ಬೆಳಗಾವಿ: ಹೆಣ್ಣು ಭ್ರೂಣ ಹತ್ಯೆಗಳನ್ನು (Female Foeticide) ತಡೆಯಲು ನಾವು ಸ್ಪಷ್ಟ ಕ್ರಮ ತೆಗೆದುಕೊಳ್ಳಲೇಬೇಕು. ಬಹಳ ಕಡೆ ಇದು ಅವ್ಯಾಹತವಾಗಿ ನಡೆಯುತ್ತಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಎಂಬುದು ಗೊತ್ತಾಗಿದೆ. ಭ್ರೂಣ ಹತ್ಯೆ ಕೊಲೆಗಿಂತ ಕಮ್ಮಿಯೇನಲ್ಲ. ಹೀಗಾಗಿ ಭ್ರೂಣ ಹತ್ಯೆ ತಡೆಯಲು ರಾಜ್ಯ ಮಟ್ಟದ ಕಾರ್ಯಪಡೆ ರಚಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ (Belagavi Winter Session) ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ನಡೆದ ಚರ್ಚೆ ವೇಳೆ ಮಾತನಾಡಿದ ಸಚಿವರು, ಇಂತಹ ಪ್ರಕರಣದಲ್ಲಿ ಬಂಧನದ ಸಂದರ್ಭದಲ್ಲಿ ಯಾವ ಯಾವ ಸೆಕ್ಷನ್ ಹಾಕಬೇಕು ಎಂಬುದನ್ನು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬುದನ್ನು ನೋಡುತ್ತಿದ್ದೇವೆ. ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯದ ಬಗ್ಗೆಯೂ ಕೂಡ ಚರ್ಚೆ ಮಾಡುತ್ತಿದ್ದೇವೆ. ಅಲ್ಟ್ರಾ ಸೌಂಡ್ ಮಿಷನ್ ಖರೀದಿಗೂ ಮಾರಾಟಕ್ಕೂ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೇಳಿದರು.
ಭ್ರೂಣ ಹತ್ಯೆ ಬಗ್ಗೆ ಮಾಹಿತಿ ನೀಡಿದ್ರೆ 1 ಲಕ್ಷ ರೂ. ಪ್ರೋತ್ಸಾಹಧನ
ಪ್ರತಿವರ್ಷ ಅಲ್ಟ್ರಾ ಸೌಂಡ್ ಮಿಷನ್‌ಗಳ ಲೈಸೆನ್ಸ್ ರಿನಿವಲ್ ಮಾಡುವಂತೆ ನೋಡುತ್ತಿದ್ದೇವೆ. ಸೆಕೆಂಡ್ ಹ್ಯಾಂಡ್ ಅಲ್ಟ್ರಾ ಸೌಂಡ್ ಮಿಷನ್ ಬಳಕೆ ಬಗ್ಗೆಯೂ ನಿಯಮ ರೂಪಿಸುತ್ತೇವೆ. ಕಾಲ್ ಸೆಂಟರ್ ಓಪನ್ ಮಾಡುವುದಕ್ಕೂ ನಮಗೆ ಅನುಮೋದನೆ ಸಿಕ್ಕಿದೆ. ಯಾವುದಾದರೂ ಮಾಹಿತಿದಾರರಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡುತ್ತೇವೆ. ಹೆಣ್ಣು ಭ್ರೂಣ ಹತ್ಯೆ ತಡೆಯಲು ಮಾಹಿತಿ ನೀಡುವವರಿಗೂ 1 ಲಕ್ಷ ರೂ. ಪ್ರೋತ್ಸಾಹಧನ ನೀಡುವ ಬಗ್ಗೆಯೂ ಚರ್ಚೆ ಇದೆ. ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದೇವೆ. 56 ಸಬ್ ಡಿವಿಷನ್ ವ್ಯಾಪ್ತಿಯಲ್ಲಿ ಮೇಲ್ವಿಚಾರಣೆ ತಂಡ ರಚನೆಗೆ ನಿರ್ಧಾರ ಮಾಡಿದ್ದೇವೆ. ಜತೆಗೆ ಭ್ರೂಣ ಹತ್ಯೆ ತಡೆಯಲು ವಿಶೇಷ ನೀತಿ ರೂಪಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.
ಭ್ರೂಣ ಪರೀಕ್ಷೆ ನಿಯಮದ ಪ್ರಕಾರ ಮಾಡಬೇಕು. ಇದರ ಪ್ರಕಾರ ಸ್ಕ್ಯಾನಿಂಗ್ ಸೆಂಟರ್ ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮಾಡಬಾರದು. ನಮ್ಮ ಇಲಾಖೆ ಇದರ ಬಗ್ಗೆ ಪರಿಶೀಲನೆ ಮಾಡಬೇಕು. ಮಂಡ್ಯ, ಮೈಸೂರು ಭಾಗದಲ್ಲಿ ಭ್ರೂಣ ಹತ್ಯೆ ಪ್ರಕರಣ ದಾಖಲಾಗಿದೆ. ಜೂನ್‌ನಲ್ಲಿ ನಮ್ಮ ಇಲಾಖೆ ಇಲ್ಲಿ ದಾಳಿ ಮಾಡಿದರೂ ಸ್ವಲ್ಪದರಲ್ಲಿ ಆರೋಪಿಗಳು ತಪ್ಪಿಸಿಕೊಂಡಿದ್ದರು.. ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆ ಪ್ರಕರಣ ತಡೆಗೆ ನಿಯಮ ಇದೆ. ಆದರೆ ಈ ನಿಯಮ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಕಾನೂನುಬಾಹಿರ ಕೇಂದ್ರಗಳಲ್ಲಿ ಇಂತಹ ಪ್ರಕರಣ ಬೆಳಕಿಗೆ ಬರುತ್ತಿದೆ. ಔಷಧ ಮೂಲಕವೇ ಭ್ರೂಣ ಹತ್ಯೆ ನಡೆಯುತ್ತಿದೆ. ಹೀಗಾಗಿ ಕಠಿಣ ಕ್ರಮ ಆಗಬೇಕಿದೆ. ಜತೆಗೆ ಜಾಗೃತಿ ಮೂಡಿಸೋ ಕೆಲಸ ಮಾಡಬೇಕು. ರಾಜ್ಯ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | Congress Guarantee : 5ನೇ ಗ್ಯಾರಂಟಿ ಯುವನಿಧಿ ಡಿ. 21ರಿಂದ ಜಾರಿ; ಅರ್ಜಿ ಸಲ್ಲಿಕೆ ಪೂರ್ಣ ಮಾಹಿತಿ
ಮೂರು ತಿಂಗಳಿಗೊಮ್ಮೆ ಭ್ರೂಣ ಹತ್ಯೆ ಬಗ್ಗೆ ಪರಿಶೀಲನೆಗೆ ಟಾಸ್ಕ್ ಫೋರ್ಸ್ ಕೆಲಸ ಮಾಡುತ್ತದೆ. ಅನಧಿಕೃತ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗಳ ಪರಿಶೀಲನೆ ಆಗಬೇಕು. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತದೆ. ಡಿಎಚ್‌ಒಗಳಿಗೆ ಜಿಲ್ಲಾ ಹಂತದಲ್ಲಿ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ತಾಲೂಕು ಹಂತದಲ್ಲಿ ಒಂದು ಟೀಂ ರಚನೆಗೆ ನಿರ್ಧಾರ ಮಾಡಿದ್ದೇವೆ. ನಮಗೆ ಪೊಲೀಸ್ ಇಲಾಖೆ ಸಹಕಾರ ಬೇಕಿದೆ. ACP ಹಂತದ ಅಧಿಕಾರಿಗಳನ್ನು ನಮ್ಮ ಟೀಂಗೆ ಸೇರಿಸಿಕೊಳ್ಳೋ ವ್ಯವಸ್ಥೆ ಮಾಡುವ ಪ್ರಕ್ರಿಯೆ ಆಗುತ್ತಿದೆ ಎಂದರು.
ವಿಶೇಚ ನೀತಿ ರಚನೆ
ಸಾವಿರಾರು ಸಂಖ್ಯೆಯಲ್ಲಿ ಭ್ರೂಣ ಹತ್ಯೆ ಆಗುತ್ತಿದೆ. ಇಂತಹ ಘಟನೆಗಳು ನೋವು ತಂದಿದೆ. ಇದು ಸಮಾಜ ತಲೆ ತಗ್ಗಿಸುವ ಘಟನೆ. ಈಗಾಗಲೇ ಭ್ರೂಣ ಹತ್ಯೆ ಕೇಸ್ ಅನ್ನು ಸಿಐಡಿಗೆ ವಹಿಸಲಾಗಿದೆ. ಕಾನೂನಿನಲ್ಲಿ ಏನಾದರೂ ಬದಲಾವಣೆ ತರಬೇಕಾ ಅಂತ ಚಿಂತನೆ ಮಾಡ್ತಿದ್ದೇವೆ. ನಮ್ಮ ಇಲಾಖೆಯ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಡಾಕ್ಟರ್‌ಗಳೇ ಅಲ್ಲದವರು ಇಂತಹ ಕೆಲಸ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಂತಹ ಕೃತ್ಯಗಳು ನಿಲ್ಲಬೇಕು. ಹೀಗಾಗಿ ಕಠಿಣ ಕ್ರಮಕ್ಕೆ ನಿರ್ಧಾರ ಮಾಡಲಾಗಿದೆ. ಜತೆಗೆ ವಿಶೇಷ ನೀತಿ ರೂಪಿಸುವ ಬಗ್ಗೆಯೂ ಸಮಾಲೋಚನೆ ಎಂದು ತಿಳಿಸಿದರು.
ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ: ಉಮಾಶ್ರೀ ಒತ್ತಾಯ
ಸದನದಲ್ಲಿ ಸದಸ್ಯೆ ಉಮಾಶ್ರೀ ಮಾತನಾಡಿ, ಮೋಕ್ಷ ಸಿಗುವುದು ಗಂಡು ಮಗುವಿನಿಂದಲೇ ಎಂಬ ಮನೋಭಾವ ಸಮಾಜದಲ್ಲಿ ಬೇರೂರಿದೆ. ಹೆಣ್ಣು ಏನು ಬೇಕಾದರೂ ಮಾಡಬಹುದು. ನಾನು 8ನೇ ವಯಸ್ಸಿಗೆ ತಂದೆ-ತಾಯಿ ಕಳೆದುಕೊಂಡೆ. ಕಷ್ಟಪಟ್ಟು ಜೀವನ ನಡೆಸಿದೆ. ಮದುವೆಯಾಯ್ತು, ಬಳಿಕ ವಿಚ್ಛೇದನ ಆಯ್ತು, ನನ್ನ ತಂದೆ-ತಾಯಿಯನ್ನ ಕೊನೆ ಸಮಯದಲ್ಲಿ ನೋಡಿಕೊಂಡಿದ್ದು ನಾನು. ಕಷ್ಟಪಟ್ಟು ಸಾಕಿದೆ, ನಾನು ಹೆಣ್ಣಾಗಿ ಅವರ ಅಂತಿಮ ಕಾರ್ಯ ಮಾಡಿದೆ. ಇದೆಲ್ಲವನ್ನು ನಾನೊಬ್ಬಳು ಹೆಣ್ಣಾಗಿ ಮಾಡಿದೆ ಎಂದು ಎದೆ ತಟ್ಟಿಕೊಂಡು ಹೇಳುತ್ತಾ ಭಾವುಕರಾದರು.
ಭ್ರೂಣ ಹತ್ಯೆ ಮಾಡಿದವರಿಗೆ ಸಾಮಾನ್ಯ ಕೇಸ್ ಹಾಕುತ್ತಾರೆ. ಮೊದಲ ಬಾರಿ ಭ್ರೂಣ ಹತ್ಯೆಯಲ್ಲಿ ಭಾಗಿಯಾದವರಿಗೆ 50 ಸಾವಿರ ದಂಡ, 3 ವರ್ಷ ಶಿಕ್ಷೆ, ಜಾಮೀನು ಸಿಗುತ್ತೆ. ಇದು ಹತ್ಯೆ ತಾನೇ, ಇದಕ್ಕೂ 304 ಕೊಲೆ ಕೇಸ್ ಹಾಕಿ, ಜೀವಾವಧಿ ಶಿಕ್ಷೆ ನೀಡಿ. ಭ್ರೂಣ ಹತ್ಯೆಯಲ್ಲಿ ಪಾಲ್ಗೊಂಡಿರುವವರ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟರ್ ಕಾರ್ಡ್ ಸರ್ಕಾರಿ ಸೌಲಭ್ಯ ದೊರೆಯುವ ಎಲ್ಲ ಕಾರ್ಡ್ ವಾಪಸ್ ಪಡೆಯಿರಿ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಅಮ್ಮ ಅಮ್ಮ ಎಂದು ಮಗು ಕೂಗುತ್ತೆ, ನನ್ನ ಕಾಪಾಡಿ ಎಂದು ಅದು ಕೂಗುತ್ತೆ. ಆದರೆ ಕೇಳೋಕೆ ಧ್ವನಿನೇ ಇಲ್ಲವಲ್ಲಾ ಎಂದು ಸದನದಲ್ಲಿ ಗದ್ಗದಿತರಾದ ಉಮಾಶ್ರೀ ಅವರು, ಹೆಣ್ಣು ಭ್ರೂಣ ಹತ್ಯೆ ನಿರಾತಂಕವಾಗಿ ನಡೆಯುತ್ತಿದೆ. ಮಚ್ಚು ಇನ್ನೋಂದು ಬೇಕಿಲ್ಲ, ಕೇವಲ ಯಂತ್ರದ ಮೂಲಕ ಭ್ರೂಣ ತೆಗೆದು ಹತ್ಯೆ ಮಾಡಲಾಗುತ್ತಿದೆ ಪ್ರಸ್ತಾಪಿಸಿದರು.
ಹೆಣ್ಣಿಲ್ಲದೆ ಭೂತ, ಭವಿಷ್ಯತ್, ವರ್ತಮಾನ ಇಲ್ಲ
ಹೆಣ್ಣು ಇಲ್ಲದೆ ವರ್ತಮಾನ, ಭೂತ, ಭವಿಷ್ಯ ಇಲ್ಲ. ಪರೀಕ್ಷೆ ಮಾಡಿ ಹೆಣ್ಣು ಭ್ರೂಣವನ್ನು ತೆಗೆದಾಗ ಇನ್ನೂ ಹೃದಯ ಮಿಡಿಯುತ್ತಲೇ ಇರುತ್ತೆ. ಆದರೆ ಅದನ್ನು ತೆಗೆದುಕೊಂಡು ಹೋಗಿ ಕಾವೇರಿ ಒಡಲಿಗೆ ಸೇರಿಸುತ್ತಾರೆ. ಇದರ ತಡೆಗೆ ಕಠಿಣ ಕಾನೂನು ಇಲ್ಲ. ಹಾಗಾಗಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಅನುಮತಿ ಇಲ್ಲದ ಆಸ್ಪತ್ರೆಗಳಲ್ಲಿ ಇದು ನಡೆಯುತ್ತಿದೆ ಎಂದು ಸಚಿವರು ಹೇಳಿದರು. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಹೆಚ್ಚು ಶಿಕ್ಷಣ ಸಿಗುತ್ತಿದೆ. ಸರ್ಕಾರ ಜಾಗೃತಿ ಮೂಡಿಸುವ ಕೆಲಸ ಆಗಿದೆ. ಆದರೂ ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿವೆ ಎಂದರು.
ಗರ್ಭದಲ್ಲಿ ಇರುವ ಮಗು ಯಾವುದು ಎಂದು ಗೊತ್ತಾಗದೆ ಇದ್ದಾಗ ತೆಗೆದಿದ್ದು ಇದೆ. 6 ತಿಂಗಳಿನ ಮಗುವನ್ನು ಹೊರ ತೆಗೆಯಲಾಗಿದೆ. ಹೊರಗೆ ತೆಗೆದಾಗ ಮಗು ಜೀವಂತ ಇದ್ದಿದ್ದು ಇದೆ ಎಂದು ಒಬ್ಬ ನರ್ಸ್ ಹೇಳಿದ್ದಾಳೆ. ಭಾರತ ಮಾತೆಯೆ ಪುತ್ರರು ನಾವು ಎಂದು ಹೇಳುತ್ತೇವೆ. ಆದರೆ, ನಮ್ಮ ಮನೆಯಲ್ಲಿ ಹೆಣ್ಣು ಮಗುವಿಗೆ ಜಾಗವಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ | Belagavi Winter Session: ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ ಮಂಡನೆ; ಹೆಚ್ಚಲಿದೆ ಮುದ್ರಾಂಕ ಶುಲ್ಕ!
ಕಾನೂನು ಸರಿಯಾಗಿ ಅನುಷ್ಠಾನವಾಗಲಿ: ಭಾರತಿ ಶೆಟ್ಟಿ
ಸದಸ್ಯೆ ಭಾರತಿ ಶೆಟ್ಟಿ ಪ್ರತಿಕ್ರಿಯಿಸಿ, ಭ್ರೂಣ ಹತ್ಯೆ, ಭ್ರೂಣ ಲಿಂಗ ಪತ್ತೆ ತಡೆಗೆ ಕಾನೂನು ಇದೆ. ಆದರೆ ಅದು ಜಾರಿ ಆಗಿಲ್ಲ. ಮಂಡ್ಯ ಕೇಸ್‌ನಲ್ಲಿ ಆರೋಗ್ಯ ಇಲಾಖೆ ಲೋಪ ಇದೆ. ನೋಂದಣಿ ಆಗದ ಸ್ಕ್ಯಾನಿಂಗ್ ಸೆಂಟರ್ ಇಷ್ಟು ವರ್ಷ ಕೆಲಸ ಮಾಡಿದ್ದು ಹೇಗೆ? ಈಗಾಗಲೇ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಅವರು ಖಂಡಿತ ತಪ್ಪಿಸಿಕೊಂಡು ಹೋಗ್ತಾರೆ. ಸರ್ಕಾರ ಕಾನೂನು ಸರಿಯಾಗಿ ಅನುಷ್ಠಾನ ಮಾಡಬೇಕು. ಅಕ್ರಮ ಮಾಡುವವರಿಗೆ ಜಾಮೀನು ಸಿಗದಂತೆ ನಿಯಮ ತರಬೇಕು. ಕಾನೂನಿನಿಂದ ತಪ್ಪಿಸಿಕೊಂಡು ಹೋಗದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.