Site icon Vistara News

Singer Mangli: ಬಳ್ಳಾರಿ ಉತ್ಸವದಲ್ಲಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ; ಲಾಠಿ ಚಾರ್ಚ್‌

Stone pelted at Singer Mangli car at Bellary festival

ಬಳ್ಳಾರಿ: ಖ್ಯಾತ ಬಹುಭಾಷಾ ಗಾಯಕಿ ಮಂಗ್ಲಿ (Singer Mangli) ಕಾರಿನ ಮೇಲೆ ಬಳ್ಳಾರಿಯಲ್ಲಿ ಕಲ್ಲು ತೂರಿದ ಪ್ರಕರಣ ಬೆಳಕಿಗೆ ಬಂದಿದೆ. ಬಳ್ಳಾರಿ ಉತ್ಸವ (Bellary Utsav) ಸಂಬಂಧ ಶನಿವಾರ (ಜ.೨೧) ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರನ್ನು ನೋಡಲು ಕೆಲವರು ಮುಗಿಬಿದ್ದಾಗ ಉಂಟಾದ ಗಲಾಟೆಯಲ್ಲಿ ಕಲ್ಲು ತೂರಾಟ ನಡೆದಿದೆ. ಕಾರಿನ ಗ್ಲಾಸ್‌ ಪುಡಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಚ್‌ (Lathi charge) ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಂಗ್ಲಿ ಕಾರಿನಲ್ಲಿ ಇರಲಿಲ್ಲ ಎನ್ನಲಾಗಿದೆ.

ಬಳ್ಳಾರಿ ಉತ್ಸವ ಸಂಬಂಧ ಮಂಗ್ಲಿ ಬಳ್ಳಾರಿಗೆ ಬಂದಿದ್ದರು. ವೇದಿಕೆಯಲ್ಲಿ ಅವರ ಹಾಡಿಗೆ ಶಿಳ್ಳೆ, ಚಪ್ಪಾಳೆ ಹೊಡೆದು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ, ಅವರು ಕಾರ್ಯಕ್ರಮ ಮುಗಿಸಿ ವಾಪಸಾಗುವಾಗ ನೋಡಬೇಕೆಂದು ಯುವಕರ ದೊಡ್ಡ ಗುಂಪು ಹೊರಟಿದೆ. ಅವರನ್ನು ಹೋಟೆಲ್‌ಗೆ ಕರೆದೊಯ್ಯಲು ಕಾರು ಬಂದಿದ್ದು, ಆ ಕಾರಿಗೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ.

ಇದನ್ನೂ ಓದಿ: Rachita Ram: ರಚಿತಾ ರಾಮ್‌ರನ್ನು ಗಡಿಪಾರು ಮಾಡಿ: ಡಿಂಪಲ್‌ ಕ್ವೀನ್‌ ವಿರುದ್ಧ ಇಷ್ಟೊಂದು ಆಕ್ರೋಶ ಯಾಕೆ?

ಏಕಾಏಕಿ ಕಾರಿನತ್ತ ಅಭಿಮಾನಿಗಳ ತಂಡ ನುಗ್ಗಿದಾಗ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಗಲಾಟೆ ಮಾಡದಂತೆ ತಡೆಯಲು ಹೋದರೂ ಕೇಳಲಿಲ್ಲ. ಈ ಸಂದರ್ಭದಲ್ಲಿ ವೇದಿಕೆ ಹಿಂಭಾಗದಲ್ಲಿರುವ ಮೇಕಪ್ ಟೆಂಟ್‌ಗೆ ನುಗ್ಗಲು ಕೆಲವು ಪುಂಡರು ಮುಂದಾದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ. ಇದರಿಂದ ಸಿಟ್ಟಿಗೆದ್ದು ಮಂಗ್ಲಿ ಅವರ ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ. ಬಳ್ಳಾರಿ ಉತ್ಸವದಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ನಿರೂಪಕಿ ಅನುಶ್ರೀ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು.

ಚಿಕ್ಕಬಳ್ಳಾಪುರ ಉತ್ಸವದಲ್ಲಿ ಕಿರಿಕ್‌

ಈಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ ಉತ್ಸವದಲ್ಲಿ ಮಂಗ್ಲಿ ಅವರ ಬಳಿ ನಿರೂಪಕಿ ಅನುಶ್ರೀ ಎಲ್ಲರಿಗೂ ನಮಸ್ಕಾರ ಹೇಳಲು ಕೇಳಿಕೊಂಡರು. ಆಗ, ತೆಲುಗಿನಲ್ಲಿ ಹೇಳಿದರು. ಆಗ ಕನ್ನಡದಲ್ಲಿ ಹೇಳುವಂತೆ ಅನುಶ್ರೀ ಕೇಳಿಕೊಂಡರು. ಅದಕ್ಕೆ ಮಂಗ್ಲಿ, ಪಕ್ಕದಲ್ಲೇ ಅನಂತಪುರಂ ಇರುವುದರಿಂದ ಎಲ್ಲರಿಗೂ ತೆಲುಗು ಬರುತ್ತದೆ ಎಂದು ಉತ್ತರಿಸಿದರು. ಕೊನೆಗೆ ಅನುಶ್ರೀ ಒತ್ತಾಯ ಮಾಡಿದ್ದರಿಂದ ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಮಂಗ್ಲಿ ಹೇಳಿದರು. ಆದರೆ, ಕನ್ನಡದ ಉತ್ಸವಕ್ಕೆ ಬಂದು ಈ ರೀತಿ ಮಾತನಾಡಿದ್ದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಮುಂದೆ ಅವರಿಂದ ಕನ್ನಡ ಯಾವ ಸಿನಿಮಾಕ್ಕೂ ಹಾಡಿಸಬಾರದು ಎಂದು ಕಿಡಿಕಾರಿದ್ದರು. ಜತೆಗೆ ಅವರನ್ನು ಕಾರ್ಯಕ್ರಮಗಳಿಗೆ ಕರೆಸಬಾರದೆಂದು ಅರ್ಜುನ್‌ ಜನ್ಯ ಅವರಿಗೂ ಮನವಿ ಮಾಡಿದ್ದರು.

ಪಾದರಾಯ ಸಿನಿಮಾಕ್ಕೆ ಮಂಗ್ಲಿ ನಾಯಕಿ!

ಚಕ್ರವರ್ತಿ ಚಂದ್ರಚೂಡ್ ಹಾಗೂ ನಿರ್ದೇಶಕ ನಾಗಶೇಖರ್ ಕಾಂಬಿನೇಶನ್‌ನಲ್ಲಿ “ಪಾದರಾಯ” ಚಿತ್ರ ನಿರ್ಮಾಣವಾಗುತ್ತಿದ್ದು, ಈ ಚಿತ್ರಕ್ಕೆ ಗಾಯಕಿ ಮಂಗ್ಲಿ ನಾಯಕಿಯಾಗಿದ್ದಾರೆ. ಈ ಮೂಲಕ ಹೊಸ ಇನ್ನಿಂಗ್ ಆರಂಭಿಸುತ್ತಿದ್ದಾರೆ. ತೆಲುಗಿನ ಗಾಯಕಿ ಮಂಗ್ಲಿ, ಕನ್ನಡ ಚಿತ್ರವೊಂದರ ತೆಲುಗು ಡಬ್‌ನಲ್ಲಿ ‘ಕಣ್ಣೇ ಅದಿರಿಂದಿ’ ಹಾಡಿನ ಮೂಲಕ ಗಮನಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಖ್ಯಾತಿ ಲಭಿಸಿತ್ತು. ಆ ಮೂಲಕ ಕನ್ನಡ ಸೇರಿದಂತೆ ವಿವಿಧ ಭಾಷೆಯಲ್ಲಿಯೂ ಅವರು ಹಾಡುವ ಮೂಲಕ ಗಮನ ಸೆಳೆದಿದ್ದರು. ಈಗ ನಾಯಕಿಯಾಗಿ ಚಿತ್ರರಂಗಕ್ಕೆ ಮಂಗ್ಲಿ ಪದಾರ್ಪಣೆ ಮಾಡುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: China Covid Crisis : ಚೀನಾದಲ್ಲಿ 80% ಜನತೆಗೆ ಕೋವಿಡ್‌ ಸೋಂಕು

‘ಪಾದರಾಯ’ ಚಿತ್ರ 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾವಾಗಿದೆ. ಆರು ರಾಜ್ಯಕ್ಕೆ ಸಂಬಂಧಿಸಿದ ಘಟನೆ ಇದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.

Exit mobile version