Site icon Vistara News

Cauvery Water Dispute: ನೀರಾವರಿ ಸಂಬಂಧ ಪರಿಣತರ ಸಲಹಾ ಸಮಿತಿ ರಚಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ನಾಳೆಯೇ ನಮ್ಮ ಬಳಿ ನೀರು ಇಲ್ಲ, ನೀರು ಬಿಡಲು ಸಾಧ್ಯವಿಲ್ಲ ಎಂದು ಮರು ಪರಿಶೀಲನಾ ಅರ್ಜಿ ಹಾಕಲಾಗುವುದು. ಮುಖ್ಯವಾಗಿ ರಾಜ್ಯದ ನೀರಾವರಿಗೆ (Cauvery Water Dispute) ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ, ಸೂಚನೆ ನೀಡಲು ಪರಿಣತರ ಸಲಹಾ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್, ಹೈಕೋರ್ಟ್ ಮಾಜಿ ನ್ಯಾಯಮೂರ್ತಿಗಳ ಜತೆಗಿನ ಸಭೆಯ ಬಳಿಕ ಮಾತನಾಡಿದ ಅವರು, ಅಂತಾರಾಜ್ಯ ಜಲವಿವಾದಗಳ ಬಗ್ಗೆ ಸರ್ಕಾರಕ್ಕೆ ಸಲಹೆ ಸೂಚನೆ, ಕಾನೂನು ತಂಡಕ್ಕೆ ಮಾಹಿತಿ ನೀಡಲು ಕೂಡ ಸಮಿತಿ ಅಗತ್ಯ ಎನ್ನುವ ಸಲಹೆ ಬಂದಿದೆ. ಇದರಂತೆ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.

ಇದನ್ನೂ ಓದಿ | Cauvery water dispute : ಸುಪ್ರೀಂ ಕೋರ್ಟ್, ಕಾವೇರಿ ಪ್ರಾಧಿಕಾರದ ಮುಂದೆ ರಿವಿಶನ್ ಪಿಟಿಷನ್ ಎಂದ ಸಿಎಂ

ರಾಜ್ಯದಲ್ಲಿ ಶಾಂತಿಯುತವಾಗಿ ಬಂದ್ ನಡೆದಿದ್ದು, ಇದಕ್ಕೆ ಸಹಕರಿಸಿದ ಸಾರ್ವಜನಿಕರನ್ನು, ಸಂಘ ಸಂಸ್ಥೆಗಳಿಗೆ, ಅಭಿನಂದನೆ ಎಂದ ಸಿಎಂ ಅವರು, ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದ ಅಧಿಕಾರಿಗಳಿಗೂ ಕೂಡ ಧನ್ಯವಾದ ಸಲ್ಲಿಸಿದರು.

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಮಾಜಿ ಅಡ್ವೊಕೇಟ್ ಜನರಲ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು. ಅವರ ಅನುಭವದ ಆಧಾರದ ಮೇಲೆ ಕೆಲವು ಅಭಿಪ್ರಾಯ, ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳನ್ನು ಪರಿಗಣಿಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುವ ಬಗ್ಗೆ ಎರಡೂ ಸಮಿತಿಗಳ ಮುಂದೆ ನಮ್ಮಲ್ಲಿ ನೀರು ಇಲ್ಲ. ಹಾಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿದೆ. ಹಳೇ ಬಾಕಿ ಸರಿದೂಗಿಸಬೇಕು ಎಂದು 3000 ಕ್ಯೂಸೆಕ್ ನೀಡಲು ಸೂಚಿಸಿದ್ದಾರೆ. ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ಮರುಪರಿಶೀಲನಾ ಅರ್ಜಿ ಹಾಕುವಂತೆಯೂ ಸೂಚಿಸಿದ್ದಾರೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆಗೆ ತೀವ್ರವಾಗಿ ಒತ್ತಾಯ

ಮೇಕೆದಾಟು ಯೋಜನೆಯ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತಾಪ ಮಾಡಬೇಕು. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆ ಇಲ್ಲ. ಹಾಗಾಗಿ ತೀವ್ರವಾಗಿ ಇದನ್ನು ಮಂಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಮೇಕೆದಾಟು ಬ್ಯಾಲೆನ್ಸಿಂಗ್ ಜಲಾಶಯವಾಗಿ 67 ಟಿಎಂಸಿ ನೀರು ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಲಿದೆ. ವಿದ್ಯುತ್ ಹಾಗೂ ಕುಡಿಯುವ ನೀರಿಗೆ ಅದನ್ನು ಬಳಸಲಾಗುವುದು. ಸಂಕಷ್ಟ ಬಂದಾಗ ತಮಿಳುನಾಡಿಗೆ ನೀರು ಬಿಡಬಹುದು ಎಂದು ಸಲಹೆ ನೀಡಿದ್ದಾರೆ ಸಿಎಂ ತಿಳಿಸಿದರು.

ಇದನ್ನೂ ಓದಿ | Cauvery Water Dispute : ರಾಜ್ಯ ಸರ್ಕಾರಕ್ಕೆ ರೈತರು, ಕಾನೂನು ತಜ್ಞರು ಈಗ ನೆನಪಾದರೇ? ಬೊಮ್ಮಾಯಿ ಖಡಕ್‌ ಪ್ರಶ್ನೆ

ಸಂದರ್ಭ ಬಂದರೆ ವಿಶೇಷ ಅಧಿವೇಶನ ಕರೆಯಲಾಗುವುದು. ಉದ್ದೇಶಪೂರ್ವಕವಾಗಿ ಆದೇಶ ಪಾಲನೆಯಾಗದಿದ್ದಾಗ ಮಾತ್ರ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Exit mobile version