ಚಾಮರಾಜನಗರ: ಇಲ್ಲಿನ ಉಪ್ಪಾರ ಬೀದಿಯಲ್ಲಿ ಗಣೇಶೋತ್ಸವದ ಮೂರ್ತಿ ವಿಸರ್ಜನಾ ಮೆರವಣಿಗೆ ಸಂದರ್ಭ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರ ಮೇಲೆಯೇ ಕಲ್ಲು ತೂರಾಟ ನಡೆದಿದೆ. ಕಲ್ಲೆಸೆತದಿಂದ ಚಾಮರಾಜನಗರ ಕ್ರೈಂ ಪಿಎಸ್‌ಐ ಮಹದೇವ್‌ಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಕ್ ಬಂದ್ ಮಾಡಿ ಎಂದಿದ್ದಕ್ಕೆ!
ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಭಾನುವಾರ ನಡೆದಿತ್ತು. ರಾತ್ರಿ ೧೦ ಗಂಟೆಯಾದರೂ ಮೆರವಣಿಗೆ ಮುಂದುವರಿದಿತ್ತು. ಯುವಕರ ಗುಂಪು ದೊಡ್ಡ ಸೌಂಡ್ ಇಟ್ಟು ಮೈಕ್ ಹಾಕಿ ಡ್ಯಾನ್ಸ್ ಮಾಡುತ್ತಿತ್ತು. ಈ ವೇಳೆ ಎಸ್‌ಐ ಅವರು ರಾತ್ರಿ ಹತ್ತು ಗಂಟೆ ದಾಟಿರುವುದರಿಂದ ಮೈಕ್ ಬಂದ್ ಮಾಡಿ ಎಂದು ಕೇಳಿಕೊಂಡರು. ಆದರೆ, ಯುವಕರು ಇದಕ್ಕೆ ಒಪ್ಪಲಿಲ್ಲ.
ಮೈಕ್ ಸೌಂಡ್ ಬಂದ್ ಮಾಡಲೂ ಇಲ್ಲ, ಸೌಂಡ್ ಕಡಿಮೆ ಮಾಡಲೂ ಇಲ್ಲ. ಬದಲಾಗಿ ಸೌಂಡ್ ಇನ್ನಷ್ಟು ಹೆಚ್ಚಿಸಿದರು. ಈ ನಡುವೆ, ಗುಂಪಿನಲ್ಲಿದ್ದ ಮಹೇಂದ್ರ ಎಂಬಾತ ಪಿಎಸ್‌ಐ ಅವರ ಮೇಲೆ ಕಲ್ಲು ಎಸೆದಿದ್ದಾನೆ. ಗಾಯಗೊಂಡ ಪಿಎಸ್‌ಐ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಲು ತೂರಾಟ ಮಾಡಿದ ಮಹೇಂದ್ರ ಮತ್ತು ಅವನಿಗೆ ಕುಮ್ಮಕ್ಕು ನೀಡಿದವರು ಸೇರಿದಂತೆ 25 ಕ್ಕು ಹೆಚ್ಚು ಯುವಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. 10 ಮಂದಿ ಯುವಕರನ್ನು ಈಗಾಗಲೇ ಬಂಧಿಸಲಾಗಿದೆ.