Site icon Vistara News

Award | ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ; ಯಾವ ಜಿಲ್ಲೆಯ ಯಾರಿಗೆ ಗರಿ, ಶಿಕ್ಷಕರ ವೈಶಿಷ್ಟ್ಯವೇನು?

Teacher Transfer

ಬೆಂಗಳೂರು: 2022-23ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು(Award) ರಾಜ್ಯ ಸರ್ಕಾರ ಘೋಷಿಸಿದೆ. ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಶಿಕ್ಷಕ, ಶಿಕ್ಷಕಿಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಾರಿಯ ಪ್ರಶಸ್ತಿ ಪುರಸ್ಕೃತರು, ಅವರ ವೈಶಿಷ್ಟ್ಯದ ಕುರಿತ ಮಾಹಿತಿ ಇಲ್ಲಿದೆ.

ಸೃಜನಶೀಲತೆಗೆ ಒಲಿದು ಬಂತು ಪ್ರಶಸ್ತಿ
ಶಿರಸಿ: ಶಿಕ್ಷಣದ ಜತೆಗೆ ರಂಗಭೂಮಿ, ಸಾಹಿತ್ಯ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡ ಮಾರಿಕಾಂಬಾ ಸರ್ಕಾರಿ ಪ್ರೌಢ ಶಾಲೆ ಕನ್ನಡ ಶಿಕ್ಷಕ ನಾರಾಯಣ ಭಾಗ್ವತ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಕುಮಟಾ ತಾಲೂಕಿನ ಹಂದಿಗೋಣ ಗ್ರಾಮದ ನಾರಾಯಣ ಭಾಗ್ವತ್ ಅವರು ೩೧ ವರ್ಷದಿಂದ ಪ್ರಾಥಮಿಕ ಶಾಲಾ, ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿಸುತ್ತಿದ್ದಾರೆ. ೨೫ ವರ್ಷಗಳಿಗೂ ಅಧಿಕ ಕಾಲ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಬೋಧನೆ ಮಾಡಿದ್ದಾರೆ.

ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗಿ ತೊಡಗಿಕೊಂಡಿರುವ ಇವರು, ಕಾವ್ಯ, ನಾಟಕ, ಚಿತ್ರ ರಚನೆ, ನಿರ್ದೇಶನ, ಗಾಯನ, ಬೇಸಿಗೆ ಶಿಬಿರ, ಮೇಕಪ್, ವೇಷಭೂಷಣ ಸೇರಿ ಅನೇಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ತಾಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಣ ಪ್ರಶಸ್ತಿ ಜತೆಗೆ ರಾಜ್ಯ ಜ್ಞಾನ ಸಿಂಧು, ನೇಷನ್ ಬಿಲ್ಡರ್, ಮಕ್ಕಳ ರಂಗಭೂಮಿ ಸೇವೆಗಾಗಿ ಕಸಾಪ ಪ್ರಶಸ್ತಿ, ಲಾಕ್‌ಡೌನ್‌ ವೇಳೆ ಮಕ್ಕಳಿಗೆ ಇ- ಲರ್ನಿಂಗ್, ಮಕ್ಕಳ ಕಲಿಕೆಗೆ ಬ್ಲಾಗ್ ರಚನೆಯಲ್ಲಿ ತೊಡಗಿಕೊಂಡು ಗಮನ ಸೆಳೆದಿದ್ದಾರೆ. ೫೦ಕ್ಕೂ ಅಧಿಕ ಮಕ್ಕಳ ನಾಟಕ ನಿರ್ದೇಶನ, ೧೫ಕ್ಕೂ ಅಧಿಕ ಶಿಕ್ಷಕರಿಗೆ ನಾಟಕ ‌ನಿರ್ದೇಶನ ಮಾಡಿದ್ದಾರೆ. ಅನೇಕ‌ ಕಡೆ ಸಂಪನ್ಮೂಲ ವ್ಯಕ್ತಿ ಆಗಿಯೂ ಕಾರ್ಯ ಮಾಡುತ್ತಿದ್ದಾರೆ. ಇವರ ಭಾಷಾ ಕಲಿಸುವಿಕೆಗೆ ಮಕ್ಕಳು ಆಸಕ್ತಿ‌ಯಿಂದ ತೊಡಗಿಕೊಳ್ಳುವುದು ಶಿಕ್ಷಕರ ಕಲಿಸುವ ವಿಧಾನಕ್ಕೂ ಸಾಕ್ಷಿಯಾಗಿದೆ.

ಕ್ರಿಯಾಶೀಲ, ಆದರ್ಶ ಶಿಕ್ಷಕ ಸುಧಾಕರ ನಾಯಕ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಂಚನಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಸುಧಾಕರ.ಜಿ.ನಾಯಕ ಅವರು ಪ್ರಸಕ್ತ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕ್ರಿಯಾಶೀಲ, ಆದರ್ಶ ಶಿಕ್ಷಕರಾಗಿ, ಉತ್ತಮ ಸಂಘಟಕರಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಸುಧಾಕರ ನಾಯಕ, ಯಲ್ಲಾಪುರ ತಾಲೂಕಿನ ಜೋಗಿಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಆರಂಭಿಸಿದರು.

30 ವರ್ಷಗಳ ಸೇವಾ ಅವಧಿಯಲ್ಲಿ ಹಿತ್ಲಕಾರಗದ್ದೆ, ಕನ್ನಡಗಲ್, ಕೆ.ಜಿ.ಎಸ್ ಶಾಲೆ, ನಂದೊಳ್ಳಿ, ಸೂಳಗಾರ, ಆನಗೋಡ ಶಾಲೆಗಳಲ್ಲಿ ಶಿಕ್ಷಕರಾಗಿ, ಆನಗೋಡ, ನಂದೊಳ್ಳಿ ಸಿ.ಆರ್.ಪಿ ಆಗಿ, ಬಿ.ಆರ್.ಸಿ ಕೇಂದ್ರದಲ್ಲಿ ಬಿ.ಆರ್.ಪಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಕಿರವತ್ತಿ ಸಮೀಪದ ಕಂಚನಳ್ಳಿ ಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನೂನು ಸೇವಾ ಸಮಿತಿಯಲ್ಲಿ ಪ್ಯಾರಾ ಲೀಗಲ್ ವಾಲಂಟಿಯರ್, ರೆಡ್ ಕ್ರಾಸ್ ಸಂಸ್ಥೆಯಲ್ಲಿ ಖಜಾಂಚಿಯಾಗಿ, ತಾಲೂಕು ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲತೆಯಿಂದ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಕೊಂಡಿದ್ದಾರೆ.

ಶಿವಾನಂದಪ್ಪ, ರಘು

ಶಿವಮೊಗ್ಗದ ಇಬ್ಬರಿಗೆ ಪ್ರಶಸ್ತಿ
ಶಿವಮೊಗ್ಗದ ಇಬ್ಬರು ಶಿಕ್ಷಕರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕಾರಿಪುರ ತಾಲೂಕಿನ ಹರಗುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಶಿವಾನಂದಪ್ಪ ಬಿ. ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಶಿವಮೊಗ್ಗದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕ ರಘು ಬಿ.ಎಂ ಅವರಿಗೆ ಪ್ರಶಸ್ತಿ ದೊರೆತಿದೆ.

ಗುಣಮಟ್ಟದ ಬೋಧನೆಗೆ ಗೌರವ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಪ್ರಾಥಮಿಕ ಶಾಲೆಯ ಅಪ್ಪಾಸಾಹೇಬ್ ಗಿರೆನ್ನವರ್ ಅವರಿಗೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಹಾಗೂ ದಾಖಲಾತಿಗೆ ಹೆಚ್ಚು ಶ್ರಮಿಸಿದ ಕಾರಣ ಇವರಿಗೆ ಪ್ರಶಸ್ತಿ ಸಿಕ್ಕಿದೆ. ಅಪ್ಪಾಸಾಹೇಬ್ ಗಿರೆನ್ನವರ್ ಅವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.

ಕೊಪ್ಪಳ ಜಿಲ್ಲೆಯಲ್ಲಿ ಇಬ್ಬರಿಗೆ ಪ್ರಶಸ್ತಿ
ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಇಬ್ಬರು ಶಿಕ್ಷಕರು ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಅರುಣಾ ನರೇಂದ್ರ ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿದ್ಯಾ ಕಂಪಾಪುರಮಠ ಆಯ್ಕೆಯಾಗಿದ್ದಾರೆ. ಅರುಣಾ ನರೇಂದ್ರ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಸರ್ಕಾರಿ ಹೈಸ್ಕೂಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ವೃತ್ತಿಯ ಜತೆಗೆ ಸಾಹಿತ್ಯದಲ್ಲೂ ಇವರು ಛಾಪು ಮೂಡಿಸಿದ್ದು, 10 ಕೃತಿಗಳನ್ನು ರಚಿಸಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆಯ್ಕೆಯಾಗಿರುವ ವಿದ್ಯಾ ಕಂಪಾಪುರಮಠ ಅವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರಬೆಂಚಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಿ.ಜೆ.ನಿರಂಜನ್ ಮತ್ತು ಡಾ. ಚೇತನ್ ಬಣಕಾರ್

ಮಕ್ಕಳ ಬಗೆಗಿನ ಕಾಳಜಿಗೆ ಇಬ್ಬರು ಶಿಕ್ಷಕರಿಗೆ ಗರಿ
ವಿಜಯನಗರ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಹೊಸಪೇಟೆ ತಾಲೂಕಿನ ವೆಂಕಟಾಪುರ ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪಿ.ಜೆ.ನಿರಂಜನ್, ಹರಪನಹಳ್ಳಿಯ ಡಾ. ಚೇತನ್ ಬಣಕಾರ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಉಭಯ ಶಿಕ್ಷಕರು ಕರ್ತವ್ಯದ ಜತೆಗೆ ಶಾಲೆ ಅಭಿವೃದ್ಧಿಗಾಗಿ ಶ್ರಮಿಸಿದ್ದು, ಮಕ್ಕಳನ್ನು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಸಿಕೊಳ್ಳುವಂತೆ ಮಾಡಿದ್ದಾರೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹೆಚ್ಚಿನ ಕಾಳಜಿ ಹೊಂದಿರುವ ಶಿಕ್ಷಕರಿಗೆ ಜಿಲ್ಲೆಯ ಗಣ್ಯರು ಶುಭಾಶಯ ಕೋರಿದ್ದಾರೆ.

ಡಾ. ಸುನೀಲ ಪರೀಟ್‌ ಹಾಗೂ ಸುಶೀಲಾ ಗುರವ

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಲಕ್ಕುಂಡಿ ಗ್ರಾಮದ ಪ್ರೌಢಶಾಲೆಯ ಹಿಂದಿ ಭಾಷಾ ಶಿಕ್ಷಕ ಡಾ. ಸುನೀಲ ಪರೀಟ್‌ ಹಾಗೂ ಬೆಳಗಾವಿ ಹೊರವಲಯದ ವಡಗಾವಿಯ ನಂ.15 ಸರ್ಕಾರಿ ಶಾಲೆಯ ಸಹ ಶಿಕ್ಷಕಿ ಸುಶೀಲಾ ಗುರವ ಅವರಿಗೆ ಪ್ರಶಸ್ತಿ ಸಿಕ್ಕಿದೆ.‌ ಸುನೀಲ ಪರೀಟ್‌ ಲಕ್ಕುಂಡಿ ಗ್ರಾಮದ ಪ್ರೌಢಶಾಲೆಯಲ್ಲಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸುಶೀಲಾ ಗುರವ ಅವರು ವಡಗಾವಿಯ ಸರ್ಕಾರಿ ಶಾಲೆಯ ಕಳೆದ 22 ವರ್ಷಗಳಿಂದ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ರಾಜ್ಯಮಟ್ಟದ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಬಡಸ ಗ್ರಾಮದ ನಿರ್ಗತಿಕ ಹೆಣ್ಣು ಮಗಳಿಗೆ 6 ವರ್ಷ ಆಶ್ರಯ ನೀಡಿ ಶಿಕ್ಷಣ ನೀಡಿದ್ದು, ಜಿಲ್ಲಾ ಉತ್ತಮ ಶಿಕ್ಷಕಿ, ಜಿಲ್ಲಾ ಸಾವಿತ್ರಿಬಾಯಿ ಫುಲೆ ‌ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ | 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಇಲ್ಲಿದೆ ಪಟ್ಟಿ

Exit mobile version