ಬೆಂಗಳೂರು: ವಿಧಾನಸೌಧದ ಎದುರು ನಾಡಪ್ರಭು ಕೆಂಪೇಗೌಡ ಮತ್ತು ಜಗಜ್ಯೋತಿ ಬಸವೇಶ್ವರರ ಪ್ರತಿಮೆಗಳನ್ನು ಸ್ಥಾಪಿಸುವ ಸಂಬಂಧ ಕಂದಾಯ ಸಚಿವ ಆರ್. ಅಶೋಕ್ ಮತ್ತು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀಲಿನಕ್ಷೆ ವೀಕ್ಷಿಸಿದ ಬಳಿಕ, ಪ್ರತಿಮೆಗಳನ್ನು (Statues at Vidhana Soudha) ಸ್ಥಾಪಿಸುವ ಸ್ಥಳ ಪರಿಶೀಲನೆ ನಡೆಸಿದರು.
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಹಾಗೂ ಬಸವಣ್ಣನವರ ಪ್ರತಿಮೆಗಳ ಮಾದರಿಯನ್ನು ಸಿದ್ಧಪಡಿಸಿ ವಿಧಾನಸೌಧದ ಮುಂಭಾಗದಲ್ಲಿ ಸೂಕ್ತ ಸ್ಥಳ ನಿಗದಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿತ್ತು. ಅದರಂತೆ ಅಧಿಕಾರಿಗಳು ಸಿದ್ಧಪಡಿಸಿದ್ಧ ನೀಲಿ ನಕ್ಷೆ ಮತ್ತು ಪ್ರತಿಮೆಗಳ ಮಾದರಿಗಳನ್ನು ಸಚಿವರು ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಈ ಪ್ರತಿಮೆಗಳನ್ನು ಆದಷ್ಟು ಶೀಘ್ರವೇ ನಿರ್ಮಿಸಿ, ವಿಧಾನಸೌಧದ ಮುಂಭಾಗ ಶಂಕುಸ್ಥಾಪನೆ ನೆರವೇರಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ನಾಲ್ಕು ಮೀಟರ್ ಎತ್ತರದ ಈ ಎರಡು ಪುತ್ಥಳಿಗಳನ್ನು ಅಶ್ವಾರೂಢ ಭಂಗಿಗಳಲ್ಲಿ ಸ್ಥಾಪಿಸಬೇಕು ಮತ್ತು ಸುತ್ತಮುತ್ತ ಹಸಿರಿನಿಂದ ಕಂಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ. ಕೃಷ್ಣಾರೆಡ್ಡಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | Illegal cash found : ಕಾಂಗ್ರೆಸ್ ವಿಧಾನಸೌಧವನ್ನು ಬ್ಯಾಂಕ್ ಮಾಡಿಕೊಂಡಿತ್ತು; ಸಿಎಂ ಬಸವರಾಜ ಬೊಮ್ಮಾಯಿ