ಶಿವಮೊಗ್ಗ: ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ ಅವರ ಸ್ನೇಹಿತರ ಕಾರಿಗೆ ಶುಕ್ರವಾರ ರಾತ್ರಿ ನಗರದಲ್ಲಿ ಕಲ್ಲು ತೂರಾಟ ನಡೆದಿದೆ. ಭಾರಿ ಆತಂಕ ಮತ್ತು ಚರ್ಚೆಗೆ ಕಾರಣವಾದ ಈ ದಾಳಿಯ ಹಿಂದೆ ಯಾರಿದ್ದಾರೆ ಎನ್ನುವ ಚರ್ಚೆಯೂ ಜೋರಾಗಿದೆ.
ಶಿವಮೊಗ್ಗದ ಸೂಳೆಬೈಲು ಸಮೀಪ ರಾತ್ರಿ 9 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿತ್ತು. ಆರಂಭದಲ್ಲಿ ಹರಿಕೃಷ್ಣ ಅವರ ಕಾರಿಗೇ ಕಲ್ಲು ತೂರಾಟ ನಡೆದಿದೆ ಎಂಬ ಸುದ್ದಿ ಹರಡಿದ್ದರಿಂದ ಭಾರಿ ಆತಂಕ, ಆಕ್ರೋಶ ಸೃಷ್ಟಿಯಾಗಿತ್ತು. ಪೊಲೀಸರು ಕೂಡಲೇ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಹರಿಕೃಷ್ಣ ಅವರು ಬಿಜೆಪಿಯ ಹಿರಿಯ ಮುಖಂಡ, ಮಾಜಿ ಎಂಎಲ್‌ಸಿ ಭಾನುಪ್ರಕಾಶ್ ಅವರ ಪುತ್ರರಾಗಿದ್ದಾರೆ. ಶಿವಮೊಗ್ಗ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ರಾಜಕಾರಣಿಯಾಗಿ ಗಮನ ಸೆಳೆದಿದ್ದಾರೆ. ಇವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿರುವುದು ಒಂದು ಹಂತದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಲೂಬಹುದು ಎಂದು ಭಾವಿಸಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದರು.
ಕಾರು ನನ್ನದಲ್ಲ ಎಂದ ಹರಿಕೃಷ್ಣ
ಈ ನಡುವೆ, ಹರಿಕೃಷ್ಣ ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿ, “ನನ್ನ ಮೇಲೆ ಹಲ್ಲೆ ನಡೆದಿಲ್ಲ, ಕಾರು ಕೂಡ ನನಗೆ ಸೇರಿದ್ದಲ್ಲ. ನನ್ನ ಸ್ನೇಹಿತರ ಮೇಲೆ ರಾತ್ರಿ ಅಟ್ಯಾಕ್ ಆಗಿದೆ. ನಿನ್ನೆ ಸಂಜೆ ವೇಳೆ ನಮ್ಮ ಗೆಳೆಯರು ನಮ್ಮ ಊರಿಗೆ ಬರುವ ವೇಳೆ ಈ ಘಟನೆ ನಡೆದಿದೆ. ಲಾಂಗ್ ನಿಂದ ಕಾರಿಗೆ ಮೂರು ಹುಡುಗರು ದಾಳಿ ಮಾಡಿದ್ದಾರೆ. ʼಅಲ್ಲಾ ಹೂ ಅಕ್ಬರ್ʼ ಎಂದು ಘೋಷಣೆ ಕೂಗಿದ್ದಾರೆ. ಕಾರಿನ ಹಿಂದಿನ ಭಾಗದ ಗಾಜು ಪುಡಿಗೊಳಿಸಿದ್ದಾರೆ.,” ಎಂದು ಹೇಳಿದ್ದಾರೆ.
ಕಲ್ಲು ತೂರಾಟಕ್ಕೆ ಖಂಡನೆ
ಕಾರಿಗೆ ಕಲ್ಲಉ ತೂರಾಟದ ಘಟನೆ ಬಗ್ಗೆ ಸೂಳೆಬೈಲು ಮತ್ತು ಶಿವಮೊಗ್ಗದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ರೀತಿ ಹಲವಾರು ಬಾರಿ ದಾಳಿಗಳು ನಡೆದಿವೆ. ಗಾಂಜಾ ಗ್ಯಾಂಗ್ ಕೂಡ ಆಕ್ಟೀವ್ ಇದ್ದು ಈ ರೀತಿಯ ಘಟನೆಗೆ ಕಾರಣ ಆಗಿರಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದೆ BJP: ಸಿದ್ದರಾಮಯ್ಯ ವಾಗ್ದಾಳಿ