Site icon Vistara News

Janaspandana: ಫೆ. 8ರಂದು ವಿಧಾನಸೌಧದಲ್ಲಿ ರಾಜ್ಯಮಟ್ಟದ ಸಿಎಂ ಜನಸ್ಪಂದನ

Jana Spandana

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 8 ರಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಜನಸ್ಪಂದನ (Janaspandana) ಕಾರ್ಯಕ್ರಮವನ್ನು ನಡೆಸಲಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಸೂಚಿಸಲಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಅವರು ಬುಧವಾರ ಪೂರ್ವಸಿದ್ಧತಾ ಸಭೆ ನಡೆಸಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು ಅಗತ್ಯ ಸಲಹೆ‌ ಮತ್ತು‌ ಸೂಚನೆಗಳನ್ನು ನೀಡಿದ್ದಾರೆ.‌

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನಸ್ಪಂದನ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಬೇಕು. ಮುಖ್ಯಮಂತ್ರಿಯವರು ನಡೆಸುತ್ತಿರುವ ಎರಡನೇ ಜನಸ್ಪಂದನ ಕಾರ್ಯಕ್ರಮ ಇದಾಗಿದ್ದು, ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಹಾಜರಿದ್ದು, ವಿಶೇಷ ಆಸಕ್ತಿ ವಹಿಸಿ ಕುಂದು ಕೊರತೆ ನಿವಾರಣೆಗೆ ಕ್ರಮ ವಹಿಸಬೇಕೆಂದು ತಿಳಿಸಿದರು. ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸುವ ವಿಶೇಷಚೇತನರು, ಹಿರಿಯನಾಗರಿಕರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದರು.

ಇದನ್ನೂ ಓದಿ | Old Pension Scheme: ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ನಿಂದ ಒಪಿಎಸ್‌ಗೆ ಶಿಫ್ಟ್ ಆಗಲು ಅವಕಾಶ

ಸ್ವಚ್ಛತೆ, ಕುಡಿಯುವ ನೀರು, ಲಘು ಉಪಾಹಾರ, ಊಟದ ವ್ಯವಸ್ಥೆಗಳನ್ನು ಮಾಡುವ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಳೆದ ಬಾರಿಯ ಜನಸ್ಪಂದನದಲ್ಲಿ ಸ್ವೀಕರಿಸಿದ ಅರ್ಜಿಗಳ ತ್ವರಿತ ವಿಲೇವಾರಿ ಮಾಡುವ ಬಗ್ಗೆ ಎಲ್ಲ ಇಲಾಖೆಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ ಅವರು ಕೆಡಿಪಿ ಸಭೆಯಲ್ಲಿಯೂ ಜನಸ್ಪಂದನ ಅರ್ಜಿ ವಿಲೇವಾರಿ ಪ್ರಗತಿ ಪರಿಶೀಲನೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಜನಸ್ಪಂದನಕ್ಕೆ ಆಗಮಿಸುವ ಜನರ ಅನುಕೂಲಕ್ಕಾಗಿ ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಕ್ಕೆ ಉಚಿತ ಬಸ್‌ ವ್ಯವಸ್ಥೆ ಮಾಡಬೇಕು. ವಿವಿಧ ಇಲಾಖೆಗಳ ಅರ್ಜಿ ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಿ, ಅದಕ್ಕೆ ಅಗತ್ಯವಿರುವ ಎಲ್ಲ ಉಪಕರಣಗಳನ್ನೂ ಒದಗಿಸಲು ಹಾಗೂ ಸಿಬ್ಬಂದಿಯನ್ನೂ ನಿಯೋಜಿಸಲು ಇ-ಆಡಳಿತ ಇಲಾಖೆಗೆ ಸೂಚಿಸಿದರು.

ಮನವಿದಾರರ ದೂರುಗಳನ್ನು ಪರಿಶೀಲಿಸಿ, ನಿಗದಿತ ಕೌಂಟರುಗಳಿಗೆ ತೆರಳಲು ಸೂಕ್ತ ಮಾರ್ಗದರ್ಶನ ನೀಡಲು ಪ್ರವೇಶ ದ್ವಾರದಲ್ಲಿಯೇ ಅಧಿಕಾರಿ, ಸಿಬ್ಬಂದಿಗಳ ಫೆಸಿಲಿಟೇಷನ್‌ ತಂಡವನ್ನು ನಿಯೋಜಿಸುವಂತೆ ನಿರ್ದೇಶನ ನೀಡಿದರು. ಅಂದಿನ ದಿನ ವಿಧಾನಸೌಧದಲ್ಲಿ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡಲು ಹಾಗೂ ಸಂಚಾರ ನಿರ್ವಹಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ತಿಳಿಸಿದರು.

ಇದನ್ನೂ ಓದಿ | Old Pension Scheme: ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ನಿಂದ ಒಪಿಎಸ್‌ಗೆ ಶಿಫ್ಟ್ ಆಗಲು ಅವಕಾಶ

ಸಭೆಯಲ್ಲಿ ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ, ಇ-ಆಡಳಿತ ಇಲಾಖೆ ಕಾರ್ಯದರ್ಶಿ ಉಜ್ವಲ್‌ ಕುಮಾರ್‌ ಘೋಷ್‌, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಅಜಯ್‌ ನಾಗಭೂಷಣ್‌ ಮತ್ತು ವಿವಿಧ ಇಲಾಖೆಗಳ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Exit mobile version