ನು ಬಲಪಡಿಸುವುದು ಸಮಾವೇಶದ ಮುಖ್ಯ ಉದ್ದೇಶ. ನಾವು ಮೇಲ್ವರ್ಗದ ಜನಕ್ಕೆ ಗುಲಾಮರಾಗಿ ಬದುಕುತ್ತಿದ್ದೇವೆ. ಅದರಿಂದ ಹೊರಬರಬೇಕು ಎನ್ನುವುದು ನಮ್ಮ ಸಮಾವೇಶದ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾಂತರಾಜ ವರದಿ ಬಿಡುಗಡೆಯಾದರೆ ತೊಂದರೆ ಯಾಕೆ?

ರಾಜ್ಯದಲ್ಲಿ ನಾವೇ ಅಧಿಕಾರ ಮಾಡುತ್ತೇವೆ ಎಂದು ಕೆಲವರು ದರ್ಪದಿಂದ ಹೇಳಿದ್ದರು. ಹೀಗಾಗಿ ನಾವು ಬಹುಸಂಖ್ಯಾತರು ಇದ್ದೇವೆ ಎಂದು ತೋರಿಸಬೇಕು. ನಮ್ಮನ್ನು ಅವರು ಕೆರಳಿಸಿದ್ದಾರೆ. ಕಾಂತರಾಜ್ ಆಯೋಗದ ವರದಿ ಬಹಳ ಮುಖ್ಯ. ಆದಷ್ಟು ಬೇಗ ವರದಿ ಜಾರಿ ಆಗಬೇಕು. ಕಾಂತರಾಜ ವರದಿ ಬಿಡುಗಡೆ ಮಾಡಿದರೆ ಇವರಿಗೇನು ತೊಂದರೆ ಎಂದು ಪ್ರಶ್ನಿಸಿದರು.

ನಮಗೆ ಹೈಕಮಾಂಡ್ ಒತ್ತಡ ಇದೆ ಎಂದು ಅನ್ಯಪಕ್ಷದವರು ಹೇಳಿದ್ದಾರೆ. ದಾವಣಗೆರೆಯಲ್ಲಿ ಲಿಂಗಾಯತರ ಸಮಾವೇಶದಲ್ಲಿ ನಮ್ಮನ್ನು ಕೆರಳಿಸಿದರು. ಅವರಿಗೆ ಸರಿಯಾದ ಉತ್ತರ ನಾವು ಕೊಡಬೇಕಲ್ಲವೇ? ಸಿದ್ದರಾಮಯ್ಯ ಸಹೋದ್ಯೋಗಿಗಳಿಗೆ ಎಚ್ಚರಿಕೆ ಕೊಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ಕೊಟ್ಟರು.

ನಾವು ಬೃಹತ್ ಮಟ್ಟದಲ್ಲಿ ಸಮಾವೇಶ ಮಾಡುತ್ತಿದೇವೆ. ಈ ಹಿಂದೆ, ಮುಂದೆಯೂ ಯಾರೂ ಈ ರೀತಿ ಮಾಡಿರಬಾರದು, ಹಾಗೆ ಸಮಾವೇಶ ಮಾಡುತ್ತೇವೆ. ಸಮಾವೇಶದಲ್ಲಿ 10 ಲಕ್ಷ ಜನ ಸೇರುವ ಸಾಧ್ಯತೆ ಇದೆ. ಸಿಎಂ, ಡಿಸಿಎಂ, ಸಚಿವರು ಬರುವ ನಿರೀಕ್ಷೆ ಇದೆ. ಶೋಷಿತ ಸಮುದಾಯಗಳ ಶಾಸಕರು, ಸಚಿವರು, ಮುಖಂಡರು ಬರುತ್ತಾರೆ. ಜಾತ್ಯತೀತವಾಗಿ ಎಲ್ಲಾ ನಾಯಕರು ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ಸಮಾವೇಶದಲ್ಲಿ ಕೆಲವು ಹಕ್ಕೊತ್ತಾಯ ಮಾಡುತ್ತೇವೆ. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಕೊಪ್ಪಳ, ಗದಗ, ಹಾವೇರಿ, ವಿಜಯನಗರದಿಂದ ಹೆಚ್ಚಿನ ಸಂಖ್ಯೆಯ ಜನ ಬರುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ | Sugar Factory : ಯತ್ನಾಳ್‌ಗೆ ಭಾರಿ ಹೊಡೆತ; ಸಿದ್ಧಶ್ರೀ ಸಕ್ಕರೆ ಕಾರ್ಖಾನೆ ಮುಚ್ಚಲು ಆದೇಶ

ಸಮಾವೇಶಕ್ಕೆ ಸುಮಾರು 10 ಸಾವಿರಕ್ಕೂ ಅಧಿಕ ವಾಹನಗಳು ಬರುತ್ತವೆ. 3 ಲಕ್ಷ ಆಸನಗಳ ವ್ಯವಸ್ಥೆ ಮಾಡಿದ್ದೇವೆ. ಮುಖ್ಯ ವೇದಿಕೆಯಲ್ಲಿ 200 ಆಸನಗಳು ಸಿದ್ಧ ಮಾಡಿದ್ದೇವೆ. ಇನ್ನುಳಿದ ಎರಡು ವೇದಿಕೆಯಲ್ಲಿ 400 ಆಸನ ವ್ಯವಸ್ಥೆ ಮಾಡಿದ್ದೇವೆ. ಸಮಾವೇಶದಲ್ಲಿ ಮೂರೂವರೆ ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಬಿರಿಯಾನಿ ಜತೆಗೆ ಸಸ್ಯಾಹಾರಿ ಊಟದ ವ್ಯವಸ್ಥೆಯೂ ಮಾಡಿದ್ದೇವೆ ಎಂದು ಹೇಳಿದರು.

Exit mobile version