ಕೋಲಾರ: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರಿಗೆ ಹಾಹಾಕಾರವಿದ್ದರೂ ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ಜನಹಿತ ಮರೆತಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ. ಗಣೇಶ ಹಬ್ಬದ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ (BJP State Tour) ಮಾಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲು ಬಿಜೆಪಿ ಹಮ್ಮಿಕೊಂಡಿರುವ ರಾಜ್ಯ ಪ್ರವಾಸಕ್ಕೆ ಮುಳಬಾಗಿಲಿನ ಕುರುಡುಮಲೆ ಗಣಪತಿ ದೇವಾಲಯದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಇದೆ, ಆದರೂ ಸಿದ್ದರಾಮಯ್ಯ ಪಕ್ಕದ ರಾಜ್ಯಕ್ಕೆ ನೀರು ಬಿಟ್ಟಿದ್ದಾರೆ. ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡುವುದು ಬಿಟ್ಟು ಪತ್ರ ಬರೆದುಕೊಂಡು ದೊಂಬರಾಟ ಆಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಈ ಬಾರಿಯೂ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಈ ಹಿನ್ನೆಲೆ ದೇವರ ಅಶೀರ್ವಾದ ಪಡೆದುಕೊಳ್ಳಲು ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ. ರಾಜ್ಯದಲ್ಲಿ ನೀರಾವರಿ, ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿದ್ದು, ಹೊಸದಾಗಿ ಎಲ್ಲೂ ಒಂದು ಕಿಲೋ ಮೀಟರ್ ರಸ್ತೆ ಮಾಡಿಲ್ಲ. ನಾವು ಮುಂದೆ ಮಾಡುವ ಅಭಿವೃದ್ಧಿ ಕಾರ್ಯಗಳಿಗೆ ಗಮನ ಕೊಡುತ್ತೇವೆ. ತಮಿಳುನಾಡಿನ ಒತ್ತಾಯಕ್ಕೆ ಮಣಿದು ನೀರು ಬಿಡುತ್ತಿದ್ದಾರೆ. ಸರ್ಕಾರ ಕಾವೇರಿ ನೀರನ್ನು ಕದ್ದು ಮುಚ್ಚಿ ಬಿಡುತ್ತಿರುವುದು ಖಂಡನೀಯ. ಈ ಬಗ್ಗೆ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ | Kalyana Karnataka : ಕಲ್ಯಾಣ ಕರ್ನಾಟಕದ ಶಿಕ್ಷಣಕ್ಕಾಗಿ 750 ಕೋಟಿ ರೂ.: ಸಿಎಂ ಸಿದ್ದರಾಮಯ್ಯ
ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿಯಾಗಲೆಂದು ಅವರ ಹುಟ್ಟುಹಬ್ಬದಂದು ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು. ಇದೇ ವೇಳೆ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮೈತ್ರಿ ಚರ್ಚೆ ಹಂತದಲ್ಲಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಯಡಿಯೂರಪ್ಪ ಅವರು ರೈತರ ಪರವಾಗಿ ಬಜೆಟ್ ಮಂಡನೆ ಮಾಡಿ, ಹಲವು ಯೋಜನೆ ಜಾರಿ ಮಾಡಿದ್ದರು. ಆದರೆ, ರಾಜ್ಯದಲ್ಲಿ ರೈತರ ವಿರೋಧಿ ಸರ್ಕಾರ ಇದೆ, ಜತೆಗೆ ಭ್ರಷ್ಟಾಚಾರ ಹೆಚ್ಚಾಗಿದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕು ಎಂದು ಯಡಿಯೂರಪ್ಪ ಕರೆ ನೀಡಿದ್ದರು. ಹಾಗಾಗಿ ಇಂದಿನಿಂದ ಕುರುಡು ಮಲೆಯಿಂದ ಹೋರಾಟ ಆರಂಭವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | CM Siddaramaiah : ಯತೀಂದ್ರರಿಂದ ವರ್ಗಾವಣೆ ಲೂಟಿ; ಕುರುಡು ಮಲೆಯಲ್ಲಿ ಸಿದ್ದರಾಮಯ್ಯ ಪ್ರಮಾಣಕ್ಕೆ ಈಶ್ವರಪ್ಪ ಸವಾಲು
ಉಚಿತ ವಿದ್ಯುತ್ ಕೊಡುತ್ತೇವೆ ಎಂದು ನಿರಂತರವಾಗಿ ವಿದ್ಯುತ್ ಕಡಿತ ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ನೀವು ಕರ್ನಾಟಕ ರೈತರ ಹಿತರಕ್ಷಣೆ ಮಾಡುತ್ತಿಲ್ಲ. ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದ್ದೀರಿ. ಹಾಗಾಗಿ ನೀವು ತಮಿಳುನಾಡಿನ ಮುಖ್ಯಮಂತ್ರಿನಾ ಎಂದು ನಾನು ಕೇಳುತ್ತೇನೆ. ಸರ್ಕಾರ ಬಂದು ಕೆಲವೇ ದಿನಗಳಲ್ಲಿ ಜನರು ಬಂದ್ ಮಾಡುತ್ತಿದ್ದಾರೆ. ಎಸ್ಸಿ-ಎಸ್ಟಿ ಯೋಜನೆ ಹಣ ಬೇರೆ ಕೆಲಸಕ್ಕೆ ಬಳಕೆಗೆ ಮುಂದಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಸಲಹೆ ಮತ್ತು ಅವರ ನೇತೃತ್ವದಲ್ಲಿ ರಾಜ್ಯ ಪ್ರವಾಸ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ ನಾವು ಗೆಲುವು ಪಡೆಯುತ್ತೇವೆ ಎಂದು ತಿಳಿಸಿದರು.