Site icon Vistara News

ಆಡುವ ವೇಳೆ ಬಾಲಕ ತಮಾಷೆಗೆ ಎಸೆದ ಕಲ್ಲಿನಿಂದ ಬಾಲಕಿಯ ಪ್ರಾಣವೇ ಹೋಯಿತು: ಸಂಕಷ್ಟಕ್ಕೆ ಸಿಲುಕಿದ ಅಮಾಯಕ ಹುಡುಗ

death

#image_title

ಶಶಿಧರ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ಸಂಬಂಧದಲ್ಲಿ ಅಣ್ಣ ತಂಗಿಯಾಗಿರುವ ಇಬ್ಬರು ಮಕ್ಕಳು ಆಟವಾಡುವಾಗ ಬಾಲಕ ತಮಾಷೆಗೆ ಎಸೆದ ಕಲ್ಲು ಬಾಲಕಿಯ ಪ್ರಾಣವನ್ನೇ ಕಸಿದುಕೊಂಡಿದೆ. ಗಣಿನಾಡಿನಲ್ಲಿ ನಡೆದ ಈ ಸಿನಿಮೀಯ ಘಟನೆಗೆ ಎರಡು ಬಡ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಪರಸ್ಪರ ತಮಾಷೆ ಮಾಡುತ್ತಾ, ಬಾಲಕ ಕೈಯಲ್ಲಿ ಕಲ್ಲು ಹಿಡಿದು ಆಡುತ್ತಿರುವಾಗ ಬಾಲಕಿಯ ತಲೆಗೆ ಹೊಡೆದಿದ್ದಾನೆ, ಕೆಳಗಡೆ ಬಿದ್ದಾಗ ಕಲ್ಲಿನಿಂದ ತಲೆಗೆ ಪೆಟ್ಟಾಗಿ ಅವಳ ಪ್ರಾಣ ಪಕ್ಷಿ ಹಾರಿ ಹೋಗಲು ಕಾರಣವಾಗಿದೆ.

ಕೊಲೆ ಎಂಬ ಶಬ್ದದ ಅರಿವೇ ಇಲ್ಲದ ಎರಡು ಜೀವಗಳು ಹುಡುಗಾಟ ಮಾಡುತ್ತಾ, ಒಂದು ಜೀವದ ಅಂತ್ಯಕ್ಕೆ ಕಾರಣವಾದ ಮನುಕಲುಕುವ ಘಟನೆಯ ಗಣಿಜಿಲ್ಲೆಯ ಸಂಡೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ವರಸೆಯಲ್ಲಿ ಇಬ್ಬರು ಅಣ್ಣ-ತಂಗಿ. ತಂಗಿ ಜೀವನ ಕೊಲೆಯಲ್ಲಿ ಅಂತ್ಯವಾದರೆ ಅಣ್ಣನು ಕಾನೂನು ಸಂಘರ್ಷಕ್ಕೆ ಒಳಗಾಗಿದ್ದಾನೆ.

ಇಬ್ಬರೂ ಚಿಕ್ಕವರು!
ಒಬ್ಬರು ಪ್ರಾಥಮಿಕ ಶಾಲೆ ಓದುತ್ತಿದ್ದರೆ, ಇನ್ನೊಬ್ಬರು ಹೈಸ್ಕೂಲ್ನಲ್ಲಿ ಓದುತ್ತಿದ್ದರು. ಇಬ್ಬರು ಆಟವಾಡುವ ವಯಸ್ಸು, ಮಾತಿನಲ್ಲಿ ಹುಡುಗಾಟದ ಸಣ್ಣ ವ್ಯತ್ಯಾಸವೇ ಬಾಲಕನನ್ನು ಕಾನೂನು ಸಂಘರ್ಷಕ್ಕೆ ಒಳಗಾಗುವಂತೆ ಮಾಡಿದೆ. ಉಜ್ವಲ ಭವಿಷ್ಯದ ಆಸೆಯನ್ನು ಕಟ್ಟಿಕೊಂಡಿದ್ದ ಬಾಲಕಿಯು ಜೀವನ ಅಂತ್ಯವಾಗಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತೇ ದೃಶ್ಯ?
ಗ್ರಾಮದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಗಾಬರಿಗೊಂಡು ಓಡಾಟದ ದೃಶ್ಯಗಳು ಸೆರೆಯಾಗಿದೆ ಎಂದು ಗ್ರಾಮಸ್ಥರಿಂದ ತಿಳಿದುಬಂದಿದೆ. ಇದು ಘಟನೆಗೆ ಕಾರಣರಾದವರು ಯಾರೆಂಬುದು ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ತಬ್ಬಲಿ ಬಾಲಕನ ಕಾನೂನು ಸಂಘರ್ಷ?
ಘಟನೆಯಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾಗ ಬಾಲಕ ಕಡು ಬಡತನದ ಜೀವನ ಸಾಗಿಸುತ್ತಿದ್ದನು. ತಾಯಿಯನ್ನು ಕಳೆದುಕೊಂಡಿರುವ ಬಾಲಕ ಅಜ್ಜಿಯ ಆಸರೆಯಲ್ಲಿಯೇ ಹೈಸ್ಕೂಲ್ ಓದುತ್ತಿದ್ದಾನೆ, ಆದರೆ, ವಿಧಿಯು ಹುಡುಗಾಟದ ನೆಪದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾಗುವಂತೆ ಮಾಡಿದೆ.

ಎಸ್‌ಪಿ ಹೇಳುವುದೇನು?
ದುಡುಕು ಸ್ವಭಾವ ಬಾಲಕರು ಮತ್ತು ಹುಡುಗರ ಬಗ್ಗೆ ಪೋಷಕರು ಎಚ್ಚರವಹಿಸಬೇಕು, ಅವರ ನಡೆ ನುಡಿಯ ಬಗ್ಗೆ ನಿಗಾವಹಿಸಬೇಕು, ಸರಿತಪ್ಪುಗಳನ್ನು ಜಾಗೃತಿ ಮೂಡಿಸುವ ಕೆಲಸವನ್ನು ಪೋಷಕರು ಮಾಡುವುದರಿಂದ ಇಂತಹ ಅವಘಡಗಳು ತಪ್ಪಿಸಬಹುದು. ಅಗತ್ಯ ಬಿದ್ದರೆ ಹುಡುಗರ ಪೋಷಕರು ತಜ್ಞ ವೈದ್ಯರ ಹತ್ತಿರ ಕೌನ್ಸಿಲಿಂಗ್ ಕೊಡಿವುದು ಮುಖ್ಯ ಎಂದಿದ್ದಾರೆ ಬಳ್ಳಾರಿ ಎಸ್‌ಪಿ ರಂಜೀತ್ ಕುಮಾರ್ ಬಂಡಾರು.

ಇದನ್ನೂ ಓದಿ : Motivational story : ಮುಂಬಯಿಯಲ್ಲಿದ್ದ ಮಗ ಅಪ್ಪನ ಬಳಿ ಆಸರೆ ಕೇಳಿದ್ದು ಯಾರಿಗಾಗಿ?

Exit mobile version