Site icon Vistara News

ಅಮರನಾಥ ಯಾತ್ರೆಗೆ ತೆರಳಿದ್ದ ರಾಜ್ಯದ ಯಾತ್ರಿಕರು ಸೇಫ್; ಯಾತ್ರೆ ರದ್ದಾದ ಹಿನ್ನೆಲೆ ವಾಪಸ್

ಅಮರನಾಥ್‌

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಅಮರನಾಥ ಕ್ಷೇತ್ರದ ಸಮೀಪ ಮೇಘಸ್ಫೋಟದಿಂದ ಪ್ರವಾಹ ಉಂಟಾಗಿ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರಿಂದ ಯಾತ್ರೆಯನ್ನು ರದ್ದುಗೊಳಿಸಲಾಗಿದ್ದು, ರಾಜ್ಯದ ಯಾತ್ರಾರ್ಥಿಗಳು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ರಾಜ್ಯದಿಂದ ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಶಿವಮೊಗ್ಗ, ದಕ್ಷಿಣ ಕನ್ನಡ, ವಿಜಯಪುರ ಜಿಲ್ಲೆಗಳಿಂದ ಹಲವು ಯಾತ್ರಾರ್ಥಿಗಳು ಅಮರನಾಥ ಯಾತ್ರೆಗೆ ತೆರಳಿದ್ದರು.

ಶಿವಮೊಗ್ಗದ ಮಹಿಳಾ ತಂಡ ಸುರಕ್ಷಿತ

ಶಿವಮೊಗ್ಗದಿಂದ ತೆರಳಿದ್ದ ಮಹಿಳೆಯರ ತಂಡ ಸುರಕ್ಷಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪೂರ್ವ ನಿಗದಿಯಂತೆ ಶುಕ್ರವಾರವೇ ಈ ತಂಡ ಅಮರನಾಥ ದರ್ಶನಕ್ಕೆ ಹೋಗಬೇಕಿತ್ತು. ಆದರೆ, ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ದರ್ಶನ ರದ್ದಾಗಿದೆ. ಶಿವಮೊಗ್ಗದಿಂದ ಅಮರನಾಥಕ್ಕೆ ತೆರಳಿದ್ದ ಮಹಿಳಾ ತಂಡದಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಸುರೇಖಾ ಮುರಳೀಧರ್ ಸೇರಿ 16 ಮಂದಿ ಇದ್ದರು.

ಈ ತಂಡ ಅಮರನಾಥ ಸಮೀಪದ ಪಹಲ್ಗಾಮ್ ಬೇಸ್‌ಕ್ಯಾಂಪ್‌ನಲ್ಲಿ ತಂಗಿತ್ತು. ಸ್ಥಳೀಯ ಆಡಳಿತದ ಸೂಚನೆಯಂತೆ ಶುಕ್ರವಾರ ದರ್ಶನಕ್ಕೆ ತೆರಳಲು ಬೇಸ್ ಕ್ಯಾಂಪ್‌ಗೆ ತಂಡ ತೆರಳಿತ್ತು. ಬಳಿಕ ದರ್ಶನಕ್ಕೆ ಹೋಗಲಾಗದೆ ಬೇಸ್ ಕ್ಯಾಂಪ್‌ನಿಂದ ತಂಡ ಅಮರನಾಥ ಯಾತ್ರೆಯನ್ನೇ ರದ್ದುಗೊಳಿಸಿ ಶ್ರೀನಗರಕ್ಕೆ ತಲುಪಿದ್ದು, ಅಲ್ಲಿಂದ ಬೆಂಗಳೂರಿಗೆ ಮರಳಿ ಬರಲಿದೆ. ಕಳೆದ ಜುಲೈ 4ರಂದು ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ್ದ ಮಹಿಳಾ ತಂಡ, ಬೆಂಗಳೂರಿನಿಂದ ವೈಷ್ಣೋದೇವಿ ದರ್ಶನ ಪಡೆದು, ಬಳಿಕ ಅಮರನಾಥ ದರ್ಶನಕ್ಕೆ ತೆರಳಿತ್ತು.

ನಾವು 16 ಜನ ಮಹಿಳೆಯರು ಅಮರನಾಥ ಯಾತ್ರೆಗೆ ಬಂದಿದ್ದೆವು. ಶುಕ್ರವಾರ ದರ್ಶನ ಪಡೆಯಬೇಕಾಗಿತ್ತು. ಆದರೆ, ಅವಕಾಶ ನೀಡಿರಲಿಲ್ಲ. ಆನಂತರದ ಮೇಘಸ್ಫೋಟ ಅವಘಡ ಸುದ್ದಿ ಕೇಳಿ ಆತಂಕವಾಯಿತು. ಪ್ರಾಣ ಉಳಿಯತೆಂಬ ಸಮಾಧಾನ ಇದೆ. ಆದರೆ ದೇವರ ದರ್ಶನ ಆಗಿಲ್ಲವೆಂಬ ಬೇಸರ ಆಗಿದೆ. ಪೆಹಲ್ಗಾಮ್‌ ಬೇಸ್‌ನಿಂದ ಟಿಟಿ ವಾಹನದಲ್ಲಿ ಶ್ರೀನಗರಕ್ಕೆ ಹೋಗಿ, ಅಲ್ಲಿಂದ ಬೆಂಗಳೂರು ಮೂಲಕ ಶಿವಮೊಗ್ಗ ತಲುಪುತ್ತೇವೆ ಎಂದು ಸುರೇಖಾ ಮುರಳೀಧರ್ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ | Live Updates: ಅಮರನಾಥ ಯಾತ್ರೆ ದುರಂತ; ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ

ಯಾದಗಿರಿಯ ಯಾತ್ರಾರ್ಥಿಗಳು ಸೇಫ್

ಅಮರನಾಥ ಯಾತ್ರೆಗೆ ತೆರಳಿದ್ದ ಯಾದಗಿರಿ ಜಿಲ್ಲೆಯ ಯಾವುದೇ ಯಾತ್ರಿಕರೂ ಸಂಕಷ್ಟಕ್ಕೆ ಸಿಲುಕಿಲ್ಲ. ಆದರೆ, ಬೀದರ್‌ನ ಐದು ಮಂದಿ ಸಿಲುಕಿಕೊಂಡಿದ್ದು, ಸದ್ಯ ಅವರು ಸುರಕ್ಷಿತವಾಗಿದ್ದಾರೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಯಾತ್ರಿಕರನ್ನು ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಿದೆ ಎಂದು ಮಾಹಿತಿ ನೀಡಿದರು.

ಮೈಸೂರಿನ ೧೦ ಮಂದಿ ಪಾರು

ಅಮರನಾಥ ಯಾತ್ರೆಗೆ ತೆರಳಿದ್ದ ಮೈಸೂರು ಮೂಲದ 10 ವಕೀಲರ ತಂಡ ಪ್ರಾಣಾಪಾಯದಿಂದ ಪಾರಾಗಿದ್ದು, ಮೈಸೂರಿಗೆ ವಾಪಸ್ ಬರಲು ಸಜ್ಜಾಗಿದ್ದಾರೆ. ಅವರು ಸುರಕ್ಷಿತವಾಗಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಮೇಘಸ್ಪೋಟ ಆಗಿರುವ ಜಾಗದಿಂದ ದೂರ ಇದ್ದೆವು. ಯಾವುದೆ ತೊಂದರೆ ಇಲ್ಲ ಎಂದು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

ಮಂಗಳೂರಿನ ೩೦ ಮಂದಿ ಸುರಕ್ಷಿತ

ದ.ಕ ಜಿಲ್ಲೆಯ ಬಂಟ್ವಾಳದಿಂದ ಅಮರನಾಥ ಯಾತ್ರೆಗೆ ತೆರಳಿದ್ದ 30 ಮಂದಿಯ ತಂಡ ಸುರಕ್ಷಿತವಾಗಿದೆ. ಯಾತ್ರಿಗಳ ತಂಡದ ಜತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನಿರಂತರ ಸಂಪರ್ಕದಲ್ಲಿದ್ದು, ಇನ್ನು 28 ಕಿ.ಮೀ‌.ಸಂಚರಿಸಿದರೆ ಯಾತ್ರಾ ಸ್ಥಳಕ್ಕೆ ಯಾತ್ರಿಗಳು ತಲುಪಲಿದ್ದಾರೆ. ಭಾನುವಾರ ಬೆಳಗ್ಗೆ ಅಮರನಾಥದಲ್ಲಿ‌ ದರ್ಶನ ಭಾಗ್ಯ ಸಿಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ದರ್ಶನ ಪಡೆದಿದ್ದ ಗಾಣಗಾಪುರದ ೧೧ ಯಾತ್ರಿಕರು ಸುರಕ್ಷಿತ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರದ 11 ಯಾತ್ರಿಕರು ಸುರಕ್ಷಿತವಾಗಿದ್ದಾರೆ. ಅಮರನಾಥ ಕ್ಷೇತ್ರದ ಬಳಿಯ ಬಾರಟಲ್ ಕ್ಯಾಂಪ್‌ನಲ್ಲಿ ಯಾತ್ರಿಕರು ಸುರಕ್ಷಿತವಾಗಿದ್ದಾರೆ ಎಂದು ಯಾತ್ರಿಕ ಗುರುನಾಥ ‌ಕುಲಕರ್ಣಿ ತಿಳಿಸಿದ್ದಾರೆ. ಗಾಣಗಾಪುರ ತಂಡವು ಜುಲೈ 3ರಂದು ಕಲಬುರಗಿಯಿಂದ ಅಮರನಾಥ ಯಾತ್ರೆಗೆ ತೆರಳಿತ್ತು. ಶುಕ್ರವಾರ ಸಂಜೆ ಅಮರನಾಥ ಶಿವಲಿಂಗದ ದರ್ಶನ ಕೂಡಾ ಪಡೆದಿದ್ದರು. ಈಗ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಜಯಪುರದವರು ಯಾರೂ ಸಂಕಷ್ಟಕ್ಕೆ ಸಿಲುಕಿಲ್ಲ

ವಿಜಯಪುರ ಜಿಲ್ಲೆಯ ಯಾವುದೇ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿಲ್ಲ. ಇದುವರೆಗೂ ರಾಜ್ಯ ಕಚೇರಿಯ ಕಂಟ್ರೋಲ್ ರೂಂಗೆ ಒಟ್ಟು 16 ರೆಸ್ಕ್ಯೂ ಕರೆಗಳು ಬಂದಿವೆ. ಅದರಲ್ಲಿ ವಿಜಯಪುರ ಜಿಲ್ಲೆಯವರು ಯಾರೂ ಇಲ್ಲ. ಆದಾಗ್ಯೂ ಜಿಲ್ಲಾಡಳಿತ ಈ ಕುರಿತು ಮಾಹಿತಿ ಕಲೆಹಾಕುವಲ್ಲಿ ನಿರತವಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಮಾಹಿತಿ ನೀಡಿದ್ದಾರೆ.

ಸಂಕಷ್ಟದಲ್ಲಿ ಕಾಫಿ ನಾಡಿನ ಯಾತ್ರಿಕರು

ಚಿಕ್ಕಮಗಳೂರು ಜಿಲ್ಲೆಯ 70ಕ್ಕೂ ಹೆಚ್ಚು ಯಾತ್ರಿಕರು ಅಮರನಾಥದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಭಕ್ತರು ಯಾತ್ರೆ ಕೈಗೊಂಡಿದ್ದರು. ಸದ್ಯಕ್ಕೆ ಆರ್ಮಿ ಏರ್‌ಬೇಸ್‌ನಲ್ಲಿ ರಕ್ಷಣೆ ಪಡೆಯುತ್ತಿರುವ ಯಾತ್ರಿಕರು ಸುರಕ್ಷಿತವಾಗಿದ್ದಾರೆ. ಜಿಲ್ಲಾಡಳಿತ ಯಾತ್ರಿಕರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

ಕರ್ನಾಟಕ ಸರ್ಕಾರದಿಂದ ಸಹಾಯವಾಣಿ

ಅಮರನಾಥ ಯಾತ್ರೆಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಜಮ್ಮು ಕಾಶ್ಮೀರ ಸರ್ಕಾರವು ಸಹಾಯಹಸ್ತ ಚಾಚಿದೆ. NDRF, ITBP, ಭಾರತೀಯ ಸೇನೆ, CRPF, BSF, SDRF ಮತ್ತು ಜಮ್ಮು ಮತ್ತು ಕಾಶ್ಮೀರ್ ಪೋಲಿಸ್ ಜಂಟಿ ರಕ್ಷಣಾ ಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಅಮರನಾಥ ಗುಹೆಯ ಬಳಿ ಕರ್ನಾಟಕದ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 080-1070, 22340676, ಇಮೇಲ್: incomedmkar@gmail.com ಸಂಪರ್ಕಿಸಬಹುದು.

ಅದೇ ರೀತಿ ಅಮರನಾಥ ಯಾತ್ರೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಯಾತ್ರಾರ್ಥಿಗಳು ಈ ಕೆಳಗಿನ ಸಹಾಯವಾಣಿಯನ್ನು ಸಂಪರ್ಕಿಸಿ ನೆರವು ಪಡೆಯಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. ಎನ್‌ಡಿಆರ್‌ಎಫ್‌- 011-23438252, 011-23438253, ಕಾಶ್ಮೀರ ವಿಭಾಗೀಯ ಸಹಾಯವಾಣಿ- 0194-2496240, ದೇಗುಲ ಮಂಡಳಿ ಸಹಾಯವಾಣಿ-0194-23131149, ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC)-080-1070, 22340676, ಇ-ಮೇಲ್-revenuedmkar@gmail.com, seockarnataka@gmail.com ಸಂಪರ್ಕಿಸಬಹುದು.

ಎನ್‌ಡಿಆರ್‌ಎಫ್‌ಗೆ 250 ಯಾತ್ರಿಗಳ ಮಾಹಿತಿ

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಯಾತ್ರಿಕರ ಸಂಬಂಧಿಕರಿಂದ ಈವರೆಗೆ 15 ಕರೆಗಳನ್ನು ಸ್ವೀಕರಿಸಿದೆ. ಸದ್ಯಕ್ಕೆ, ಎಸ್‌ಇಒಸಿಯಲ್ಲಿ ಕರ್ನಾಟಕದ ಸುಮಾರು 250 ಯಾತ್ರಿಗಳ ವಿವರಗಳನ್ನು ಎನ್‌ಡಿಆರ್‌ಎಫ್ ಕಂಟ್ರೋಲ್ ರೂಮ್, ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನ ವಿಭಾಗೀಯ ಆಯುಕ್ತರ ಕಚೇರಿ, ಕಾಶ್ಮೀರ ಸರ್ಕಾರ ಮತ್ತು ಅಮರನಾಥ ದೇಗುಲ ಮಂಡಳಿಗಳಿಗೆ ಹಂಚಿಕೊಳ್ಳಲಾಗಿದೆ.

ಜಮ್ಮು-ಕಾಶ್ಮೀರ ಸರ್ಕಾರ ಮತ್ತು ಎನ್‌ಡಿಆರ್‌ಎಫ್ ಯಾತ್ರಾರ್ಥಿಗಳಿಗಾಗಿ ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ. ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಯಾತ್ರಿಕರು ತೆರಳಿದ್ದಾರೆ ಎಂದು ಕೆಎಸ್‌ಡಿಎಂಎ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.

ಇದನ್ನೂ ಓದಿ | ಮನೆಯೊಳಗೆ ನೀರು ನುಗ್ಗಿದರೆ ₹10 ಸಾವಿರ ಪರಿಹಾರ: ಮಳೆ ಹಾನಿ ಕುರಿತು ಸಿಎಂ ಬೊಮ್ಮಾಯಿ ಸಭೆ

Exit mobile version