ಬೆಳಗಾವಿ: ಗುರುವಾರ ಬೆಳಗಾವಿಯ ಸುವರ್ಣ ಸೌಧದ ಬಳಿ ಆಯೋಜನೆಯಾದ ಪಂಚಮಸಾಲಿಗಳ ಬೃಹತ್ ಸಮಾವೇಶಕ್ಕೆ (Panchamasali reservation) ಒಂದು ವೇಳೆ ಹರಿಹರ ಮಠದ ಶ್ರೀ ವಚನಾನಂದ ಸ್ವಾಮೀಜಿ ಬಂದರೆ ಅವರಿಗೆ ಅವಕಾಶ ನೀಡಬೇಡಿ!: ಹೀಗೊಂದು ಮನವಿಯನ್ನು ಬೆಳಗಾವಿ ಪೊಲೀಸ್ ಆಯುಕ್ತರಿಗೆ ನೀಡಲಾಗಿತ್ತು!
ಹೌದು, ಪಂಚಮಸಾಲಿ ಮೀಸಲು ಹೋರಾಟ ಈಗ ಎರಡು ಗುಂಪುಗಳಾಗಿದ್ದು, ಒಂದರ ನೇತೃತ್ವವನ್ನು ಕೂಡಲಸಂಗಮ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಹಿಸಿದ್ದರೆ ಇನ್ನೊಂದರ ಸಾರಥಿ ಶ್ರೀ ವಚನಾನಂದ ಸ್ವಾಮೀಜಿ. ಈ ಹಿಂದೆ ಇಬ್ಬರೂ ಜತೆಯಾಗಿ ಹೋರಾಟ, ಪಾದಯಾತ್ರೆಗಳನ್ನು ನಡೆಸಿದ್ದರು. ಆದರೆ, ಬೆಂಗಳೂರಿನವರೆಗೆ ಪಾದಯಾತ್ರೆಯಲ್ಲಿ ಸಾಗಿದ್ದ ಎರಡು ಸ್ವಾಮೀಜಿಗಳ ಪೈಕಿ ವಚನಾನಂದ ಶ್ರೀಗಳು ಕೊನೆಯ ಕ್ಷಣದಲ್ಲಿ ಹರಿಹರ ಮಠಕ್ಕೆ ವಾಪಸಾಗಿದ್ದರು. ಬಳಿಕ ಪ್ರತ್ಯೇಕವಾಗಿ ಹೋರಾಟ ನಡೆಯುತ್ತಿದೆ. ಬಸವ ಜಯ ಮೃತ್ಯುಂಜಯ ಶ್ರೀಗಳು ಸಮಾವೇಶ, ಪಾದಯಾತ್ರೆ ಮೂಲಕ ಬೀದಿ ಹೋರಾಟ ನಡೆಸುತ್ತಿದ್ದರೆ, ವಚನಾನಂದ ಶ್ರೀಗಳು ನೇರವಾದ ಮಾತುಕತೆ, ಒತ್ತಡ ತಂತ್ರಗಳ ಮೂಲಕ ಪ್ರಭಾವ ಬೀರುತ್ತಿದ್ದಾರೆ.
ಗುರುವಾರ ಪಂಚಮಸಾಲಿ ಮೀಸಲು ಹೋರಾಟದಲ್ಲಿ ನಿರ್ಣಾಯಕ ದಿನವೆಂದು ಪರಿಗಣಿತವಾಗಿತ್ತು. ಸುವರ್ಣ ಸೌಧದ ಎರುದು ಬೃಹತ್ ಪಂಚಮಸಾಲಿ ಸಮಾವೇಶ ಆಯೋಜನೆಯಾಗಿದ್ದು, ಅದಕ್ಕೆ ಪೂರಕವಾಗಿ ಪಾದಯಾತ್ರೆಯೂ ಬಂದು ಸೇರಿತ್ತು. ಗುರುವಾರ ಏನೋ ಒಂದು ತೀರ್ಮಾನ ಆಗಿಯೇಬಿಡಬಹುದು ಎಂಬಂತೆ ಬಿಂಬಿಸಲಾಗಿತ್ತು. ಹಾಗಾಗಿ ಸಮಾವೇಶಕ್ಕೆ ಕೊನೆಯ ಕ್ಷಣದಲ್ಲಿ ಹರಿಹರ ಪೀಠದ ವಚನಾನಂದ ಶ್ರೀಗಳು ಬಂದು ಬಿಡಬಹುದು ಎಂದು ಭಾವಿಸಿದ ಕೆಲವರು ಅವರು ಬಂದರೆ ತಡೆಯಿರಿ ಎಂದು ಪೊಲೀಸ್ ಕಮೀಷನರ್‌ಗೆ ಮನವಿ ಕೂಡಾ ಮಾಡಿದ್ದರು!
ಬೆಳಗಾವಿ ನಗರ ಜಿಲ್ಲಾ ಪಂಚಮಸಾಲಿ ಘಟಕದ ಅಧ್ಯಕ್ಷರಾಗಿರುವ ಅರ್.ಕೆ. ಪಾಟೀಲ್ ಅವರು ಆಯುಕ್ತರಿಗೆ ಈ ಮನವಿಯನ್ನು ಸಲ್ಲಿಸಿದ್ದು, ಅದಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಸ್ವೀಕೃತಿಯನ್ನೂ ನೀಡಿದ್ದಾರೆ.
ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಐದರಿಂದ ಆರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಸಮಾವೇಶ ಕಾಲಕ್ಕೆ ವಚನಾನಂದ ಶ್ರೀಗಳು ಆಗಮಿಸುವ ಸಂಭವವಿದೆ. ಒಂದು ವೇಳೆ ಅವರು ಸಮಾವೇಶಕ್ಕೆ ಬಂದರೆ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗುವ ಸಂಭವವಿದೆ. ಹೀಗಾಗಿ ವಚನಾನಂದ ಶ್ರೀಗಳ ಪ್ರವೇಶವನ್ನು ನಿರ್ಬಂಧಿಸಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.
ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿ | ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರವಿಲ್ಲ; 10 ದಿನ ಸಮಯ ಕೇಳಿದ ಸಿಎಂ ಬೊಮ್ಮಾಯಿ