Site icon Vistara News

Puneeth Rajkumar: ಪುನೀತ್ ಸ್ಮಾರಕ ಪುನರಾಭಿವೃದ್ಧಿಗೆ ಕ್ರಮ: ಸಿಎಂ ಸಿದ್ದರಾಮಯ್ಯ

Siddaramaiah with Puneet rajkumar Sculpture

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಸ್ಮಾರಕ ಪುನರಾಭಿವೃದ್ಧಿ ಸಂಬಂಧ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮನವಿಗೆ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Puneeth Rajkumar) ಭರವಸೆ ನೀಡಿದರು.

ಪಿ.ಆರ್.ಕೆ. ಸ್ಟುಡಿಯೋಸ್ ಹಾಗೂ N3K ಡಿಸೈನ್ ಸ್ಟುಡಿಯೋ ವತಿಯಿಂದ ಪ್ಯಾಲೇಸ್ ರಸ್ತೆಯ ರಾಡಿಸನ್ ಬ್ಲ್ಯೂ – ಏಟ್ರಿಯಾದಲ್ಲಿ ಆಯೋಜಿಸಿದ್ದ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಸಂಗ್ರಹಣೀಯ ಶಿಲ್ಪವನ್ನು ಅನಾವರಣಗೊಳಿಸಿ ಮಾತನಾಡಿದರು.

ಪುನೀತ್ ಅಗಲಿಕೆ ಕರುನಾಡಿಗೆ ಆಗಿರುವ ನಷ್ಟ

ಪುನೀತ್ ರಾಜಕುಮಾರ್ ಅವರು ನನ್ನನ್ನು ಸೇರಿ ದೊಡ್ಡವರನ್ನು, ಕಲಾವಿದರನ್ನು ಗೌರವದಿಂದ ಕಾಣುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು. ಕಿರಿಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರನ್ನು ಕಳೆದುಕೊಂಡಿರುವುದು ಇಡೀ ಕರುನಾಡಿಗೆ ಆಗಿರುವ ನಷ್ಟ. ಆ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಉತ್ತಮ ನಟ, ಹಾಗೂ ಮಾನವೀಯತೆಯುಳ್ಳ ವ್ಯಕ್ತಿಯನ್ನು ನಾಡು ಕಳೆದುಕೊಂಡಿದೆ. ಅವರ ಪ್ರತಿಮೆಯಿಂದ ಪುನೀತ್ ಅವರನ್ನು ಇನ್ನಷ್ಟು ಸ್ಮರಿಸುವ ಕೆಲಸವಾಗಿದೆ ಎಂದರು.

ಇದನ್ನೂ ಓದಿ | Yuvaraja College: ಪಿಯುಸಿ ಸೆಕೆಂಡ್ ಕ್ಲಾಸು, ಅದ್ಕೇ ಮೆಡಿಕಲ್‌‌ ಸೀಟ್ ಸಿಗಲಿಲ್ಲ ಎಂದ ಸಿದ್ದರಾಮಯ್ಯ

ರಾಜ್ ಕುಟುಂಬ ಕೆಟ್ಟದ್ದನ್ನು ಬಯಸಿಲ್ಲ

ರಾಜಕುಮಾರ್ ಕುಟುಂಬದವರು ಎಂದಿಗೂ ಕೆಟ್ಟದ್ದನ್ನು ಬಯಸಿಲ್ಲ. ಕೆಟ್ಟ ಪದ ಬಳಸಿಲ್ಲ. ಪುನೀತ್ ರಾಜಕುಮಾರ್, ಅವರ ತಂದೆ ರಾಜಕುಮಾರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದರು. ರಾಜ್ ಕುಮಾರ್ ಜನಪ್ರಿಯ ಮೇರು ನಟ. ಪುನೀತ್ ತೀರಿಕೊಂಡಾಗ ಜನರ ಭಾವನೆಗಳನ್ನು ಕಂಡಾಗ, ರಾಜ್ ಕುಮಾರ್ ಅವರಿಗಿಂತಲೂ ಜನಪ್ರಿಯರಾಗಿದ್ದರು ಎಂಬ ಭಾವನೆ ಬಂದಿತು. ಪುನೀತ್ ಮರಣ ಹೊಂದಿದಾಗ ನಮ್ಮ ಮನೆಯಲ್ಲಿಯೇ ಯಾರೋ ಒಬ್ಬರು ತೀರಿಕೊಂಡಿದ್ದಾರೆ ಎಂಬಂತಿತ್ತು. ಎಲ್ಲಾ ಊರುಗಳಲ್ಲಿ ಪ್ರತಿಮೆ ಸ್ಥಾಪಿಸಿ, ಕಟೌಟ್ ಹಾಕಿ ಗೋಳಾಡಿದ್ದು ಕಂಡಾಗ ಪುನೀತ್ ಅವರ ಜನಪ್ರಿಯತೆ, ಅಪಾರ ಅಭಿಮಾನಿಗಳನ್ನು ಪಡೆದಿದ್ದರು ಎಂದು ತಿಳಿಯುತ್ತದೆ. ಬಹಳ ಬೇಗ ನಮ್ಮನ್ನು ಅಗಲಿದರು. ಅವರು ಬದುಕಿದ್ದರೆ, ನಾವು ನಿರೀಕ್ಷೆ ಮಾಡದಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರು ಎಂದರು.

ಅಪರೂಪದ ವ್ಯಕ್ತಿತ್ವ

ರಾಜ್ ಕುಟುಂಬಕ್ಕೆ ಪುನೀತ್ ಸಾವಿನಿಂದಾದ ನೋವನ್ನು ಭರಿಸುವ ಶಕ್ತಿ ದೇವರು ಯಾವಾಗಲೂ ನೀಡಬೇಕು. ಪುನೀತ್ ರಾಜ್ ಕುಮಾರ್ ಮನೆ ಮನೆಯ ಮಗ. ಅವರನ್ನು ಗೌರವಿಸದವರೇ ಇಲ್ಲ. ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಯನ್ನು ಇಂದು ಅನಾವರಣ ಮಾಡಲಾಗಿದೆ. ಡಾ.ಪುನೀತ್ ರಾಜ್ ಕುಮಾರ್ ಅವರು ಅಪರೂಪದ ವ್ಯಕ್ತಿತ್ವ. ಸರಳ, ಸಜ್ಜನಿಕೆ, ವಿನಯ ಕಾಣುವುದು ವಿರಳ. ಸಾಮಾನ್ಯ ಜನರು, ಸಂಕಷ್ಟದಲ್ಲಿದವರಿಗೆ ಸ್ಪಂದಿಸುವ ಉದಾತ್ತ ಭಾವನೆಯ ಪುನೀತ್‍ರಗಿದ್ದ ಅಭಿಮಾನಿ ಬಳಗ ಬಹಳ ದೊಡ್ಡದು. ಅವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾಗ ಜನರು ತಮ್ಮ ಮನೆಯ ಸದಸ್ಯನನ್ನೇ ಕಳೆದುಕೊಂಡಷ್ಟು ದು:ಖಿಸಿದ್ದರು ಎಂದು ಸ್ಮರಿಸಿದರು.

ಇದನ್ನೂ ಓದಿ | Congress Guarantee: ಗ್ಯಾರಂಟಿ ಯೋಜನೆಗಳಿಂದ ಅವಕಾಶ ವಂಚಿತರಿಗೆ ನ್ಯಾಯ: ಸಿಎಂ ಸಿದ್ದರಾಮಯ್ಯ

ರಾಜ್ಯದ ಪ್ರತಿ ಮನೆಯಲ್ಲಿಯೂ ಪುನೀತ್ ಭಾವಚಿತ್ರವಿದ್ದು, ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಬಹುಶ: ಇನ್ನೊಬ್ಬ ಪುನೀತ್ ರಂಥ ವ್ಯಕ್ತಿಯನ್ನು ಕಾಣುವುದು ಕಷ್ಟ. ರಾಜಕುಮಾರ್ ಕುಟುಂಬದವರು ಸದಾ ವಿನಯವಂತರು. ರಾಜಕುಮಾರ್, ಅವರ ಮಕ್ಕಳು ಮಾನವೀಯತೆಯ ಪ್ರತಿರೂಪವಾಗಿದ್ದಾರೆ. ಮಾನವೀಯತೆಯುಳ್ಳವರು ಮತ್ತೊಬ್ಬರನ್ನು ಪ್ರೀತಿ ಗೌರವಗಳಿಂದ ಕಾಣುತ್ತಾರೆ. ರಾಜ್ ಕುಟುಂಬದವರೊಂದಿಗೆ ತಮಗೆ ಉತ್ತಮ ಒಡನಾಟವಿದೆ ಎಂದು ತಿಳಿಸಿದರು.

Exit mobile version