ಬೆಂಗಳೂರು: ಸೇನಾ ನೇಮಕಾತಿಗೆ ಸಂಬಂಧಿಸಿದ ಅಗ್ನಿಪಥ್ ಯೋಜನೆ ವಿರೋಧಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಕೇವಲ ನಾಲ್ಕು ವರ್ಷಗಳ ಅಲ್ಪಾವಧಿಗೆ ಸೈನಿಕರನ್ನು ನೇಮಕ ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರ ಭಾರತೀಯ ಸೇನೆಗೆ ಮಾರಕವಾಗಲಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಕೂಡಲೇ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಹುದ್ದೆ ಪೂರ್ಣಾವಧಿ ಸೇವೆಯಿಂದ ಕೂಡಿರಲಿ
ಮೈಸೂರು: ಅಗ್ನಿಪಥ್ ಯೋಜನೆ ವಿರೋಧಿಸಿ ಮೈಸೂರಿನ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಾಯಿತು. ರಾಮಸ್ವಾಮಿ ವೃತ್ತದಲ್ಲಿ ಮಾಜಿ ಶಾಸಕ ಎಂ. ಕೆ. ಸೋಮಶೇಖರ್ ನೇತೃತ್ವದಲ್ಲಿ ಕೆ. ಆರ್. ಕ್ಷೇತ್ರದ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಎಫ್‌ಟಿಎಸ್ ವೃತ್ತದಲ್ಲಿ ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸೇನೆಯ ಯಾವುದೇ ಹುದ್ದೆ ಪೂರ್ಣಾವಧಿ ಸೇವೆಯಿಂದ ಕೂಡಿರಬೇಕು. ಅಗ್ನಿಪಥ್ ಯೋಜನೆ ಮೂಲಕ ಕೇವಲ ನಾಲ್ಕು ವರ್ಷಗಳ ಸೇವಾವಧಿಗೆ ನೇಮಕ ಮಾಡಿಕೊಳ್ಳುವುದು ಸರಿಯಲ್ಲ. ಹಾಗಾಗಿ ಅಗ್ನಿಪಥ್ ಯೋಜನೆ ರದ್ದುಗೊಳಿಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಕೇಂದ್ರದಿಂದ ಯುವ ಜನರ ದಾರಿ ತಪ್ಪಿಸುವ ಕೆಲಸ
ಬಳ್ಳಾರಿ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಗೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಗ್ರಾಮೀಣ ಶಾಸಕ ನಾಗೇಂದ್ರ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಶಾಸಕ ನಾಗೇಂದ್ರ ಮಾತನಾಡಿ, ಅಗ್ನಿಪಥ ಯೋಜನೆ ಮೂಲಕ ಯುವ ಜನರ ದಾರಿ ತಪ್ಪಿಸುವ ಕೆಲಸವನ್ನು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಾಡುತ್ತಿದೆ. ಉದ್ಯೋಗ ನೀಡುವ ನೆಪದಲ್ಲಿ ಇಂತಹ ಯೋಜನೆ ರೂಪಿಸಿದೆ. ಯೋಜನೆ ಸರಿಯಾಗಿದ್ದರೆ ಬಿಹಾರ, ಉತ್ತರ ಪ್ರದೇಶ, ಪಂಜಾಬ್‌ನಲ್ಲಿ ಏಕೆ ಪ್ರತಿಭಟನೆ ನಡೆಯುತ್ತದೆ? ರೈತ ವಿರೋಧಿ ಕಾನೂನನ್ನು ಹಿಂಪಡೆದಂತೆ ಅಗ್ನಿಪಥ ಯೋಜನೆಯನ್ನೂ ಹಿಂಪಡೆಯಬೇಕೆಂದು ಆಗ್ರಹಿಸಿದರು.
ನಿರಂಕುಶ ಪ್ರಭುತ್ವದ ಮಾದರಿಯಲ್ಲಿ ಮೋದಿ ಸರ್ಕಾರ ಆಡಳಿತ
ಶಿವಮೊಗ್ಗ: ಅಗ್ನಿಪಥ್ ಯೋಜನೆ ವಿರೋಧಿಸಿ ಶಿವಮೊಗ್ಗದ ಶಿವಪ್ಪ ನಾಯಕ ಪ್ರತಿಮೆ ಬಳಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್. ಎಸ್. ಸುಂದರೇಶ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಂದರೇಶ್ ಮಾತನಾಡಿ, ಯುವಕರ ಜತೆ ಬಿಜೆಪಿ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಅಗ್ನಿಪಥ್ ಯೋಜನೆಯನ್ನು ಹಿಂಪಡೆಯುವವರೆಗೆ ಕಾಂಗ್ರೆಸ್ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು. ನಂತರ ಪ್ರತಿಭಟನಾಕಾರರು ಎಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜೈ ಜವಾನ್ ಮೌಲ್ಯಗಳಿಗೆ ಅವಮಾನ ಮಾಡುವ, ದಿಕ್ಕು ದೆಸೆಯಿಲ್ಲದ ಅಗ್ನಿಪಥ್ ಯೋಜನೆಯನ್ನು ತಕ್ಷಣ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.
ಅಗ್ನಿಪಥ್ ಯೋಜನೆ ವಿರೋಧಿಸಿ ಜಿಲ್ಲೆಯ ಸೊರಬ ತಾಲೂಕು ಕಚೇರಿ ಎದುರು ಮಾಜಿ ಶಾಸಕ ಮಧು ಬಂಗಾರಪ್ಪ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಮನೆ ಹಾಳು ಕೆಲಸ ಮಾಡುವವರು ಯಾರಾದರೂ ಇದ್ದರೆ ಅದು ಬಿಜೆಪಿಯವರು ಮಾತ್ರ. ಮೋದಿ ಸರ್ಕಾರ ಆಡಳಿತ ನಿರಂಕುಶ ಪ್ರಭುತ್ವದ ಮಾದರಿಯಲ್ಲಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ | Agneepath | ಅಗ್ನಿಪಥ್ ಯೋಜನೆ ಕಿಚ್ಚು: ರಾಜ್ಯದಲ್ಲೂ ಹೈ ಅಲರ್ಟ್ ಆದ ರೈಲ್ವೇ ಪೊಲೀಸರು
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ: ಅಗ್ನಿಪಥ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಹಾವೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಮೈಲಾರಮಹದೇವಪ್ಪ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಿಬಿ ರಸ್ತೆಯ ಮೂಲಕ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಸಾಗಿತು. ನೂರಾರು ಕೈ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಯೋಜನೆಯನ್ನ ಹಿಂಪಡೆಯುವಂತೆ ಒತ್ತಾಯ ಮಾಡಿದರು.
ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ: ತುಮಕೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿ ತಕ್ಷಣವೇ ಅಗ್ನಿಪಥ್ ಯೋಜನೆ ಕೈ ಬಿಡುವಂತೆ ಆಗ್ರಹಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ವಕ್ತಾರ ಮುರುಳಿಧರ ಹಾಲಪ್ಪ, ಮುಖಂಡರಾದ ಇಕ್ಬಾಲ್ ಅಹಮದ್ ಮತ್ತಿರರು ಇದ್ದರು.
ಬಾಗಲಕೋಟೆ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ: ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಾಗಲಕೋಟೆಯ ನವನಗರದ ಮಿನಿವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವ ಎಚ್.ವೈ. ಮೇಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮುಖಂಡರಾದ ದೇವರಾಜ್ ಪಾಟಿಲ್, ನಾಗರಾಜ್ ಹದ್ಲಿ ಮತ್ತಿತರರು ಇದ್ದರು.
ಕಾರ್ಯಕರ್ತರನ್ನು ಕರೆತರಲು ಮುಖಂಡರ ಹೆಣಗಾಟ: ಧಾರವಾಡದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಕಾರ್ಯಕರ್ತರನ್ನು ನಿಯಂತ್ರಿಸಲು ಮುಖಂಡರು ಹೆಣಗಾಡಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆಗೆ ಜಿಲ್ಲಾ ಕಾಂಗ್ರೆಸ್ ಕರೆಕೊಟ್ಟಿತ್ತು. ಅಗ್ನಿಪಥದ ಬದಲು ವೈಯುಕ್ತಿಕ ಟೀಕೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪಾಟೀಲ್ ಇಳಿದರು. ಕಾಟಾಚಾರಕ್ಕೆ ಪ್ರತಿಭಟನೆ ಬೇಡ ಎಂದು ಹೇಳಿದ ಎಐಸಿಸಿ ಸದಸ್ಯ ಪಿಎಚ್ ನೀರಲಕೇರಿ ಮೇಲೆ ಅನೀಲ್ ಪಾಟೀಲ್ ಸಿಟ್ಟಾಗಿದ್ದು ಕಂಡುಬಂತು.
ಇದನ್ನೂ ಓದಿ | ಅಗ್ನಿಪಥ್‌ಗೆ ಭರ್ಜರಿ ಡಿಮಾಂಡ್, ವಾಯುಪಡೆಯ 3,000 ಹುದ್ದೆಗಳಿಗೆ 3 ದಿನಗಳಲ್ಲಿ 56,960 ಅರ್ಜಿ ಸ್ವೀಕಾರ